ಮಂಜೇಶ್ವರ: ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ ಇದರ ನೇತೃತ್ವದಲ್ಲಿ ನಡೆಯುವ ಅಯ್ಯಪ್ಪ ಧರ್ಮ ಪ್ರಚಾರ ರಥ ಯಾತ್ರೆಯನ್ನು ಭಜನಾ ಸಂಕೀರ್ತನೆ ಹಾಗೂ ಮೆರವಣಿಗೆಯೊಂದಿಗೆ ಗುರುವಾರ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತಡ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿ ಆಶೀರ್ವಚನ ನೀಡಿದರು. ಧಾರ್ಮಿಕ ಭಾಷಣಗೈದ ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ ಬಾಡೂರು ಇವರು ಪಕ್ಷ ಮರೆತು ಧರ್ಮ ಉಳಿಸಬೇಕಾದ ಅನಿವಾರ್ಯತೆ ಒದಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಧರ್ಮ ರಥ ಯಾತ್ರೆ ಮಂಜೆಶ್ವರ ಮಂಡಲ ಪ್ರದಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಅಯ್ಯಪ್ಪ ಧರ್ಮ ರಥ ಯಾತ್ರೆ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಅಯ್ಯಪ್ಪ ಧರ್ಮ ರಥ ಯಾತ್ರೆ ಮಂಜೆಶ್ವರ ಮಂಡಲ ಅಧ್ಯಕ್ಷ ರಾಮ ಪಾಟಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಮೀಂಜ ಉಪಖಂಡ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಅಯ್ಯಪ್ಪ ಭಜನಾ ಮಂದಿರ ಬಾಳಿಯೂರಿನ ಗುರುಸ್ವಾಮಿ ರಾಧಾಕೃಷ್ಣ ರೈ, ಅಯ್ಯಪ್ಪ ಭಜನಾ ಮಂದಿರ ಚಿನಾಲದ ಗುರುಸ್ವಾಮಿ ಮೋನಪ್ಪ, ಶ್ರೀರಾಮ ಭಜನಾ ಮಂದಿರ ಬೆಜ್ಜದ ಗುರುಸ್ವಾಮಿ ಪ್ರಭಾಕರ ಶೆಟ್ಟಿ, ಮಹಾ ಗಣಪತಿ ಭಜನಾ ಮಂದಿರ ಮದಂಗಲ್ಲಿನ ಅಧ್ಯಕ್ಷ ಶಂಕರನಾರಾಯಣ ಭಟ್ ಹಾಗೂ ಅಯ್ಯಪ್ಪ ಭಜನಾ ಮಂದಿರ ಮೀಯಪದವಿನ ಗುರುಸ್ವಾಮಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು. ಶ್ರೀಧರ ರಾವ್ ಆರ್.ಎಂ ಸ್ವಾಗತಿಸಿ, ಪುಷ್ಪರಾಜ್ ಶೆಟ್ಟಿ ವಂದಿಸಿದರು. ಟಿ.ಡಿ ಸದಾಶಿವ್ ರಾವ್ ನಿರೂಪಿಸಿದರು.


