ಉಪ್ಪಳ: ದೇಶದಲ್ಲಿ ಹಲವಾರು ಕಾರ್ಮಿಕ ಸಂಘಟನೆಗಳಿವೆ, ಆದರೆ ಕಾರ್ಮಿಕರ ಹಿತದೃಷ್ಟಿ ಹಾಗೂ ದುಡಿಯುವ ಸಂಸ್ಠೆಯ ಏಳಿಗೆಯ ಜೊತೆ ರಾಷ್ಟ್ರದ ಅಭಿವೃದ್ಧಿಯನ್ನು ಕೂಡ ಬಯಸುವ ಏಕೈಕ ದೇಶಭಕ್ತ ಕಾರ್ಮಿಕ ಸಂಘಟನೆ ಬಿ ಎಂ ಎಸ್ ಎಂದು ಭಾರತೀಯ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಮುರಳೀಧರನ್ ಹೇಳಿದರು.
ಅವರು ಭಾರತೀಯ ಮಜ್ದೂರ್ ಸಂಘ (ಬಿ ಎಂ ಎಸ್) ಪೈವಳಿಗೆ ಹಾಗೂ ಮಂಗಲ್ಪಾಡಿ ಘಟಕದ ವತಿಯಿಂದ ಮಂಗಳವಾರ ವಿಶ್ವಕರ್ಮ ಜಯಂತಿಯ ಪ್ರಯುಕ್ತ ಬಾಯಾರಲ್ಲಿ ನಡೆದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿರುವ ಹಲವಾರು ಕಾರ್ಮಿಕ ಸಂಘಟನೆಗಳ ವಿರೋಧದಿಂದ ಈಗಾಗಲೇ ಹಲವಾರು ಉದ್ಯಮ ಹಾಗೂ ಸಂಸ್ಥೆಗಳು ಅವನತಿಯತ್ತ ಸಾಗುತ್ತಿವೆ. ಆದರೆ ಭಾರತೀಯ ಮಜ್ದೂರ್ ಸಂಘ (ಬಿ ಎಂ ಎಸ್) ಎಲ್ಲಾ ಕಾರ್ಮಿಕ ಸಂಘಟನೆಗಳಿಗಿಂತಲೂ ಭಿನ್ನವಾಗಿದೆ. ತಾವು ದುಡಿಯುವ ಸಂಸ್ಥೆಯ ಅಭಿವೃದ್ಧಿ ಜೊತೆ ಜೊತೆಗೆ ತಮ್ಮ ಜೀವನ ರೂಪಿಸುವುದಲ್ಲದೆ ದೇಶವನ್ನು ಕಟ್ಟುವ ಕೆಲಸ ಮಾಡುವ ಸಂಘಟನೆಯಾಗಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸೇವಾ ಪ್ರಮುಖ ವಿಶ್ವನಾಥ ಮಾಸ್ತರ್ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ ವಿಶ್ವಕರ್ಮ ಎಲ್ಲರಿಗೂ ಆದರ್ಶ. ಅವರು ಎಲ್ಲಾ ಕೆಲಸಗಳನ್ನು ಮಾಡಲು ಸಾಮಥ್ರ್ಯ ಹೊಂದಿದವರಾಗಿದ್ದರು.ಯಾವುದೇ ಕೆಲಸವಾದರು ಶ್ರೇಷ್ಠ ಎಂಬುದನ್ನು ಇದರಿಂದ ನಾವು ಅರಿಯಬೇಕು. ಮಕ್ಕಳಲ್ಲಿ ಎಲ್ಲಾ ಕೆಲಸಗಳು ಶ್ರೇಷ್ಠ ಮತ್ತು ಯಾವುದೇ ಕೆಲಸ ಕೀಳಲ್ಲ ಎಂಬ ಭಾವನೆಗಳನ್ನು ಬಾಲ್ಯದಲ್ಲೆ ತಿಳಿಸಬೇಕು ಎಂದರು.
ವಿಶ್ವಕರ್ಮ ಜಯಂತಿಯ ಪ್ರಯುಕ್ತ ಬೆಳಿಗ್ಗೆ 10 ಕ್ಕೆ ಬಾಯಾರು ಗ್ರಾಮಾಧಿಕಾರಿಗಳ ಕಚೇರಿ ಪರಿಸರದಿಂದ ಬಾಯಾರು ಪದವಿನ ತನಕ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಪೈವಳಿಕೆ ಬಿ.ಎಂ.ಎಸ್ ನ ಅಧ್ಯಕ್ಷ ನಾರಾಯಣ ಕಳಂದೂರು ವಹಿಸಿದ್ದರು. ವೇದಿಕೆಯಲ್ಲಿ ಬಿ.ಎಂ.ಎಸ್ ಜಿಲ್ಲಾ ಸಹ ಕಾರ್ಯದರ್ಶಿ ದಿನೇಶ ಬಂಬ್ರಾಣ, ಪೈವಳಿಕೆ ಬಿ.ಎಂ.ಎಸ್ ಕಾರ್ಯದರ್ಶಿ ರಾಜೇಶ ಪೆರ್ಮುದೆ, ಮಂಗಲ್ಪಾಡಿ ಬಿ.ಎಂ.ಎಸ್ ಅಧ್ಯಕ್ಷ ಸೂರ್ಯ, ಕಾರ್ಯದರ್ಶಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು. ಸಂಧ್ಯಾ ಹಾಗೂ ಭುವನೇಶ್ವರಿ ವಂದೇ ಮಾತರಂ ಹಾಡಿದರು. ಶ್ರೀಲತ ಸ್ವಾಗತಿಸಿ, ರಾಜೇಶ ಪೆರ್ಮುದೆ ವಂದಿಸಿದರು. ಕೃಷ್ಣ.ಕೆ ವಂದಿಸಿದರು.


