ಮಂಜೇಶ್ವರ: ಮೀಂಜ ಪಂಚಾಯತಿ ಕೋಳ್ಯೂರು ಗ್ರಾಮದ ದೈಗೋಳಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಿಕೆಯನ್ನು ಸ್ಥಳೀಯರು ಪ್ರತಿಭಟಿಸಿದರು.
ದೈಗೋಳಿಯಲ್ಲಿರುವ ಯೋಗ ಮತ್ತು ಧ್ಯಾನ ಮಂದಿರ ಹಾಗೂ ಕ್ಲಿನಿಕ್‍ನ ಮಧ್ಯೆ ಭಾಗದಲ್ಲಿ ಮೊಬೈಲ್ ಟವರು ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕೆ ಈ ಜಾಗಕ್ಕೆ ತಾಗಿಕೊಂಡಿರುವ ಸುತ್ತಮುತ್ತಲಿರುವ ಹತ್ತಿರದ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ. ಈ ಟವರಿಗೆ ಮೀಂಜ ಪಂಚಾಯತಿಯಿಂದ ಅನುಮತಿ ಸಿಗುವ ಮೊದಲೇ ಈ ನಿವೇಶನಕ್ಕೆ ಅಂಟಿಕೊಂಡಿರುವ ಮನೆ, ಅಂಗನವಾಡಿ, ಆಸ್ಪತ್ರೆ, ಯೋಗ ಧ್ಯಾನ ಕೇಂದ್ರ, ವೃದ್ಧಾಶ್ರಮ, ಶಾಲೆ ಹಾಗೂ ವ್ಯಾಪಾರಿಗಳಿಂದ ಇಲ್ಲಿ ಟವರ್ ನಿರ್ಮಿಸದಂತೆ, ಜಿಲ್ಲಾಧಿಕಾರಿ ಹಾಗೂ ಗ್ರಾಮ ಪಂಚಾಯತಿ (ಮೀಂಜ) ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.
ಆದರೆ ಈ ಮನವಿಯನ್ನು ಕಡೆಗಣಿಸಿ ಒಂದೂವರೆ ತಿಂಗಳ ನಂತರ ಅದೇ ಜಾಗದಲ್ಲಿ ಟವರ್ ನಿರ್ಮಿಸಲು ಮೀಂಜ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ಇದನ್ನು ಪ್ರತಿಭಟಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.


