ಮಂಜೇಶ್ವರ: ಅಚ್ಚಕನ್ನಡ ಪ್ರದೇಶವಾದ ಮಂಜೇಶ್ವರದ ಶಿಕ್ಷಣ ಕೇಂದ್ರಗಳಲ್ಲಿ ಕನ್ನಡೇತರ ಅಧಿಕಾರಿಗಳನ್ನು ನೇಮಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುವ ಹುನ್ನಾರ ಮತ್ತೆ ಮುಂದುವರಿದಿದ್ದು, ಶೇ. 90 ಕ್ಕಿಂತಲೂ ಹೆಚ್ಚು ಕನ್ನಡ ಶಾಲೆಗಳು ಹಾಗೂ ಮಕ್ಕಳನ್ನು ಹೊಂದಿರುವ ಮಂಜೇಶ್ವರ ಉಪಜಿಲ್ಲೆಗೆ ಒಳಪಟ್ಟ ಮಂಜೇಶ್ವರ ಬಿ. ಆರ್. ಸಿ ಯಲ್ಲಿ ಕನ್ನಡೇತರ ಅಧಿಕಾರಿಯನ್ನು ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿಯಾಗಿ ನೇಮಿಸಿದ್ದು ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.
ಈ ಸಂಬಂಧ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಶುಕ್ರವಾರ ನಡೆಸಿದ ತರ್ತು ಸಭೆಯಲ್ಲಿ ನೇಮಕಾತಿಯನ್ನು ಪ್ರಬಲವಾಗಿ ಖಂಡಿಸಿ ಭಾಷಾವಾರು ಪ್ರಾಂತ್ಯ ರಚನೆಯಾಗಿನಿಂದ ಕಾಸರಗೋಡಿನ ಕನ್ನಡಿಗರಿಗೆ ಅಲ್ಪಸಂಖ್ಯಾತರೆಂಬ ಸಾಂವಿಧಾನಿಕ ಸ್ಥಾನಮಾನ ಇದ್ದು, ಕನ್ನಡದ ಅಧಿಕಾರಿಗಳನ್ನು ಪಡೆಯುವ ಅಕಾಶವಿದೆ. ಆದರೂ ಕನ್ನಡ ಪ್ರದೇಶಗಳಲ್ಲಿ ಕನ್ನಡೇತರ ಅಧಿಕಾರಿಗಳನ್ನು ನೇಮಿಸುವುದರ ಮೂಲಕ ಕನ್ನಡಿಗರಿಗೆ ದ್ರೋಹವನ್ನು ಬಗೆದು, ಕನ್ನಡ ಪ್ರದೇಶವಾದ ಮಂಜೇಶ್ವರದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಹಂತಹಂತವಾಗಿ ಅಳಿಸಿ ಹಾಕುವ ಹುನ್ನಾರಕ್ಕೆ ಖೇದ ವ್ಯಕ್ತಪಡಿಸಿದೆ.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಕೆ. ಆರ್, ಉಪಾಧ್ಯಕ್ಷ ಶ್ರೀನಿವಾಸ ರಾವ್ ಪಿ. ಬಿ, ಕಾರ್ಯದರ್ಶಿ ಸುಕೇಶ್ ಎ, ಸದಸ್ಯರಾದ ಅಶೋಕ್ ಕೊಡ್ಲಮೊಗರು, ಮಂಜೇಶ್ವರ ಉಪಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಸುನೀತಾ ಎ, ಕೇಂದ್ರ ಹಾಗೂ ಉಪಜಿಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ನೇಮಕಾತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಈಗಾಗಲೇ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮೂಲಕ ಮೇಲಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ತಕ್ಷಣ ಕೇರಳ ವಿದ್ಯಾಭ್ಯಾಸ ಮಂತ್ರಿ ಹಾಗೂ ಕಂದಾಯ ಸಚಿವರಿಗೆ ಹಾಗೂ ಮೇಲಾಧಿಕಾರಿಗಳಿಗೆ ಪರಿಸ್ಥಿತಿ ಹಾಗೂ ಸತ್ಯ ಸಂಗತಿಯನ್ನು ಮನವರಿಕೆ ಮಾಡುವುದಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಬೇಡಿಕೆಯು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅಸಹಕಾರ ಹಾಗೂ ಹೋರಾಟಕ್ಕಿಳಿಯಲು ತೀರ್ಮಾನವನ್ನು ಕೈಗೊಳ್ಳಲಾಯಿತು. ಮಂಜೇಶ್ವರ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕೋಶಾಧಿಕಾರಿ ಜೀವನ್ ಕುಮಾರ್ ವಂದಿಸಿದರು.


