ಕುಂಬಳೆ: ಜಗತ್ತಿನಾದ್ಯಂತ ಎಷ್ಟು ಧರ್ಮಗಳಿದ್ದರೂ, ಮನುಜ ಧರ್ಮವಷ್ಟೇ ಶ್ರೇಷ್ಠವಾದುದು. ಮಾವವ ಕುಲಕೋಟಿ ಇಂದು ಈ ಮಟ್ಟಕ್ಕೆ ತಲಪುವಲ್ಲಿ ತಲೆತಲಾಂತರಿಂದ ನಡೆದುಬಂದ ಜಾನಪದ ಸಂಸ್ಕøತಿ ಭದ್ರ ತಳಹದಿಯೊದಗಿಸಿದ್ದು, ವಿಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಜಾನಪದಕ್ಕೆ ಇದೆ ಎಂದು ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ, ಭಾರತ ಸರ್ಕಾರದ ಇನ್ಸ್ ಲಾರ್ ಅಧ್ಯಕ್ಷ ಡಾ.ವೆಂಕಟೇಶ ತುಪ್ಪಿಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಸುಬ್ಬಯ್ಯಕಟ್ಟೆ ಕನ್ನಡ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಮತ್ತು ಆದಿತ್ಯ ಫ್ರೆಂಡ್ಸ್ ಕ್ಲಬ್ ನಾರಾಯಣಮಂಗಲಗಳ ಸಂಯುಕ್ತ ಆಶ್ರಯದಲ್ಲಿ ನಾರಾಯಣಮಂಗಲ ಅನುದಾನಿತ ಶಾಲಾ ವಠಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಓಣಂ-ದಸರಾ ಜಾನಪದ ಉತ್ಸವ ಸಮಾರಂಭವನ್ನು ತುಳುನಾಡಿನ ಸಾಂಪ್ರದಾಯಿಕ ಚೆಂಡೆ ನುಡಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು-ನುಡಿಯ ಸಮೃದ್ದ ಬೆಳವಣಿಗೆಯ ಹಿಂದೆ ಇಲ್ಲಿಯ ಮಣ್ಣಿನ ಕಣಕಣದೊಳಗಿನ ಜಾನಪದೀಯ ಚೌಕಟ್ಟಿನ ಸಾಂಸ್ಕøತಿಕ ಹಿನ್ನೆಲೆ ಅಧಮ್ಯ ಚೇತನವನ್ನು ನೀಡಿ ಬೆಂಬಲಿಸಿದೆ. ಹುಟ್ಟು ಮತ್ತು ಸಾವುಗಳ ಮಧ್ಯೆ ಆಟ, ಕಲಿಕೆ, ಸಂಪಾದನೆಗಳಲ್ಲಿ ವ್ಯಸ್ಥರಾಗಿ ನಿಸ್ವಾರ್ಥತೆಯ ಸಾಮಾಜಿಕ ಕೊಡುಗೆಗಳನ್ನು ಮರೆಯುತ್ತಿದ್ದೇವೆ. ಆದರೆ ಯೋಗ್ಯರಿಗೆ ನಮ್ಮಲ್ಲಿರುವ ಅರಿವನ್ನು ಧಾರೆಯೆರೆಯುವಲ್ಲಿ ಬದುಕಿನ ಸಾರ್ಥಕತೆ ಅಡಗಿದೆ ಎಂದು ಅವರು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸುಧೀರ್ಘ ಅವಧಿಯ ನಾಡು-ನುಡಿಯ ಸೇವೆ ಇತರೆಡೆಗಳಿಗೆ ಸದಾ ಮಾತೃಕೆಯಾಗಿದ್ದು, ಬಹುಸಂಸ್ಕøತಿಯ ಗಡಿನಾಡಿನ ಶ್ರೀಮಂತ ಪರಂಪರೆಯ ಸಂಕೇತವಾಗಿ ಜನಮಾನಸದಲ್ಲಿ ನೆಲೆಗೊಳ್ಳಲಿದೆ ಎಂದು ಅವರು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಕೆ.ವಿ.ಆರ್.ಠಾಗೋರ್ ಅವರು ಮಾತನಾಡಿ, ಹೃದಯ ವೈಶಾಲ್ಯತೆ, ಹಸುನ್ಮುಖದ ನಗು ಮನುಷ್ಯನನ್ನು ಬಹಳಷ್ಟು ಎತ್ತರಕ್ಕೆ ಒಯ್ಯುತ್ತದೆ. ಪ್ರತಿದಿನದ ಶುಭಸೂರ್ಯೋದವು ಮಷ್ಯ ಬದುಕಿನ ಅವಕಾಶಗಳಿಗೆ ತೆರೆದುಕೊಳ್ಳುವುದರೊಂದಿಗೆ ಆರಂಭಗೊಳ್ಳುತ್ತಿದ್ದು, ಸದುಪಯೋಗಪಡಿಸುವ ನೈಪುಣ್ಯತೆ ನಮ್ಮನ್ನು ಬೆಳೆಸುತ್ತದೆ. ಪರಂಪರೆಯ ಅರಿವಿನೊಂದಿಗೆ ನಮ್ಮ ಬದುಕು ಮುನ್ನಡೆದಾಗ ಸುಂದರ ಬದುಕು ನಿರ್ಮಾಣವಾಗುತ್ತದೆ. ಪಾರಂಪರಿಕ ಜಾನಪದ ಚಿಂತನೆಯ ಮೂಲ ಉದ್ದೇಶ ಮಾನವ ಕುಲದ ಉದ್ದಾರವೇ ಆಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಾಧಕ ರತ್ನ ಪುರಸ್ಕಾರ ಪ್ರದಾನಗೈದು ಮಾತನಾಡಿದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ, ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು, ಜನಪದೀಯ ಸಂಸ್ಕøತಿಯು ಜನರ ಮನಸ್ಸು-ಹೃದಯಗಳನ್ನು ಪರಸ್ಪರ ಬೆಸೆಯುವ, ಉತ್ಸಾಹದ ಬದುಕನ್ನು ಹೊಸೆಯುವ ಶಕ್ತಿಹೊಂದಿದ ಸತ್ ಸಂಪ್ರದಾಯವಾಗಿ ಬೆಳೆದುಬಂದಿದೆ ಎಂದು ತಿಳಿಸಿದರು. ಬಾಲವಿಕಾಸಪರಿಷತ್ತು ಕರ್ನಾಟಕದ ನಾಲ್ಕು ಗಡಿನಾಡ ವ್ಯಾಪ್ತಿಯಲ್ಲಿ ಗಡಿನಾಡ ಘಟಕದ ರೂಪೀಕರಣಕ್ಕೆ ಚಿಂತನೆ ನಡೆಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಸ್ತುತ ಸಾಲಿನ ರಾಜ್ಯಮಟ್ಟದ ಮಕ್ಕಳ ಹಬ್ಬವನ್ನು ಕಾಸರಗೋಡಿನಲ್ಲಿ ಆಯೋಜಿಸಲಾಗುವುದೆಂದು ಘೋಶಿಸಿದರು.
ಹಿರಿಯ ಜಾನಪದ ಸಂಘಟಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಸಾಧಕರತ್ನ ಪ್ರಶಸ್ತಿ ಪ್ರದಾನಗೈಯ್ಯಲಾಯಿತು. ಹಿರಿಯ ನಾಟಿ ವೈದ್ಯ ವಿಶ್ವನಾಥ ಮಡೆಯ ನಾಯ್ಕಾಪು ಹಾಗೂ ಜಾನಪದ ಕಲಾವಿದ ಶ್ರೀಧರ ಪಣಿಕ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯಕ್ಷದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಕೊಂಕಣಿ ಸಾಹಿತಿ ಸ್ಟಾನಿ ಕ್ರಾಸ್ತಾ ಬೇಳ, ನಾರಾಯಣಮಂಗಲ ಶಾಲಾ ಆಡಳಿತ ಸಮಿತಿ ಸದಸ್ಯ ಹೋಪಾಲಕೃಷ್ಣ ಭಟ್ ಕಬೆಕ್ಕೋಡು, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ತೆಹ್ರೀಕೆ ಉರ್ದು ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಝೀಂ ಮಣಿಮುಂಡ, ಹರಿದಾಸ ಜಯಾನಂದಕುಮಾರ್ ಹೊಸದುರ್ಗ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು ಮಾತನಾಡಿದರು. ಜಾನಪದ ಉತ್ಸವ ಸಮಿತಿ ಅಧ್ಯಕ್ಷ ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ, ಪ್ರಧಾನ ಸಂಚಾಲಕ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಖಜಾಂಜಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ನಗುಮುಗಂ, ಶ್ರೀಕಾಂತ್ ನಾರಾಯಣ ನೆಟ್ಟಣಿಗೆ,ಜಯರಾಮ ಪಾಟಾಳಿ ಪಡುಮಲೆ,ಶಶಿಧರ, ಅಶ್ವಥ್, ಜಯಪ್ರಸಾದ್, ಕೃಷ್ಣಪ್ರಸಾದ್, ಅರುಣ, ರಜಿತ,ಇಂದಿರ, ಭಾಸ್ಕರ,ಶ್ರೀನಿವಾಸ, ಸಂಧ್ಯಾಗೀತ ಬಾಯಾರು, ವಿದ್ಯಾಗಣೇಶ್ ಅಣಂಗೂರು, ಮುಜುಂಗಾವು ಪ್ರದೇಶಗಳ ಕುಟುಂಬಶ್ರೀ ಹಾಗೂ ಗ್ರಾಮೀಣ ಉದ್ಯೋಗ ಖಾತರೀ ಯೋಜನೆಯ ಸದಸ್ಯೆಯರು, ಮಹಾವಿಷ್ಣು ಭಜನಾ ಸಂಘ, ಭಗವತೀ ಸ್ವಸಹಾಯ ಸಂಘ, ಶಾಸ್ತಾ ಮಿತ್ರ ಸಂಗಮ, ಸಾಕೇತ ವಿಕಾಸ ಪರಿಷತ್ತು, ಭಗವತಿ ಪ್ರೆಂಡ್ಸ್ ಕ್ಲಬ್, ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಸೀತಾಂಗೋಳಿ ತಂಡಗಳು ಸಹಕರಿಸಿದರು.
ಸಮಾರಂಭದ ಆರಂಭದಲ್ಲಿ ಬೆಳಿಗ್ಗೆ ನಾರಾಯಣಮಂಗಲ ಶ್ರೀಗಣೇಶ ಮಂದಿರ ಪರಿಸರದಿಂದ ಜಾನಪದ ಉತ್ಸವ ನಗರಿಗೆ ಜಾನಪದ ಸಿರಿ ದಿಬ್ಬಣ ಮೆರವಣಿಗೆ ನಡೆಯಿತು. ಕಾಸರಗೋಡು ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಚಾಲನೆ ನೀಡಿದರು. ಬಳಿಕ ಜಯಾನಂದ ಕುಮಾರ್ ಹೊಸದುರ್ಗ ಅವರ ಶಿಷ್ಯವೃಂದದವರಿಂದ ಭಜನಾ ಸತ್ಸಂಗ ನಡೆಯಿತು. ಉದ್ಘಾಟನಾ ಸಮಾರಂಭದ ಬಳಿಕ ರವಿ ಅಲೆವೂರಾಯ ವರ್ಕಾಡಿ ಅವರ ನೇತೃತ್ವದ ತಂಡದಿಂದ ಯಕ್ಷಗಾನ ನಾಟ್ಯ ವೈಭವ, ಶ್ರೀಮಂಡತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್ ಸುಳ್ಳಿಮಾಡ ಮಡಿಕೇರಿಯ ಗೌರಿ ನಂಜಪ್ಪ ಮತ್ತು ತಂಡದವರಿಂದ ಬಿಂಕುಮಳೆ ಮತ್ತು ಲಾಲಾಲಾ ನೃತ್ಯ, ಬೊಳಿಕೆ ಜಾನಪದ ತಂಡ ಕನ್ನೆಪ್ಪಾಡಿ ಅವರಿಂದ ತುಳುನಾಡ ಜಾನಪದ ನೃತ್ಯ, ಲತೀಫ್ ಹೇರೂರು ಮತ್ತು ತಂಡದವರಿಂದ ಕೈಮುಟ್ಟ್ ಪಾಟ್, ಜಾನಪದ ಪರಿಷತ್ತು ಗಡಿನಾಡ ಘಟಕದ ತಂಡದಿಂದ ಮಂಗಳಂಕಳಿ, ಸ್ಥಳೀಯ ಪ್ರತಿಭೆಗಳಿಂದ ಜಾನಪದ ನೃತ್ಯ ವೈಭವ, ಮರಾಠಿ ಜಾನಪದ ನೃತ್ಯ ಪ್ರಕಾರವಾದ ಬಾಳೆಸಾಂತು ಪ್ರದರ್ಶನ, ದಫ್‍ಮುಟ್ಟ್, ಅಮೀರ್ ಕೋಡಿಬೈಲು ಅವರಿಂದ ಉರ್ದು ಗಜಲ್ ಗಾಯನ, ಸಿಂಗಾರಿ ಮೇಳ ಮೊದಲಾದ ವೈವಿಧ್ಯಗಳ ಪ್ರದರ್ಶನಗಳು ನಡೆಯಿತು.




