ಪೆರ್ಲ: ಪೆರ್ಲದ ಶ್ರೀಸತ್ಯನಾರಾಯಣ ವಿದ್ಯಾ ಸಂಸ್ಥೆಗಳು ಮತ್ತು ನೇಚರ್ ಕ್ಲಬ್ ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರಿಂದ ಸ್ವಚ್ಛತಾ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಸಮಾವೇಶ ಪೆರ್ಲ ಲೈಬ್ರರಿ ಹಾಲ್ ನಲ್ಲಿ ಇತ್ತೀಚೆಗೆ ಜರಗಿತು.
ಪೆರ್ಲ ಅರೋಗ್ಯ ಇಲಾಖೆಯ ಅಧಿಕಾರಿ ಹರೀಶ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ "ಬಳಸುವುದಿಲ್ಲ, ಎಸೆಯುವುದಿಲ್ಲ, ಉರಿಸುವುದಿಲ್ಲ" ಎಂಬ ಪ್ರತಿಜ್ಞೆ ಬೋಧಿಸಿ ಸ್ವಚ್ಛತೆಯ ಸಂಕಲ್ಪ ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಕ ಜಾಗೃತಗೊಂಡರೆ ಹಿರಿಯರ ಮನಸ್ಸು ಪರಿವರ್ತನೆಗೊಳ್ಳಬಲ್ಲುದು. ಇಂದಿನ ಪೀಳಿಗೆ ಸ್ವಚ್ಛತೆಯತ್ತ ಮುಖ ಮಾಡಿದ್ದೆ ಆದರೆ ನಾಳಿನ ದಿನ ಸ್ವಚಂದವಾಗಿ ಜೀವಿಸಬಹುದು. ಎಳೆವೆಯಲ್ಲೇ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದರಿಂದ ಪರಿಸರ ಪ್ರೇಮ ಬೆಳೆಸಿಕೊಳ್ಳುವುದು, ಗಿಡನೆಡುವ ಮತ್ತು ಪರಿಸರವನ್ನು ನಿತ್ಯ ಸ್ವಚ್ಛವಾಗಿಡುವತ್ತ ಕಾರ್ಯೋನ್ಮುಖರಾಗಲು ಪ್ರೇರಣೆಯಾಗಲಿದೆ ಎಂದರು.
ಸ್ವಚ್ಛ ಪೆರ್ಲ ಅಭಿಯಾನದ ಸಕ್ರಿಯ ಕಾರ್ಯಕರ್ತ ಪ್ರಸಾದ್.ಟಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಉಪಾಧ್ಯಕ್ಷ ವೆಂಕಟರಾಜ ಮಿತ್ರ ಪೆನ್ ಫ್ರೆಂಡ್ ಯೋಜನೆಯನ್ವಯ ಲೇಖನಿಗಳ ವಿಲೇವಾರಿಗಿರುವ ಮಾಲಿನ್ಯ ವಿಲೇ ಪಾತ್ರೆಗೆ ನಿರುಪಯುಕ್ತ ಲೇಖನಿಗಳನ್ನು ಹಾಕುವ ಮೂಲಕ ಚಾಲನೆ ನೀಡಿದರು. ಅಧ್ಯಾಪಕ, ನೇಚರ್ ಕ್ಲಬ್ ರೂವಾರಿ ಉಮೇಶ್. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಪ್ರಬಂಧಕ ಪಿ.ಯಸ್.ವಿಶ್ವಾಮಿತ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ರಾಜೇಂದ್ರ ಬಿ.ಸ್ವಾಗತಿಸಿ, ಅಧ್ಯಾಪಕ ಎನ್ ಕೇಶವ ಪ್ರಕಾಶ್ ವಂದಿಸಿದರು. ಶಾಲಾ ಅಧ್ಯಾಪಕ ವೃಂದ, ವಿದ್ಯಾರ್ಥಿ ಸಮೂಹ, ಸ್ವಚ್ಛ ಪೆರ್ಲ ಅಭಿಯಾನ ಸದಸ್ಯರು ಉಪಸ್ಥಿತರಿದ್ದರು.


