ಮಂಜೇಶ್ವರ: ವೈದ್ಯರಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಬಡ ಜನತೆಯ ಕಷ್ಟಗಳನ್ನು ಅರಿತು ಅವರ ಕಷ್ಟ ಸುಖದಲ್ಲಿ ಭಾಗಿಯಾಗುತಿದ್ದ, ದೀನ ದಲಿತರ ಧ್ವನಿಯಾಗಿದ್ದ ಡಾ.ಎ.ಸುಬ್ಬರಾವ್ ಅಪ್ರತಿಮ ಜನಸೇವಕರು. ಇಂದಿಗೂ ಮಂಜೇಶ್ವರ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಏಕೈಕ ವ್ಯಕ್ತಿಯಾದ ಡಾ.ಎ.ಸುಬ್ಬರಾವ್ ಗಡಿನಾಡಿನ ಧ್ವನಿಯಾಗಿದ್ದವರು ಎಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರೂ, ಉತ್ತರ ಮಲಬಾರಿನ ಆರಂಭ ಕಾಲದ ಕಮ್ಯುನಿಸ್ಟ್ ನೇತಾರರೂ, ಮಾಜಿ ಸಚಿವರು ಆಗಿದ್ದ ಡಾ.ಎ. ಸುಬ್ಬರಾವ್ ರವರ ಹದಿನಾರನೇ ಸಂಸ್ಮರಣೆಯನ್ನು ಶನಿವಾರ ಹೊಸಂಗಡಿ ಗೇಟ್ ವೇ ಅಡಿಟೋರಿಯಂನಲ್ಲಿ ಪುಷ್ಪಾರ್ಚನೆ ನಡೆಸಿ ಸಂಸ್ಕರಣಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವೋತ್ಥಾನ ಮೌಲ್ಯಗಳ ಬಗ್ಗೆ ಇಂದು ಹೆಚ್ಚು ಕೂಗು ಕೇಳಿಬರುತ್ತಿದೆ. ಆದರೆ ದಶಕಗಳ ಹಿಂದೆಯೇ ಆ ಕನಸುಗಳನ್ನು ಬಿತ್ತಿದವರಲ್ಲಿ ಡಾ.ಎ.ಸುಬ್ಬರಾವ್ ಪ್ರಮುಖರಾಗಿದ್ದರು ಎಂದು ನೆನಪಿಸಿದ ಸಚಿವರು, ಇಂತಹ ಹಿರಿಯ ತಲೆಮಾರಿನ ಆದರ್ಶಗಳು ಪ್ರೇರಣೆಯಾಗಿರಲಿ ಎಂದು ಕರೆನೀಡಿದರು.
ಬಿ.ವಿ. ರಾಜನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ನೇತಾರರಾದ ಜಯರಾಂ ಬಲ್ಲಂಗುಡೇಲ್, ರಾಮಕೃಷ್ಣ ಕಡಂಬಾರ್, ದಯಾಕರ ಮಾಡ ಸಹಿತ ಗಣ್ಯರು ಭಾಗವಹಿಸಿದ್ದರು.


