ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭೂ ತೆರಿಗೆ ಪ್ರತಿಯನ್ನು ಕನ್ನಡ ಭಾಷೆಯನ್ನೂ ಒಳಪಡಿಸಿ ಮುದ್ರಿಸುವಂತೆ ಆಗ್ರಹಿಸಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಗಣಕೀಕೃತ ಭೂ ತೆರಿಗೆ ವ್ಯವಸ್ಥೆ ಜ್ಯಾರಿಗೆ ಬಂದ ಬಳಿಕ ಭೂ ತೆರಿಗೆ ರಶೀದಿಗಳು, ಇತರೇ ಪ್ರತಿಗಳು ಮಲೆಯಾಳಂ ಭಾಷೆಯಲ್ಲಿ ಮಾತ್ರವೇ ಮುದ್ರಿತಗೊಳ್ಳುತ್ತಿದ್ದು, ಜಿಲ್ಲೆಯ ಕನ್ನಡಿಗರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಾವು ಪಾವತಿಸಿದ ಭೂ ತೆರಿಗೆಯ ಮಾಹಿತಿಯನ್ನು ಖುದ್ದು ಓದಲಾಗದೆ ಜನ ಪರಿತಪಿಸುವಂತಾಗಿದೆ, ಈ ನಿಟ್ಟಿನಲ್ಲಿ ಕಂದಾಯ ಸಚಿವರು ಕಾಸರಗೋಡು ಜಿಲ್ಲೆಯವರೇ ಆಗಿದ್ದು, ಇಲ್ಲಿನ ಜನರ ಸಮಸ್ಯೆಯನ್ನರಿತು ಕನ್ನಡ ಭಾಷೆಯನ್ನೂ ಭೂ ತೆರಿಗೆಗಳಿಗೆ ಅನ್ವಯಗೊಳಿಸಿ ಆದೇಶ ನೀಡುವಂತೆ ಹರ್ಷಾದ್ ವರ್ಕಾಡಿಯವರು ಮನವಿಯಲ್ಲಿ ವಿನಂತಿಸಿದ್ದಾರೆ.


