ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲ ಶಾಸನತಂತ್ರದ ಮುಂದಿನ ಕಾರ್ಯಯೋಜನೆಯಂತೆ ಮುಳ್ಳೇರಿಯ ಹವ್ಯಕ ಮಂಡಲ ವಲಯಗಳ ನೂತನ ನಿಯುಕ್ತ ಪದಾಧಿಕಾರಿಗಳ ಪ್ರಥಮ ಸಭೆ ಗುತ್ತಿಗಾರು ವಲಯದ ಪನ್ನೆ ಗೋಪಾಲಕೃಷ್ಣ ಭಟ್ ನಿವಾಸದಲ್ಲಿ ಬಾಲಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಥಮವಾಗಿ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಠಣವು ಸಾಂಘಿಕವಾಗಿ ಜರಗಿತು. ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ಮಂಡಿಸಿ ಸಭಾ ನಿರ್ವಹಣೆ ಮಾಡಿದರು. ಮಂಡಲ ಕೋಶಾಧ್ಯಕ್ಷ ಹರಿಪ್ರಸಾದ್ ಪೆರ್ಮುಖ ಆಯವ್ಯಯ ವರದಿ ಮಂಡಿಸಿದರು. ಕಾರ್ಯದರ್ಶಿಗಳಿಂದ ಸಂಘಟನೆಯ ಕಾರ್ಯಸೂಚಿ ವಿಷಯಗಳ ಮಂಡನೆ, ಮಹಾ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಸಮಾಲೋಚನೆ ನಡೆಯಿತು.ವಲಯ ಪದಾಧಿಕಾರಿಗಳು ಆಯಾ ವಲಯ ವರದಿಗಳನ್ನಿತ್ತರು. ನೂತನ ಪದಾಧಿಕಾರಿಗಳಾದ ಮಂಡಲ ಮಾತೃ ಪ್ರಧಾನೆ ಕುಸುಮಾ ಈಶ್ವರ ಭಟ್ ಪೆರ್ಮುಖ, ಸೇವಾ ಪ್ರಧಾನ ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಸಹಾಯಪ್ರಧಾನ ಮಹೇಶ ಸರಳಿ, ಮುಷ್ಠಿಭಿಕ್ಷಾ ಪ್ರಧಾನ ಡಾ ಡಿ ಪಿ ಭಟ್ ಕುಂಬಳೆ, ಬಿಂದು ಸಿಂಧು ಪ್ರಧಾನ ಈಶ್ವರ ಭಟ್ ಉಳುವಾನ, ಶಿಷ್ಯಮಾಧ್ಯಮ ಪ್ರಧಾನ ಗೋವಿಂದ ಬಳ್ಳಮೂಲೆ, ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ ಆಯಾ ವಿಭಾಗಗಳ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿಗಳನ್ನು ನೀಡಿದರು. ಗೋಕರ್ಣದ ಅಶೋಕೆಯಲ್ಲಿ ಸ್ಥಾಪನೆಗೊಳ್ಳಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಕುರಿತು ಪ್ರೊ ಶ್ರೀಕೃಷ್ಣ ಭಟ್ ಸಮಗ್ರ ಮಾಹಿತಿಗಳನ್ನು ನೀಡಿದರು. ಸಭೆಯಲ್ಲಿ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಯೋಜನೆಗೆ ದೇಣಿಗೆ ಸಮರ್ಪಣೆ ಮಾಡಲಾಯಿತು. ಕುಂಬಳೆ ವಲಯದ ಎಚ್ ಶಿವರಾಮ ಭಟ್ ಅವರಿಗೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಸಹಾಯನಿಧಿ ಹಸ್ತಾ0ತರಿಸಲಾಯಿತು. ಅ.02 ರಂದು ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಲಿರುವ ಪದಾಧಿಕಾರಿಗಳ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಲಾಯಿತು.ಬಾಲಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಉಪಾಧ್ಯಕ್ಷ ಗೋಪಾಲಕೃಷ್ಣ ಭಟ್ ಬೇರ್ಕಡವು, ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತೃವಿಭಾಗದವರಿಂದ ಕುಂಕುಮಾರ್ಚನಾ ಉಪಾಸನೆಯು ಜರಗಿತು. ರಾಮತಾರಕ ಜಪ, ಶಾಂತಿ ಮಂತ್ರ , ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.


