ಕುಂಬಳೆ: ವಿದ್ಯಾಲಯಗಳ ವಿವಿಧ ಸಂಘಗಳ ಚಟುವಟಿಕೆಗಳು ಔಪಚಾರಿಕ ಶಿಕ್ಷಣದ ಅವಿಭಾಜ್ಯ ಅಂಗ. ಪಠ್ಯ ವಿಷಯಗಳನ್ನು ಅರ್ಥೈಸಲು ವಿಜ್ಞಾನ, ಸಮಾಜವಿಜ್ಞಾನವೇ ಮೊದಲಾದ ಸಂಘಗಳ ಚಟುವಟಿಕೆಗಳು ವೇದಿಕೆಯನ್ನೊದಗಿಸುತ್ತವೆ ಎಂದು ಪುತ್ತಿಗೆ ಮುಹಿಮ್ಮತ್ ಹಿರಿಯ ಮಾಧ್ಯಮಿಕ ಶಾಲಾ ಶಿಕ್ಷಕ ಮೊಹಮ್ಮದ್ ರಾಶೀದ್ ನುಡಿದರು.
ಪೇರಾಲು ಸರ್ಕಾರಿ ಕಿರಿಯ ಬುನಾದಿ ಶಾಲೆಯ ವಿವಿಧ ಸಂಘಗಳ ವಾರ್ಷಿಕ ಚಟುವಟಿಕಗಳನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕಸದಿಂದ ರಸ ಎಂಬ ತತ್ವದ ಆಧಾರದಲ್ಲಿ ತ್ಯಾಜ್ಯ ವಸ್ತುಗಳಿಂದ ತಯಾರಿಸಬಹುದಾದ ಉಪಯುಕ್ತ ವಸ್ತುಗಳ ವಿವಿಧ ಮಾದರಿಯನ್ನು ಸ್ವತಃ ಮಾಡಿ ಪರಿಚಯಿಸುವುದರ ಮೂಲಕ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಬಿ.ಎ. ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಗುರುಮೂರ್ತಿ ನಾಯ್ಕಾಪು ಶುಭಹಾರೈಸಿದರು. ವಿವಿಧ ಸಂಘಗಳ ಉಸ್ತುವಾರಿ ವಹಿಸುವ ಶಿಕ್ಷಕರಾದ ವಿನುಕುಮಾರ್, ಮೊಹಮ್ಮದ್ ನೌಫೆಲ್, ದೀಪಾ ರಾಜಗೋಪಾಲ್, ಫರ್ಝಾನ, ರಸಿಯಾ, ರುಕ್ಮಿಣಿ ಜಿ, ಪ್ರಸೀನ ಬಿಕೆ, ಸಜಿನಾ ಪಿ.ಪಿ, ಆಯಾ ಸಂಘಗಳು ಈ ವರ್ಷ ಹಮ್ಮಿಕೊಂಡಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಚಿತ್ರಕಲಾ ಎಂ ಸ್ವಾಗತಿಸಿ, ರುಕ್ಸಾನ ಟೀಚರ್ ವಂದಿಸಿದರು.


