ಬದಿಯಡ್ಕ: ಗಡಿನಾಡು ಕಾಸರಗೋಡಿನ ಶಿಕ್ಷಣ, ಸಹಕಾರ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಲ್ಲಿಸಿ ದಿವಂಗತರಾದ ಖಂಡಿಗೆ ಶಾಮ ಭಟ್ಟರ ಜನ್ಮಶತಮಾನೋತ್ಸವದ ಸನಿಹಕ್ಕೆ ನಾವು ತಲಪಿದ್ದೇವೆ.ಪ್ರಿನ್ಸಿಪಾಲರೆಂದೇ ನಾಡಿನಾದ್ಯಂತ ಗುರುತಿಸಲ್ಪಟ್ಟ ಶ್ರೀಯುತರದ್ದು ಶಿಸ್ತು, ಸಂಯಮದಿಂದ ಕೂಡಿದ ಧೀಮಂತ ವ್ಯಕ್ತಿತ್ವ. ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲೂ ಅವರ ಸೇವೆ ಅನುಪಮ. ನಾಡಿನ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಶ್ರೀಯುತರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ದಿ.ಖಂಡಿಗೆ ಶಾಮ ಭಟ್ಟ ಜನ್ಮಶತಮಾನೋತ್ಸವ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಅಧ್ಯಕ್ಷತೆ ವಹಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ನಿವೃತ್ತ ಮುಖ್ಯೋಪಾಧ್ಯಾಯ ಕುಳಮರ್ವ ಕೇಶವ ಕೃಷ್ಣ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಶಂಕರ.ಡಿ, ಮುಹಮ್ಮದ್ ಬಿ.ಎ, ಲೇಖಕ ಸ್ಟೇನಿ ಕ್ರಾಸ್ತಾ, ಕರ್ನಾಟಕ ಬ್ಯಾಂಕಿನ ನೀರ್ಚಾಲು ಶಾಖಾ ಪ್ರಬಂಧಕ ಕೆ.ಅನಂತಗೋಪಾಲ ಕೃಷ್ಣನ್, ಎಂ.ಎಚ್.ಜನಾರ್ದನ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲ ಶಿವಪ್ರಕಾಶ್ ಎಂ.ಕೆ ಸ್ವಾಗತಿಸಿದರು ಶಿಕ್ಷಕಿ ವಾಣಿ ಪಿ.ಎಸ್ ಧನ್ಯವಾದ ಸಮರ್ಪಿಸಿದರು. ದಿವಂಗತ ಖಂಡಿಗೆ ಶಾಮ ಭಟ್ಟರ ಜನ್ಮ ಶತಮಾನೋತ್ಸವವು ಸೆ.29 ರಂದು ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳೊಂದಿಗೆ ಜರಗಲಿದೆ.


