ಕುಂಬಳೆ: ನಂಬಿಕೆ, ಆಚರಣೆ, ವಿಶಿಷ್ಟ ಜೀವನ ಕ್ರಮಗಳ ಮೂಲಕ ವಿಶೇಷ ಸಾಂಸ್ಕøತಿಕ ಪರಂಪರೆಯ ಪುಣ್ಯ ನೆಲವಾದ ತುಳುನಾಡಿನ ಪ್ರಧಾನ ಹೆಗ್ಗುರುತುಗಳು ಹೊಸ ತಲೆಮಾರಿಗೆ ಕುತೂಹಲಕರವೂ ಉಳಿಸಿ ಬೆಳೆಸುವ ಜವಾಬ್ದಾರಿಕೆಯೂ ಆಗಿದೆ. ತುಳುನಾಡಿನ ಪ್ರತಿ ತಿಂಗಳೂ ಮಹತ್ವಪೂರ್ಣವಾಗಿ ಹಲವಾರು ನಡವಳಿಕೆ, ಆಚರಣೆಗಳಿಂದ ಶ್ರೀಮಂತವಾಗಿದ್ದು, ಆಟಿಯಲ್ಲಿ ಆಟಿಕಳೆಂಜ ಮನೆ ಮನೆಗೆ ಬಂದರೆ ಸೋಣ ದಲ್ಲಿ ಸೋಣದ ಜೋಗಿ ಎಂಬ ಆರಾಧನಾ ಕಲೆ ಸಾಮಾಜಿಕ ಕ್ಲೇಶ ನಿವಾರಕವಾಗಿ ಗುರುತಿಸಿಕೊಂಡು ಆಚರಿಸಲ್ಪಡುತ್ತಿರುವುದು ವಿಶಿಷ್ಟವಾದುದುದಾಗಿದೆ. ಆದರೆ ಆಧುನಿಕ ಸ್ಥಿತ್ಯಂತರದ ಇಂದು ಸೋಣದ ಜೋಗಿ ಎಂಬುದು ಕಾಣಸಿಗುವುದು ಅಪೂರ್ವವಾಗುತ್ತಿದೆ. ತುಳುನಾಡಿನ ದಕ್ಷಿಣ ಭಾಗವಾದ ಕುಂಬಳೆ ಸೀಮೆಯ ಪುಟ್ಟ ಗ್ರಾಮ ಬಂಬ್ರಾಣದಲ್ಲಿ ನೆಲೆಸಿರುವ ಐತ್ತಪ್ಪ ನಲಿಕೆ ಮತ್ತು ಅವರ ಮಗ ಅಜಯ್ ನಲಿಕೆ ಎಂಬವರು ಇಂದಿಗೂ ಈ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದ್ದಾರೆ.
ಘಟ್ಟ ಪ್ರದೇಶದಲ್ಲಿ ಉದ್ಭವ ಗೊಂಡ ಜೋಗಿಯು ನಾಥಪಂಥಕ್ಕೆ ಸಂಬಂಧಪಟ್ಟ ಕದ್ರಿಯಲ್ಲಿ ಸ್ಥಿತಿ ಗೊಂಡಿರುವುದು ಅಲ್ಲಿಂದ ಕಣಿಪುರ ಕುಂಬಳೆಗೆ ಬರುವುದು ಗಣಪತಿ ಚತುರ್ಥಿಯಂದು ಎಂದು ಪಾಡ್ದನಗಳ ಮೂಲಕ ತಿಳಿಯಲ್ಪಡುತ್ತದೆ. ಇದರಲ್ಲಿ ಮಾತುಗಾರಿಕೆ ಪಾಡ್ದನಗಳು ಕನ್ನಡ ಮತ್ತು ತುಳು ಭಾಷೆ ಯಲ್ಲಿರುತ್ತದೆ. ಜೊತೆಗೆ ನಾಥಪಂಥದ ಜೋಗಿಮಠವು ಮಂಗಳೂರಿನ ಕದ್ರಿಯಲ್ಲಿ ಇರುವುದನ್ನು ನಾವಿಲ್ಲಿ ಗಮನಿಸಬಹುದು.
(ಮಾಹಿತಿ ಹಾಗೂ ಚಿತ್ರ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಮತ್ತು ಜಿತಿನ್ ಪೂಜಾರಿ ಕುಂಬಳೆ.)



