ಉಪ್ಪಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ತಾಲೂಕಿನ ವತಿಯಂದ ಶ್ರೀ ಐಲ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಭಜನಾ ಸಂಗಮ ಮತ್ತು ಭಜನೋತ್ಸವ ಕಾರ್ಯಕ್ರಮ ಭಾನುವಾರ ಜರಗಿತು.
ವಿವಿಧ ಭಜನಾ ಮಂಡಳಿಗಳ ಪಾಲ್ಗೊಳ್ಳುವಿಕೆಯಲ್ಲಿ ಭಜನಾ ಶೋಭಾಯಾತ್ರೆಯ ಬಳಿಕ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಹಾಗು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಅವರು ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ತಾಲೂಕಿನ ಗೌರವಾಧ್ಯಕ್ಷ ರಾಮಕೃಷ್ಣ ಕಾಟುಕುಕ್ಕೆ ಅವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಕಾರ್ಯದರ್ಶಿಗಳಾದ ಬಿ.ಜಯರಾಮ ನೆಲ್ಲಿತಾಯ, ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಜನಜಾಗೃತಿ ವೇದಿಕೆ ಕಾಸರಗೋಡಿನ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್‍ಭಾಗ್, ಭಜನಾ ಪರಿಷತ್‍ನ ಕಾಸರಗೋಡು ತಾಲೂಕು ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮಧ್ಯಾಹ್ನ ಬಳಿಕ ರಾಮಕೃಷ್ಣ ಕಾಟುಕುಕ್ಕೆ ಅವರ ಸುಳಾದಿ ಭಜನಾ ಚಿಂತನಾ ಕಾರ್ಯಕ್ರಮಗಳೊಂದಿಗೆ ವಿವಿಧ ಕುಣಿತ ಭಜನಾ ಮಂಡಳಿಗಳಿಂದ ಭಜನೋತ್ಸವ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ಹಾಗು ಕಾಸರಗೋಡು ಜಿಲ್ಲೆಯ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೇತನಾ ಎಂ.ಮೊದಲಾದವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಜನಾ ಮಂಡಳಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಮಂಜೇಶ್ವರದ ಭಜನಾ ಪರಿಷತ್ತಿನ ಅಧ್ಯಕ್ಷ ದಿನೇಶ್ ಚಿರುಗೋಳಿ ಶುಭಹಾರೈಸಿದರು. ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ ವಂದಿಸಿದರು.


