ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವರ್ಕಾಡಿ ನೇತೃತ್ವ ಸಮಿತಿ ಆಶ್ರಯದಲ್ಲಿ ಸಂವಿಧಾನ ಸಂರಕ್ಷಣಾ ಸಭೆ ಭಾನುವಾರ ಅಪರಾಹ್ನ ಕೊಡ್ಲಮೊಗರು ಶ್ರೀವಾಣಿವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲಿ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾಂತ್ರಿಕ ಬದುಕಿನತ್ತ ಮುಖಮಾಡಿರುವುದರಿಂದ ವ್ಯಾಪಕ ಅಸಂತುಷ್ಠಿಗಳು ನಮಗಿದಿರಾಗುತ್ತಿದೆ. ಆದರೆ ಜ್ಞಾನದ ಬೆಳಕನ್ನು ನೀಡಿ ಮಾನವನಾಗಿ ಬೆಳೆಸುವ ಶಕ್ತಿ ಪುಸ್ತಕ ಓದಿಗೆ ಮಾತ್ರ ಸಾಧ್ಯವಿದ್ದು, ಅದನ್ನು ಪ್ರಚುರಪಡಿಸುವ ಲೈಬ್ರರಿ ಕೌನ್ಸಿಲ್ ನ ಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಸಾಮಾಜಿಕ ಒಗ್ಗಟ್ಟು, ಕ್ರಿಯಾತ್ಮಕ ಬದುಕಿನ ರೂಪಿಸುವಿಕೆ ಮತ್ತು ವೈಯುಕ್ತಿಕ ಅರಿವಿನ ವಿಸ್ತಾರತೆಗೆ ಹೊತ್ತಗೆಗಳ ಓದು ಪುಷ್ಠಿ ನೀಡಿ ಬೆಳೆಸುತ್ತದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮನೆಮನೆಗಳಲ್ಲೂ ಗ್ರಂಥ ಭಂಡಾರ, ಓದುವ ಹವ್ಯಾಸ ಇನ್ನಷ್ಟು ಬಲಗೊಳ್ಳಬೇಕು ಎಂದರು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ನ್ಯಾಯವಾದಿ ರಾಧಾಕೃಷ್ಣ ಪೆರುಂಬಳ ಹಾಗೂ ವನಿತಾ ಆರ್.ಶೆಟ್ಟಿ ಅವರು ಭಾರತದ ಸಂವಿಧಾನ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್, ಗೀತಾ ಸಾಮಾನಿ, ಗೋಪಾಲಕೃಷ್ಣ ಪಜ್ವ, ಭಾರತಿ ನಡಕ, ಕಿಟ್ಟಣ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಶೋಕ ಮಾಸ್ತರ್ ಕೊಡ್ಲಮೊಗರು, ಅಕ್ಷಯಕುಮಾರ್ ಎಲಿಯಾಣ ಉಪಸ್ಥಿತರಿದ್ದರು. ಕೊಡ್ಲಮೊಗರು ಮಿತ್ರವೃಂದ ಗ್ರಂಥಾಲಯದ ಕಾರ್ಯದರ್ಶಿ ಬಿ.ಪ್ರದೀಪ್ ಕುಮಾರ್ ಸ್ವಾಗತಿಸಿ, ರೂಪಕಲಾ ಗ್ರಂಥಾಲಯದ ಕಾರ್ಯದರ್ಶಿ ರವೀಂದ್ರ ಸುಳ್ಯಮೆ ವಂದಿಸಿದರು. ಸಮಾರಂಭದಲ್ಲಿ ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಪೆರುಂಬಳ ಹಾಗೂ ಬಹುಮುಖ ಪ್ರತಿಭೆಗಳಾದ ವರ್ಷಾ ಮತ್ತು ವೃಕ್ಷಾ ಎಂ.ಆರ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.


