ತಿರುವನಂತಪುರ: ಶಬರಿಮಲೆಗೆ ಹತ್ತರಿಂದ ಐವತ್ತರ ಹರೆಯದೊಳಗಿನ ಯುವತಿಯರ ಪ್ರವೇಶಕ್ಕೆ ಕಾನೂನು ಪರವಾಗಿ ತಡೆಯಾಜ್ಞೆ ಇಲ್ಲದಿದ್ದರೂ, ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿರುವುದಾಗಿ ಕೇರಳದ ಕಾನೂನು ಸಚಿವ ಎ.ಕೆ ಬಾಲನ್ ತಿಳಿಸಿದ್ದಾರೆ.
ಶಬರಿಮಲೆಗೆ ಯುವತಿಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿ 2018ರಲ್ಲಿ ಸುಪ್ರೀಂ ಕೋರ್ಟು ವಿಭಾಗೀಯ ಪೀಠ ನೀಡಿದ್ದ ತೀರ್ಪು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಾದ ಆಲಿಸಿದ ನ್ಯಾಯಾಲಯ, ಪ್ರಕರಣವನ್ನು ಏಳು ಮಂದಿಯ ವಿಸ್ತøತ ಪೀಠಕ್ಕೆ ವರ್ಗಾಯಿಸಿದ್ದರೂ, ಯುವತಿಯರ ಪ್ರವೇಶದ ವಿಷಯದಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸಿರಲಿಲ್ಲ. ಆದರೆ ಈ ತೀರ್ಪನ್ನು ಸರ್ಕಾರ ತಡೆಯಾಜ್ಞೆಗೆ ಸಮಾನವಾಗಿ ಸ್ವೀಕರಿಸಿ, ಸರ್ಕಾರ ಮುಂದುವರಿಯಲಿದೆ. ಸುಪ್ರೀಂ ಕೋರ್ಟು ತೀರ್ಪಿನಲ್ಲಿ ಯುವತಿಯರ ಪ್ರವೇಶ ವಿಷಯದಲ್ಲಿ ಸಪಷ್ಟನೆ ಇಲ್ಲದಿರುವುದರಿಂದ ಯುವತಿಯರಿಗೆ ವಿಶೇಷ ಸಂರಕ್ಷಣೆಯೊಂದಿಗೆ ಪ್ರವೇಶಾನುಮತಿ ಕಲ್ಪಿಸಬೇಕಾಗಿಲ್ಲ ಎಂಬ ನಿಲುವನ್ನು ಸರ್ಕಾರ ಈ ಹಿಂದೆಯೇ ಸ್ಪಷ್ಟಪಡಿಸಿದೆ. ವಿಭಾಗೀಯ ಪೀಠದ ನ್ಯಾಯಾಧೀಶರ ಮಧ್ಯೆ ಒಮ್ಮತದ ತೀರ್ಮಾನವಾಗದಿರುವುದರಿಂದ, ಪ್ರವೇಶಾನುಮತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರ ಮುಂದುವರಿಯಬೇಕಾಗಿಲ್ಲ ಎಂಬ ಕಾನೂನುತಜ್ಞರ ನಿರ್ದೇಶದಂತೆ ನಡೆದುಕೊಳ್ಳಲು ತೀರ್ಮಾನಿಸಲಾಗಿದೆ.
ಈ ಮಧ್ಯೆ ಶಬರಿಮಲೆ ದರ್ಶನಕ್ಕೆ ಆಗಮಿಸಿದ ಹತ್ತು ಹಾಗೂ ಐವತ್ತರ ನಡುವಿನ ಹರೆಯದ ಹತ್ತುಮಂದಿ ಯುವತಿಯರನ್ನು ಪಂಪೆಯಿಂದ ವಾಪಾಸು ಕಳುಹಿಸಲಾಗಿದ್ದು, ಇದೇ ನೀತಿ ಮುಂದುವರಿಯಲಿರುವುದಾಗಿ ಎ.ಕೆ ಬಾಲನ್ ತಿಳಿಸಿದ್ದಾರೆ. ಈ ಬಾರಿ ಯಾವುದೇ ನಿಯಂತ್ರಣವನ್ನೂ ಭಕ್ತಾದಿಗಳ ಮೇಲೆ ಹೇರಲಾಗಿಲ್ಲ. ಶಬರಿಮಲೆಯಲ್ಲಿ ಯಾವುದೇ ಗೊಂದಲಗಳಿಗೂ ಅವಕಾಶವಿಲ್ಲದೆ, ಅಯ್ಯಪ್ಪ ದರ್ಶನ ನಡೆದುಬರುತ್ತಿರುವುದಾಗಿ ತಿಳಿಸಿದರು.


