ಕಾಸರಗೋಡು: ರಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ವ್ಯಾಪಕ ಸುಳ್ಳು ಪ್ರಚಾರ ನಡೆಸುವ ಮೂಲಕ ದೇಶದ ಜನತೆಯನ್ನು ವಂಚಿಸಿರುವ ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡ ರಾಹುಲ್‍ಗಾಂಧಿ ಮತದಾರರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
ಅವರು ರಫೇಲ್ ಯುದ್ಧವಿಮಾನ ಖರೀದಿ ಸಂಬಂಧ ಸುಪ್ರೀಂ ಕೋರ್ಟು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಹುಲ್‍ಗಾಂಧಿ ದೇಶದ ಜನತೆಯ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಕಾಸರಗೋಡು ಹೊಸಬಸ್‍ನಿಲ್ದಾಣ ವಠಾರದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಎನ್‍ಡಿಎ ಸರ್ಕಾರ, ಆರಂಭದಿಂದಲೂ ಪಾರದರ್ಶಕ ನಿಲುವನ್ನು ಹೊಂದಿದ್ದರೂ, ರಾಹುಲ್‍ಗಾಂಧಿ ಮತ್ತು ಅವರ ಪಕ್ಷ ಈ ವಿಷಯದಲ್ಲಿ ವ್ಯಾಪಕ ಸುಳ್ಳು ಪ್ರಚಾರ ನಡೆಸಿಕೊಂಡು ಬಂದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‍ಡಿಎ ಸರ್ಕಾರದ ತೇಜೋವಧೆಗೆ ಶ್ರಮಿಸಿದೆ. ಸುಪ್ರೀಂ ಕೋರ್ಟಿನ ತೀರ್ಪಿನ ನಂತರವೂ ಎಚ್ಚೆತ್ತುಕೊಳ್ಳದೆ, ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಸೇಡುತೀರಿಸಲು ಮುಂದಾದ ಕಾಂಗ್ರೆಸ್‍ಗೆ ನ್ಯಾಯಾಲಯ ಸೂಕ್ತ ಎಚ್ಚರಿಕೆಯನ್ನೂ ನೀಡಿದೆ. ಕಾಂಗ್ರೆಸ್ ಹಾಗೂ ಅದರ ಮುಖಂಡ ರಾಹುಲ್‍ಗಾಂಧಿ ಅವರ ಲಜ್ಜೆಗೆಟ್ಟ ನೀತಿಗೆ ನ್ಯಾಯಾಲಯ ಸೂಕ್ತ ಇದಿರೇಟು ನೀಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮೊದಲು ಕರಂದಕ್ಕಾಡಿನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬ್ಯಾಂಕ್ ರಸ್ತೆ, ಹಳೇ ಬಸ್‍ನಿಲ್ದಾಣ ಮೂಲಕ ಹಾದು ಹೊಸಬಸ್‍ನಿಲ್ದಾಣ ವರೆಗೆ ಸಾಗಿತು. ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ವಕೀಲ ಸದಾನಂದ ರೈ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಿ.ಸುರೇಶ್‍ಕುಮಾರ್ ಶೆಟ್ಟಿ, ಪುಷ್ಪಾ ಅಮೆಕ್ಕಳ, ಸರೋಜಾ ಆರ್. ಬಲ್ಲಾಳ್, ವಕೀಲ ಅನಂತರಾಮ್, ಧನರಾಜ್ ಪ್ರತಾಪ್‍ನಗರ, ವಸಂತ್ ಕಾರಡ್ಕ, ಕೃಷ್ಣ ಮಣಿಯಾಣಿ ಬದಿಯಡ್ಕ, ನಗರಸಭಾ ಸದಸ್ಯರಾದ ಉಮಾ, ಶ್ರೀಲತಾ, ಕೆ.ಜಿ ಮನೋಹರ್, ಮಧೂರು ಗ್ರಾಪಂಸದಸ್ಯರಾದ ಶ್ರೀಧರ ಕೂಡ್ಲು, ಪ್ರಭಾಶಂಕರ ಮಾಸ್ಟರ್, ಸತೀಶನ್ ಕಡಪ್ಪುರ ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಸುಧಾಮ ಗೋಸಾಡ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಸತೀಶ್ ವಂದಿಸಿದರು.


