ಮುಳ್ಳೇರಿಯ: ಸಂಘಟನಾತ್ಮಕವಾಗಿ ಒಗ್ಗಟ್ಟಿಲ್ಲದೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಬೇಡಿಕೆಗಳನ್ನೂ ಈಡೇರಿಸಲು ಸಾಧ್ಯವಾಗದು. ವಿವಿಧ ಕಲಾ ಕ್ಷೇತ್ರಗಳಲ್ಲಿ ಅಹರ್ನಿಶಿ ಸೇವೆಗೈದು ಬದುಕಿನ ಮುಸ್ಸಂಜೆಯಲ್ಲಿ ಪರಿತಪಿಸುವ ಕಲಾವಿದರಿಗೆ ಆಶಾ ಕಿರಣವಾಗಿ ಸವಾಕ್ ಸಂಘಟನೆ ಬದುಕು ನೀಡುತ್ತಿರುವುದು ಸಂಘಟನಾತ್ಮಕ ಶಕ್ತಿಯ ಸಂಕೇತ ಎಂದು ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ(ಸವಾಕ್)ನ ಕಾರಡ್ಕ ವಲಯ ಘಟಕದ ಅಧ್ಯಕ್ಷ, ರಂಗ ಕಲಾವಿದ ಎ.ಬಿ.ಮಧುಸೂದನ ಬಲ್ಲಾಳ್ ನಾಟೆಕಲ್ಲು ಅವರು ತಿಳಿಸಿದರು.
ಮುಳ್ಳೇರಿಯ ವ್ಯಾಪಾರಿ ಭವನದಲ್ಲಿ ಗುರುವಾರ ನಡೆದ ಸವಾಕ್ ಕಾರಡ್ಕ ವಲಯ ವಾರ್ಷಿಕ ಮಹಾಸಭೆ, ನೂತನ ಸದಸ್ಯರಿಗೆ ಸದಸ್ವತ್ವ-ಗುರುತುಪತ್ರ ವಿತರಣೆ ಹಾಗೂ ಸಾಧಕ ಕಲಾವಿದರಿಗೆ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಕ್ಷಿಣ ಕೇರಳ ಸಹಿತ ರಾಜ್ಯದ ಇತರ ಜಿಲ್ಲೆಗಳಲ್ಲಿ ಎಲ್ಲಾ ವಿಭಾಗಗಳ ಕಲಾವಿದರು ಸಂಘಟಿತರಾಗಿ ಸರ್ಕಾರದ ಪಿಂಚಣಿ ಸಹಿತ ವಿವಿಧ ಅನುಕೂಲತೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಬಡ ಕಲಾವಿದರ ಕುಟುಂಬಗಳು ಸರ್ಕಾರಿ ಪಪಿಂಚಣಿ ಸಹಿತ ವಿವಿಧ ನೆರವಿನಿಂದ ನೆಮ್ಮದಿಯ ಜೀವನ ಮುನ್ನಡೆಸುತ್ತಿದ್ದಾರೆ. ಆದರೆ ಅವಗಣಿಸಲ್ಪಟ್ಟ ಗಡಿನಾಡಿನ ಕಲಾವಿದರಿಗೆ ಈವರೆಗೆ ಯಾವುದೇ ನ್ಯಾಯೋಚಿತ ಸೌಲಭ್ಯಗಳು ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಸವಾಕ್ ಜಿಲ್ಲೆಯಲ್ಲಿ ಘಟಕ ಆರಂಭಿಸುವ ಮೂಲಕ ಹೊಸ ಶಖೆಗೆ ತೆರೆದುಕೊಂಡಿದ್ದು, ಹಲವಾರು ಅಶಕ್ತ ಕಲಾವಿದರಿಗೆ ನೆರವನ್ನು ದೊರಕಿಸುವಲ್ಲಿ ಕಾರ್ಯಶೀಲವಾಗಿದೆ ಎಂದು ಅವರು ತಿಳಿಸಿದರು. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಸಕ್ರಿಯ ಪಾಲುದಾರಿಕೆಗೆ ಕೈಜೋಡಿಸಬೇಕು ಎಂದು ಕರೆನೀಡಿದರು.
ಸವಾಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಯಾವುದೇ ಫಲಾಪೇಕ್ಷೆಗಳಿಲ್ಲದೆ ಕಲಾವಿದರ ಶ್ರೇಯೋಭಿವೃದ್ದಿಯನ್ನು ಲಕ್ಷ್ಯವಾಗಿರಿಸಿ ಸಕ್ರಿಯವಾಗಿರುವ ಸವಾಕ್ ಕಲಾವಿದರಿಂದ, ಕಲಾವಿದರಿಗಾಗಿ ಪ್ರವರ್ತಿಸುವ ಸಂಘಟನೆಯಾಗಿದೆ ಎಂದರು. ಸುರೇಶ್ ಪಣಿಕ್ಕರ್, ವಿನು ಬೋವಿಕ್ಕಾನ, ಭಾರತಿ ಬಾಬು, ಜಯಂತಿ, ಮೋಹಿನಿ ಮುಳಿಯಾರ್, ರವೀಂದ್ರನ್ ನಾಯರ್ ಉಪಸ್ಥಿತರಿದ್ದು ಮಾತನಾಡಿದರು. ಸವಾಕ್ ನ ಹಿರಿಯ ಸದಸ್ಯ, ಯಕ್ಷಗಾನ ಕಲಾವಿದ ಅಪ್ಪಕುಞÂ್ಞ ಮಣಿಯಾಣಿ ಅವರು ಮಾತನಾಡಿ, ರಾಜ್ಯದಲ್ಲೇ ಮೊತ್ತಮೊದಲ ಪಿಂಚಣಿ ಪಡೆಯುತ್ತಿರುವ ಯಕ್ಷಗಾನ ಕಲಾವಿದನಾದ ತನಗೆ ಇಂತಹ ನೆರವು ಲಭಿಸುವಲ್ಲಿ ಸವಾಕ್ ಕೈಗೊಂಡ ತುರ್ತು ಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಮಾತನಾಡಿದರು.
ಸಮಾರಂಭದಲ್ಲಿ ಖ್ಯಾತ ಭರತನಾಟ್ಯ ಗುರು, ಕವಯಿತ್ರಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ, ಬಾಲ ಪ್ರತಿಭೆಗಳಾದ ಶ್ರೇಯಾ ಪೀತಾಂಬರನ್ ಹಾಗೂ ಶ್ರೀನಾ ಶ್ರೀಜೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿನು ಬೋವಿಕ್ಕಾನ ಸ್ವಾಗತಿಸಿ, ಚಂದ್ರಶೇಖರ ಆಚಾರ್ಯ ವಂದಿಸಿದರು. ಈ ಸಂದರ್ಭ ನೂತನ ವಲಯ ಸಮಿತಿ ರೂಪಿಸಲಾಯಿತು. ಸವಾಕ್ ನೂತನ ಸದಸ್ಯರ ಸದಸ್ಯತನ ಸ್ವೀಕರಿಸಿ, ಗುರುತುಪತ್ರ ವಿತರಿಸಲಾಯಿತು.




