ಮುಳ್ಳೇರಿಯ : ಬಾಲ್ಯದ ಜೀವನವು ವ್ಯಕ್ತಿಯ ಎಲ್ಲಾ ವಿಧದ ಅಧ್ಯಯನ ಹಾಗೂ ಬೆಳವಣಿಗೆಗೆ ಪೂರಕವಾಗಿದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಜ್ಞಾನದ ಕ್ರೋಡೀಕರಣ ನಡೆಯಬೇಕು. ಸಾಹಿತ್ಯದಿಂದ ಮಾನಸಿಕ ಸಮತೋಲನ ಹಾಗೂ ದೃಢಚಿತ್ತ ದೊರೆಯುತ್ತದೆ. ಆಸಕ್ತಿಯೇ ಮಕ್ಕಳ ಅಧ್ಯಯನದ ಶಕ್ತಿ ಎಂದು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಮಂಗಳವಾರ ಕೇರಳ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸುತ್ತಿರುವ 'ಸಾಧಕರ ಜತೆ ಸಂವಾದ' ಎಂಬ ಅಭಿಯಾನದಂತೆ ವಿರಾಜ್ ಅಡೂರು ಅವರ ಮನೆಗೆ ಭೇಟಿ ನೀಡಿದ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಪಠ್ಯ ವಿಚಾರಗಳು ವ್ಯಕ್ತಿಗೆ ಜೀವನ ಭದ್ರತೆ ನೀಡುತ್ತದೆ. ಆದರೆ ಪಠ್ಯೇತರ ಚಟುವಟಿಕೆಗಳು ಆತನ ವ್ಯಕ್ತಿತ್ವವನ್ನು ಅರಳಿಸುತ್ತದೆ. ಆದ್ದರಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಬೇಕು. ಇವೆರಡೂ ಜೊತೆಯಾದ ವ್ಯಕ್ತಿಯ ಜೀವನ ಪರಿಪೂರ್ಣ. ಸಾತ್ವಿಕ ಸಾಹಿತ್ಯದಿಂದ ಮಾನಸಿಕ ವಿಕಾಸ ಸಾಧ್ಯ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿರಾಜ್ ಅಡೂರು ಅವರು ಸ್ವರಚಿತ ಚುಟುಕಗಳನ್ನು ವಾಚಿಸಿ, ಅದರ ಆಂತರ್ಯದ ಬಗ್ಗೆ ಮಾಹಿತಿ ನೀಡಿದರು. ವಿರಾಜ್ ಅಡೂರು ಅವರು ರಚಿಸಿದ ವ್ಯಂಗ್ಯಚಿತ್ರಗಳನ್ನು ಹಾಗೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಲೇಖನಗಳನ್ನು ಮಕ್ಕಳು ವೀಕ್ಷಿಸಿ, ಟಿಪ್ಪಣಿ ಬರೆದುಕೊಂಡರು. ಈ ಸಂದರ್ಭದಲ್ಲಿ ಸಾಹಿತಿ ವಿರಾಜ್ ಅಡೂರು ಅವರು ರಚಿಸಿದ ಅನೇಕ ಕೃತಿಗಳನ್ನು ಅಡೂರು ಶಾಲೆಯ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ತಂತ್ರಿ, ಸುಮತಿ ತಂತ್ರಿ ಹಾಗೂ ಜಯಲಕ್ಷ್ಮಿ ಪಿ ತಂತ್ರಿ, ಅಡೂರು ಶಾಲೆಯ ಶಿಕ್ಷಕರಾದ ನಾರಾಯಣ ಬಳ್ಳುಳ್ಳಾಯ, ಉದಯ ಕುಮಾರ್ ಎಡನೀರು, ಉಸಾಮ್ ಪಳ್ಳಂಗೋಡು, ಮೇಘಾ ಟೀಚರ್ ಇದ್ದರು. ಅಡೂರು ಸರ್ಕಾರಿ ಶಾಲೆಯ ಮಲಯಾಳ ಹಾಗೂ ಕನ್ನಡ ವಿಭಾಗದ ಸುಮಾರು 15 ಮಂದಿ ಮಕ್ಕಳು ಸಂವಾದದಲ್ಲಿ ಭಾಗವಹಿಸಿದ್ದರು.


