ಬದಿಯಡ್ಕ: ಸಾಂಸ್ಕøತಿಕ, ಜಾನಪದ, ಸಾಹಿತ್ತಿಕ ಕಾರ್ಯಕ್ರಮಗಳ ಮೂಲಕ ಸದಾ ಕ್ರಿಯಾಶೀಲವಾಗಿ, ಗಡಿನಾಡಿನ ಜನಮಾನಸದಲ್ಲಿ ಅಚ್ಚಳಿಯದ ಶ್ಲಾಘನೀಯ ಚಟುವಟಿಕೆಗಳನ್ನು ನಡೆಸುತ್ತಿರುವ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಹಾಗೂ ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಜಂಟಿ ಆಶ್ರಯದಲ್ಲಿ ಇಂದು(ನ.23) ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವೈವಿಧ್ಯಮಯವಾಗಿ ನಡೆಯಲಿದೆ.
ಬೆಳಿಗ್ಗೆ 10.30 ರಿಂದ ಆರಂಭಗೊಳ್ಳಲಿರುವ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಉದ್ಘಾಟಿಸುವರು ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರ ಅಧ್ಯಕ್ಷತೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಅವರು ಲೇಖಕ, ಪತ್ರಕರ್ತ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಖಜಾಂಜಿ ರವಿ ನಾಯ್ಕಾಪು ಬರೆದ ಸ್ನೇಹಗಂಗೆ ಕೃತಿಯನ್ನು ಬಿಡುಗಡೆಗೊಳಿಸುವರು. ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿವಿಧ ಕ್ಷೇತ್ರದಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಿರುವ 11 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವರು.
ಮಂಜೇಶ್ವರ ಶಾಸಕ ಎಂ.ಸಿ.ಕಮುದ್ಧೀನ್, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕಾ.ಜ.ಪ. ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕೇರಳ ಬ್ಯಾರಿ ಅಕಾಡೆಮಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಸಂಕಬೈಲು ಸತೀಶ ಅಡಪ, ಝಡ್ ಎ ಕಯ್ಯಾರ್, ನ್ಯಾಯವಾದಿ ಥೋಮಸ್ ಡಿ ಸೋಜ, ಬಾಲಕೃಷ್ಣ ಅಗ್ಗಿತ್ತಾಯ, ಶ್ರೀಕಾಂತ್ ನೆಟ್ಟಣಿಗೆ, ಸಂಧ್ಯಾಗೀತಾ ಬಾಯಾರು, ವಿದ್ಯಾಗಣೇಶ್ ಅಣಂಗೂರು ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಗುವುದು. ನ್ಯಾಯವಾದಿ ಅಡೂರು ಉಮೇಶ ನಾಯ್ಕ್(ಕನ್ನಡ ಸೇವೆ), ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ(ಯಕ್ಷಗಾನ), ಶಿವರಾಮ ಕಾಸರಗೋಡು(ಕನ್ನಡ ಸಂಘಟನೆ), ವೇಣುಗೋಪಾಲ ಶೇಣಿ(ಪತ್ರಿಕಾ ರಂಗ), ರಾಘವನ್ ಬೆಳ್ಳಿಪ್ಪಾಡಿ(ಸಹಕಾರ), ಟಿ.ವಿ.ರಮೇಶ್ ಮಡಿಕೇರಿ(ಸಾಹಿತ್ಯ), ಮುಹಮ್ಮದ್ ಬಡ್ಡೂರು(ಸಾಹಿತ್ಯ), ಜೋಸೆಫ್ ಕ್ರಾಸ್ತಾ(ಸಮಾಜಸೇವೆ), ಡಾ.ಮೀನಾಕ್ಷಿ ರಾಮಚಂದ್ರ(ಶಿಕ್ಷಣ), ಡಾ.ವಿರಾಲ್ ಶಂಕರ ಶೆಟ್ಟಿ(ಸಮಾಜಸೇವೆ), ಎಸ್.ಟಿ.ಕರ್ಕೇರ(ಜಾನಪದ), ಹಾಗೂ ಸಂಘಟನೆಗಳಾದ ನೇತಾಜಿ ಗ್ರಂಥಾಲಯ ಪೆರ್ಲ, ಮಣಿಮುಂಡ ಎಜ್ಯುಕೇಶನ್ ಸೊಸೈಟಿ ಉಪ್ಪಳ, ಶುಭದ ಎಜ್ಯುಕೇಶನ್ ಟ್ರಸ್ಟ್ ನಾವುಂದ ಗೌರವಾಭಿನಂದನೆಗೆ ಭಾಜನರಾಗವರು.
ಬೆಳಿಗ್ಗೆ 9 ರಿಂದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅವರ ಅಧ್ಯಕ್ಷತೆಯಲ್ಲಿ ಗಡಿನಾಡ ಕ್ನನಡ ರಾಜ್ಯೋತ್ಸವ ಕವಿಗೋಷ್ಠಿ ನಡೆಯಲಿದೆ.


