ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಏಡುಕೊಂಡಲವಾಡಾ ವೇಂಕಟರಮಣಾ ಗೋವಿಂದಾ ಗೋಽಽಽಽಽಽವಿಂದಾ....
“ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ. ಭಗವಾನ್ ವೆಂಕಟೇಶ್ವರರ ಉಚಿತ ದರ್ಶನ. ಹಿರಿಯ ನಾಗರಿಕರಿಗೆ ತಿರುಪತಿ. ಎರಡು ಸ್ಲಾಟ್‌ಗಳನ್ನು ನಿವಾರಿಸಲಾಗಿದೆ. ಒಂದು ಬೆಳಿಗ್ಗೆ 10ಕ್ಕೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ. ನೀವು ಫೋಟೋ ಐಡಿಯೊಂದಿಗೆ ವಯಸ್ಸಿನ ಪುರಾವೆಗಳನ್ನು ತಯಾರಿಸಬೇಕು ಮತ್ತು ಎಸ್ 1 ಕೌಂಟರ್‌ನಲ್ಲಿ ವರದಿ ಮಾಡಬೇಕು. ಗ್ಯಾಲರಿಯಿಂದ ದೇವಾಲಯದ ಬಲಭಾಗದ ಗೋಡೆಗೆ ರಸ್ತೆ ದಾಟುವ ಸೇತುವೆಯ ಕೆಳಗೆ. ಯಾವುದೇ ಹೆಜ್ಜೆಗಳನ್ನು ಏರುವ ಅಗತ್ಯವಿಲ್ಲ. ಉತ್ತಮ ಆಸನ ವ್ಯವಸ್ಥೆ ಲಭ್ಯವಿದೆ. ನೀವು ಒಳಗೆ ಕುಳಿತಾಗ ಬಿಸಿ ಸಾಂಬಾರ್ ಅಕ್ಕಿ ಮತ್ತು ಮೊಸರು ಅಕ್ಕಿ ಮತ್ತು ಬಿಸಿ ಹಾಲು ನೀಡಲಾಗುತ್ತದೆ. ಎಲ್ಲವೂ ಉಚಿತ. ನೀವು ಎರಡು ಲಾಡುಗಳನ್ನು ಪಡೆಯುತ್ತೀರಿ, ಅದಕ್ಕಾಗಿ ನೀವು ರೂ 20/- ಪಾವತಿಸಬೇಕಾಗುತ್ತದೆ. ಹೆಚ್ಚಿನ ಲಡ್ಡಸ್ಗಾಗಿ ನೀವು ಪ್ರತಿ ಲಡ್ಡುಗೆ 25/- ರೂ. ದೇವಾಲಯದ ನಿರ್ಗಮನ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಪ್ರವೇಶ ಮತ್ತು ವೈಸ್-ವರ್ಸಾ ಕೌಂಟರ್‌ನಲ್ಲಿ ನಿಮ್ಮನ್ನು ಬೀಳಿಸಲು ಬ್ಯಾಟರಿ ಕಾರು ಲಭ್ಯವಿದೆ. ದರ್ಶನದ ಸಮಯದಲ್ಲಿ ಎಲ್ಲಾ ಇತರ ಕ್ಯೂಗಳನ್ನು ನಿಲ್ಲಿಸಲಾಗುತ್ತದೆ. ಸೀನಿಯರ್ ಸಿಟಿಜನ್ ದರ್ಶನ್ ಅನ್ನು ಯಾವುದೇ ತಳ್ಳುವಿಕೆ ಅಥವಾ ಒತ್ತಡವಿಲ್ಲದೆ ಅನುಮತಿಸಲಾಗಿದೆ. ಭಗವಂತನ ದರ್ಶನದ ನಂತರ 30 ನಿಮಿಷಗಳಲ್ಲಿ ನೀವು ದರ್ಶನದಿಂದ ಹೊರಬರಬಹುದು. ಹೆಲ್ಪ್‌ಡೆಸ್ಕ್ ತಿರುಮಲಾ ಅನ್ನು ಸಂಪರ್ಕಿಸಿ. ಮಾಹಿತಿ ಸೌಜನ್ಯ: ಟಿಟಿಡಿ."
- ಇದು ತಿರುಮಲ-ತಿರುಪತಿ ದೇವಸ್ಥಾನದ ಪ್ರಕಟಣೆ. ಇದನ್ನು ಸಾಕ್ಷಾತ್ ತಿಮ್ಮಪ್ಪನೇ ಮೊದಲು ಇಂಗ್ಲಿಷ್‌ನಲ್ಲಿ ಬರೆದು, ಆಮೇಲೆ ಕನ್ನಡಕ್ಕೆ ಅನುವಾದಿಸುವಂತೆ ಗೂಗಲ್‌ಬ್ರಹ್ಮನಿಗೆ ಆದೇಶವಿತ್ತನು. ಗೂಗಲ್‌ಬ್ರಹ್ಮನು ತಿಮ್ಮಪ್ಪನ ಅಪ್ಪಣೆಯನ್ನು ಶಿರಸಾವಹಿಸಿ ಈ ರೀತಿ ಬರೆದುಕೊಟ್ಟನು. ಏತನ್ಮಧ್ಯೇ ಏನಾಯ್ತೆಂದರೆ, ವಿಶೇಷ ದರ್ಶನದ ಎರಡು ಸ್ಲಾಟ್‍ಗಳನ್ನು ನಿವಾರಿಸಲಾಯಿತು. ಹಿರಿಯ ನಾಗರಿಕರು ತಂತಮ್ಮ ವಯಸ್ಸಿನ ಪುರಾವೆಗಳನ್ನು ತಾವೇ ತಯಾರಿಸಬೇಕಾಗಿ ಬಂತು. “ಗೋಡೆಗೆ ರಸ್ತೆ ದಾಟುವ ಸೇತುವೆಯ ಕೆಳಗೆ" ಅಂದರೆ ಎಲ್ಲಿ ಎಂದು ಹಿರಿಯ ನಾಗರಿಕರು ತಲೆ ಕೆರೆದುಕೊಳ್ಳುವಂತಾಯ್ತು. ಬಿಸಿ ಸಾಂಬಾರ್ ಮತ್ತು ಮೊಸರಿನ ಜೊತೆ ಅಕ್ಕಿಯನ್ನೇ ನೀಡಲಾಗುವುದರಿಂದ ಅನ್ನ ಮಾಡಿಕೊಳ್ಳಲು ಸ್ಟವ್ ಮತ್ತು ಕುಕ್ಕರ್ ವ್ಯವಸ್ಥೆ ಬಗ್ಗೆ ಚಿಂತಿಸಬೇಕಾಯ್ತು. ಒಂದುವೇಳೆ ಸಾಧ್ಯವಾಗದಿದ್ದರೆ, ಅಕ್ಕಿಯನ್ನು ಜಗಿದು ನುಂಗಬೇಕು. ಹಲ್ಲಿಲ್ಲದ ಹಿರಿಯ ನಾಗರಿಕರ ಗತಿ ಏನು? ಇಪ್ಪತ್ತು ರೂಪಾಯಿಗೆ ಸಿಗುವ ಲಾಡು ರುಚಿಕರವೋ, ಇನ್ನೂ ಐದು ರೂಪಾಯಿ ಹೆಚ್ಚು ಕೊಟ್ಟರೆ ಸಿಗುವ ‘ಲಡ್ಡಸ್’ ರುಚಿಕರವೋ ಎಂಬ ಪ್ರಶ್ನೆಯೂ ಕೆಲವರಲ್ಲಿ ಮೂಡಿದೆ. ಅದಕ್ಕಿಂತಲೂ, ಕೌಂಟರ್‌ನಲ್ಲಿ ಬ್ಯಾಟರಿ ಕಾರು ಎಷ್ಟು ಮೇಲಿನಿಂದ ಬೀಳಿಸುತ್ತದೆ ಎಂದು ಎಣಿಸಿಕೊಂಡರೇ ಹೊಟ್ಟೆಯೊಳಗೆ ಲಡ್ಡು ಕುಣಿದಾಡಿದ ಅನುಭವ ಕೆಲವರಿಗೆ. ಅಂದಹಾಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಸೀನಿಯರ್ ಸಿಟಿಜನ್ ಆದನು? ಅವನಿಗೆ ಮಾತ್ರ ಯಾವುದೇ ತಳ್ಳುವಿಕೆ ಅಥವಾ ಒತ್ತಡವಿಲ್ಲದೆ ಏಕೆ ಅನುಮತಿಸಲಾಯ್ತು? ಎಂದು ಕೆಲವರು ಚಿಂತಿಸತೊಡಗಿದ ನಿದರ್ಶನಗಳೂ ಇವೆ!
[ಟಿಟಿಡಿ ಹೊರಡಿಸಿರುವ ಕನ್ನಡ ಪ್ರಕಟಣೆಯನ್ನು ಯಥಾವತ್ತಾಗಿ ಗಮನಕ್ಕೆ ತಂದವರು: ಬೆಂಗಳೂರಿನಿಂದ ಲಕ್ಷ್ಮೀ ಜಿ.ಎನ್.]
====
೨. ಉಳುವವನೇ ಹೊಲದೊಡೆಯ. ಹೂಳುವವನು?
೨. ಉಳುವವನೇ ಹೊಲದೊಡೆಯ. ಹೂಳುವವನು?
“ಬಸವ-ನಂದಿ ಹೊಲ ಹೂಳ್ತಾರೆ: ಫಲ ಖಚಿತ" ಹೀಗೆಂದು ಬಿಜೆಪಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕಂದಾಯ ಸಚಿವ ಹಾಗೂ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಚುನಾವಣಾ ಉಸ್ತುವಾರಿ ಆರ್.ಅಶೋಕ್ ಹೇಳಿದರಂತೆ. ಉದಯವಾಣಿ ಬೆಂಗಳೂರು ಆವೃತ್ತಿ ವರದಿ ಮಾಡಿದೆ. “ಹೊಲ ಹೂಳ್ತಾರೆ" ಎಂದು ಆರ್.ಅಶೋಕ್ ಹೇಳಿದರೇ? ಅಥವಾ ಉದಯವಾಣಿಯ ಪತ್ರಕರ್ತನಿಗೆ ಹೊಲವನ್ನು ಉಳುವುದು ಗೊತ್ತಿಲ್ಲವಾದ್ದರಿಂದ "ಹೊಲ ಹೂಳ್ತಾರೆ" ಎಂದು ಬರೆದನೇ? ತಿಳಿದುಬಂದಿಲ್ಲ. ‘ಉಳುವ ಯೋಗಿಯ ನೋಡಲ್ಲಿ...’ ಎಂದು ರೈತನ ಬಗ್ಗೆ ಕುವೆಂಪು ಎದೆಯುಬ್ಬಿಸಿ ಅಷ್ಟು ಅಭಿಮಾನದಿಂದ ಹಾಡಿದ್ದರು. ಇಲ್ಲಿ ನೋಡಿದರೆ ಭಾಷೆ ಇಲ್ಲದ ಮಂತ್ರಿಗಳೂ, ಪತ್ರಕರ್ತರೂ ಸೇರಿ ಹೊಲವನ್ನೂ ಹೂಳ್ತಾರೆ, ಹೊಲದೊಡೆಯನನ್ನೂ ಹೂಳ್ತಾರೆ, ನಿರ್ದಾಕ್ಷಿಣ್ಯವಾಗಿ ಭಾಷೆಯನ್ನೂ ಹೂಳ್ತಾರೆ. ನಿಜವಾಗಿ, ಸಜೀವ ಹೂಳಬೇಕಾದ್ದು ಈ ರೀತಿ ಭಾಷೆಯನ್ನು ಕೊಲ್ಲುವ ದರಿದ್ರ ಪೀಡೆಗಳನ್ನು.
ಬಹುಶಃ, "ಕೊಚ್ಚೇವು ಕನ್ನಡದ shapeಅ" ಎಂಬುದು ಈಗಿನ ಕೆಲ ಪತ್ರಕರ್ತರ ಧ್ಯೇಯವಾಕ್ಯ. ಕನ್ನಡದ shapeಅನ್ನು ಯಾವಯಾವ ರೀತಿಗಳಲ್ಲಿ ಕೊಚ್ಚಿಹಾಕುತ್ತಿದ್ದಾರೆಂದು ಅರಿಯಲು ಈ ನಿದರ್ಶನಗಳನ್ನೂ ಗಮನಿಸಿ.
ಅ) “ಪೊಲೀಸರು ಲಾಠಿ ಪ್ರಕಾರ ನಡೆಸಿದ್ದಾಗ ಗಾಯಗೊಂಡ ಜೆಎನ್‌ಯು ವಿದ್ಯಾರ್ಥಿಗಳು". [ಪ್ರಜಾವಾಣಿ. ೨೦ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಶಚಿದೇವಿ] ಹ-ಕಾರ ಅ-ಕಾರ ಗೊಂದಲಕ್ಕೆ ಈಗ ಕ-ಕಾರವೂ ಸೇರಿಕೊಂಡಿತು!
ಆ) “ಪುತ್ತೂರಿನಲ್ಲಿ ಅಜ್ಜ, ಮೊಮ್ಮಗಳ ನಿಗೂಢ ಹತ್ಯೆ. ಓರ್ವ ಪೊಲೀಸ್ ವಶಕ್ಕೆ" [ವಿಜಯವಾಣಿ. ೨೦ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ಮಂಗಳೂರಿನಿಂದ ಶಾಂತಪ್ಪಬಾಬು] ಅಂದರೆ, ಪೊಲೀಸನೇ ಹತ್ಯೆ ಮಾಡಿದ್ದು? ಅದಕ್ಕೋಸ್ಕರ ಅವನನ್ನು ವಶಕ್ಕೆ ತೆಗೆದುಕೊಂಡದ್ದು?
ಇ) “ಸೊಸೆ ಕೊಂದಿದ್ದ ಮಾವ ಆತ್ಮಹತ್ಯೆ" [ವಿಜಯವಾಣಿ. ೨೦ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಅನಂತ ತಾಮ್ಹನಕರ್]. ಸೊಸೆಯು ಮಾವನನ್ನು ಕೊಂದರೆ, ಆಮೇಲೆ ಆ ಮಾವ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಸೊಸೆ ತಂದ ಸೌಭಾಗ್ಯ? ವಿಜಯವಾಣಿಯ ಪತ್ರಕರ್ತನನ್ನು ಬಾಧಿಸಿದ್ದು ಸೊಸೆಯ ಪ್ರೇತವೋ ಮಾವನ ಪ್ರೇತವೋ?
ಈ) ‘ಚಲಿಸುತ್ತಿದ್ದ ಬಸ್ಸಿನಿಂದ ವಿದ್ಯಾರ್ಥಿನಿ ತಳ್ಳಿದ ಕಂಡಕ್ಟರ್ ಸಸ್ಪೆಂಡ್" [ವಿಜಯವಾಣಿ. ೨೦ನವೆಂಬರ್೨೦೧೯] ನಿಜವಾಗಿ ನಡೆದದ್ದೇನೆಂದರೆ ವಿದ್ಯಾರ್ಥಿನಿಯನ್ನು ಕಂಡಕ್ಟರನೇ ಬಸ್ಸಿನಿಂದ ಹೊರಕ್ಕೆ ತಳ್ಳಿದ್ದು. ಆದರೆ ವಿಜಯವಾಣಿ ಪತ್ರಕರ್ತನ ಪ್ರಕಾರ ವಿದ್ಯಾರ್ಥಿನಿಯೇ ಕಂಡಕ್ಟರನನ್ನು ಹೊರಕ್ಕೆ ತಳ್ಳಿದಳು!
ಉ) “ಸ್ವಾಮೀಜಿ ಕ್ಷಮೆ ಕೇಳುವ ಪ್ರಮೇಯವಿಲ್ಲ" [ಉದಯವಾಣಿ. ೨೦ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ಶ್ರೀಕಾಂತ್ ಬೆಂಗಳೂರು]. “ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ಎಂದು ಹೆಸರಿಡುವುದಕ್ಕೆ ನನ್ನ ತಕರಾರು ಇಲ್ಲ. ನಾನು ಯಾವುದೇ ಸ್ವಾಮೀಜಿ ವಿರುದ್ಧ ಮಾತನಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಅರ್ಥಾತ್- ಸಚಿವರು ಸ್ವಾಮೀಜಿಯ ಕ್ಷಮೆ ಕೇಳುವ ಪ್ರಮೇಯವಿಲ್ಲ. ಆದರೆ ಉದಯವಾಣಿ ಪತ್ರಕರ್ತನ ಪ್ರಕಾರ ಸ್ವಾಮೀಜಿ ಕ್ಷಮೆ ಕೇಳುವ ಪ್ರಮೇಯವಿಲ್ಲ! ಸ್ವಾಮೀಜಿ ಯಾಕೆ ಕ್ಷಮೆ ಕೇಳಬೇಕು?
ಊ) “ಸ್ವಾಮೀಜಿ ಜತೆ ಬಿಎಸ್‌ವೈ ಪತ್ರನ ಸಂಧಾನ ವಿಫಲ" [ವಿಶ್ವವಾಣಿ. ೧೯ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು:ನಾಗೇಂದ್ರರಾವ್ ಅರಸೀಕೆರೆ]. ಇದು ಬೇರೆ ಸ್ವಾಮೀಜಿಯ ಕಥೆ. ಸಂಧಾನ ವಿಫಲವಾದ್ದರಿಂದ ಬಿಎಸ್‌ವೈ ಪುತ್ರನ ಉ-ಕಾರದ (ಅಹಂಕಾರದ?) ಕೊಂಬು ಮುರಿಯಿತು. ಪುತ್ರ ’ಪತ್ರ’ನಾದ! ’ಕಾಗದ’ದ ಹುಲಿಯಾದ?
ಋ) “ಹಸಿವು ಹೋಗಲಾಡಿಸಲಿ ಜ್ಞಾನ" [ವಿಜಯವಾಣಿ. ೧೮ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು:ಪುತ್ತೂರಿನಿಂದ ಕೆ.ಜಿ.ಭಟ್]. ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಡಾ.ಶಿವಕುಮಾರ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರಂತೆ. ಅವರಂತೂ ಹಾಗೆ ಅಸಂಬದ್ಧವಾಗಿ ಅರ್ಥಹೀನವಾಗಿ ಖಂಡಿತ ಹೇಳಿರಲಿಕ್ಕಿಲ್ಲ. ಆದರೆ ವಿಜಯವಾಣಿ ಪತ್ರಕರ್ತ ಈ ವಾಕ್ಯದ ಅರ್ಥವನ್ನು ವಿವರಿಸಬಲ್ಲನೇ?
ಎ) “ಮನೆಗಳವು ಮಾಡಿದ ಶ್ರೀಗಂಧಕಾವಲು ಎಮ್ಮೆ ಸೆರೆ" [ವಿಜಯವಾಣಿ. ೧೭ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ನಾಗೇಶ್ ಬೆಂಗಳೂರು]. ಯಾರೇ ಕೂಗಾಡಲೀ ಊರೇ ಹೊರಾಡಲೀ ನೆಮ್ಮದಿಗೆ ಭಂಗ ತಂದುಕೊಳ್ಳದಿದ್ದ, ಸಾಟಿಯೇ ಇಲ್ಲದ, ಎಮ್ಮೆ ಈಗ ಮನೆಗಳವು ಮಾಡಿ ಸೆರೆಸಿಕ್ಕಿಕೊಂಡಿತೇನೋ ಅಂದುಕೊಳ್ಳಬೇಕು. ಆಮೇಲೆ ನೋಡಿದರೆ ‘ಎಮ್ಮೆ’ ಎಂಬುದು ಕಳ್ಳನೊಬ್ಬನ ಗುಪ್ತನಾಮವಂತೆ!
ಏ) “ದೇವಾಲಯ ಬಾಗಿಲು ಮುರಿದ ಬೆಳ್ಳಿ ಕಿರೀಟ ಕಳವು" [ಆಂದೋಲನ. ೧೫ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಶ್ರೀಮತಿ ಅಭ್ಯಂಕರ್]. ಬೆಳ್ಳಿ ಕಿರೀಟವು ದೇವಾಲಯದ ಬಾಗಿಲನ್ನು ಮುರಿಯಲು ಯಶಸ್ವಿಯಾಯ್ತು. ಆದರೆ ಹಾಗೆ ಮಾಡುತ್ತಿರುವಾಗಲೇ ಅದನ್ನು ಯಾರೋ ಕದ್ದೊಯ್ದರು. ಅಯ್ಯೋ ದೇವರೇ!
ಐ) "ಮಧುಮಗನಿಗೆ ಶಾಕ್; ಅಮ್ಮ-ಮಗನಿಗೆ ಕೊಕ್" [ವಿಜಯವಾಣಿ. ೧೪ನವೆಂಬರ್೨೦೧೯. ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಅನಂತ ತಾಮ್ಹನಕರ್]. ಪುರಸಭೆ/ನಗರಸಭೆ/ಮಹಾನಗರಪಾಲಿಕೆ ಚುನಾವಣಾ ಫಲಿತಾಂಶಗಳ ವರದಿಯಲ್ಲಿ ಹೀಗೊಂದು ಸುದ್ದಿ. ಕಂಪ್ಲಿ ಪುರಸಭೆ ಚುನಾವಣೆಯಲ್ಲಿ ಸೋತ ಕಾಂಗೈ ಅಭ್ಯರ್ಥಿ ಆವತ್ತೇ ಮದುವೆ ಸಂಭ್ರಮದಲ್ಲಿದ್ದನಂತೆ. ಮದುಮಗನನ್ನು ವಿಜಯವಾಣಿ ಗುರುತಿಸಿದ್ದು ಮಧುಮಗ ಎಂದು. ಆವತ್ತು ವಿಜಯವಾಣಿಯಲ್ಲಿ ಪ್ರತಿ ಪುಟದಲ್ಲೂ ಮಧುಮೇಹ ರೋಗದ ಬಗ್ಗೆ ಅರಿವು ಮೂಡಿಸುವ ಸಂದೇಶಗಳು ಪ್ರಕಟವಾಗಿದ್ದವು. ಹಾಗೆ ‘ಮಧು’ವಿನ ಗುಂಗಿನಲ್ಲಿದ್ದ ಪತ್ರಕರ್ತ ಮದುಮಗನನ್ನು ಮಧುಮಗನನ್ನಾಗಿಸಿರಬೇಕು.
ಈಗ ನೀವೇ ಹೇಳಿ. ಹೂಳಬೇಕಾದ್ದು ಯಾರನ್ನು?
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ನಿಬಿಡ ಸರಿ. ದಟ್ಟವಾದ ಅಥವಾ ಸಾಂದ್ರವಾದ ಎಂಬ ಅರ್ಥವುಳ್ಳ ಮೂಲ ಸಂಸ್ಕೃತ ಪದ. ಇದನ್ನು ನಿಭಿಡ, ನಿಬಿಢ ಅಂತೆಲ್ಲ ಮಹಾಪ್ರಾಣ ಅಕ್ಷರಗಳನ್ನು ಬಳಸಿ ಬರೆಯಬಾರದು.
ಆ) ವ್ಯಥೆ ಸರಿ. ಚಿಂತೆ, ನೋವು, ಯಾತನೆ ಎಂಬ ಅರ್ಥ. ಸಂಸ್ಕೃತದ ‘ವ್ಯಥಾ’, ಕನ್ನಡದಲ್ಲಿ ವ್ಯಥೆ ಆಗಿದೆ. ಅದನ್ನು ವ್ಯೆಥೆ ಎಂದು ಬರೆಯಬಾರದು/ಉಚ್ಚರಿಸಬಾರದು.
ಇ) ಲಕ್ಷ್ಯ ಸರಿ. ಗುರಿ ಅಥವಾ ಧ್ಯೇಯ ಎಂಬ ಅರ್ಥ. ಗಮನದಲ್ಲಿರುವುದು ಲಕ್ಷ್ಯ. ಗಮನ ತಪ್ಪಿಹೋದರೆ ನಿರ್ಲಕ್ಷ್ಯ. ಲಕ್ಷಣಕ್ಕೆ ವಿಷಯವಾದುದು, ವ್ಯಾಖ್ಯೆಯೊಂದಿಗೆ ಹೇಳಲ್ಪಡುವುದು ಲಕ್ಷ್ಯ. ಇದನ್ನು ಸಂಖ್ಯಾವಾಚಕ ‘ಲಕ್ಷ’ದೊಂದಿಗೆ ಗೊಂದಲ ಮಾಡಿಕೊಳ್ಳಬಾರದು. ಲಕ್ಷ ದೀಪೋತ್ಸವದ ಶಾಂತಿಯುತ ಆಚರಣೆ ಸದ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಯವರ ಲಕ್ಷ್ಯ.
ಈ) ಸಮಷ್ಟಿ ಸರಿ. ಸಮಗ್ರತೆ ಎಂಬ ಅರ್ಥ. ಇಂಗ್ಲಿಷ್‌ನಲ್ಲಾದರೆ comprehensiveness, all-inclusiveness. ಸಮಷ್ಠಿ ಎಂದು ಮಹಾಪ್ರಾಣ ಠ ಒತ್ತು ಕೊಟ್ಟು ಬರೆಯಬಾರದು. ‘ಸಮಷ್ಟಿ’ ಪದದ ವಿರೋಧಪದ ‘ವ್ಯಷ್ಟಿ’ ಇಲ್ಲೂ ಅಲ್ಪಪ್ರಾಣ ಟ ಒತ್ತು. ವ್ಯಷ್ಟಿ ಅಂದರೆ ಪ್ರತ್ಯೇಕತೆ, individuality.
ಉ) ಮುಷ್ಟಿ ಸರಿ. ಕೈಯ ಬೆರಳುಗಳನ್ನು ಮಡಚಿಕೊಂಡ ರೀತಿ. ಯಾವುದೋ ಧಾನ್ಯವನ್ನು ಮುಷ್ಟಿಯಲ್ಲಿ ಹಿಡಿದುಕೊಂಡಿದ್ದಿರಬಹುದು, ಅಥವಾ ಮುಷ್ಟಿಯುದ್ಧಕ್ಕಾಗಿ (fist-fighting) ಮುಷ್ಟಿ ಬಿಗಿದುಕೊಂಡದ್ದಿರಬಹುದು. ಕಪಿಯು ತನ್ನ ಕೈಗೆ ಸಿಕ್ಕಿದ ವಸ್ತುವನ್ನು ಬಿಗಿಯಾದ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದುಕೊಳ್ಳುತ್ತದಾದ್ದರಿಂದ ‘ಕಪಿಮುಷ್ಟಿ’ ಎಂಬ ಆಲಂಕಾರಿಕ ಪದಬಳಕೆ. ಮುಷ್ಠಿ ಎಂದು ಠ ಒತ್ತಕ್ಷರ ಬಳಸಿ ಬರೆದರೆ ತಪ್ಪು.
ಬರಹ-ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ




