ಬದಿಯಡ್ಕ: ಅತೀ ಹಿಂದುಳಿದ ಪೆರಡಾಲ ಕೊರಗ ಕಾಲನಿಯು ನವಜೀವನದತ್ತ ಕಾಲಿಡುತ್ತಿದೆ. ಪೆರಡಾಲ ನವಜೀವನ ಶಾಲೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎಸ್‍ಪಿಸಿ ವಿದ್ಯಾರ್ಥಿಗಳು, ಬದಿಯಡ್ಕ ಜನಮೈತ್ರಿ ಪೊಲೀಸ್ ಹಾಗೂ ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಗುರುವಾರ ವಿದ್ಯುತ್ ಸಂಪರ್ಕವಿರುವ ಕಾಲನಿಯ ಎಲ್ಲಾ ಮನೆಗಳಿಗೆ ಫ್ಯಾನ್ ಹಾಗೂ ಪೆರಡಾಲ ಕಾಲನಿಯಲ್ಲಿರುವ ಏಕೋಪಾಧ್ಯಾಯ ಶಾಲೆಗೆ ಬೆಂಚ್, ಡೆಸ್ಕ್, ಫ್ಯಾನ್ ವಿತರಿಸಲಾಯಿತು. ಬದಿಯಡ್ಕ ಸಿಐ ಅನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್.ಎಸ್.ಎಸ್. ಜಿಲ್ಲಾ ಸಂಚಾಲಕ ಹರಿದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲನಿಯಲ್ಲಿ ಅಸೌಖ್ಯದಲ್ಲಿರುವ ವ್ಯಕ್ತಿಗಳ ಮನೆಗೆ ವಿತರಿಸಿದ ಮಂಚದ ವ್ಯವಸ್ಥೆಯನ್ನು ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಮಾಧವನ್ ಭಟ್ಟಾತ್ತಿರಿ ಹಸ್ತಾಂತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ತಂಗಮಣಿ ಟಿ., ಎನ್‍ಎಸ್‍ಎಸ್‍ನ ಶಾಹುಲ್ ಹಮೀದ್, ಟ್ರೈಬಲ್ ಎಕ್ಸೆಂಟ್ಶನ್ ಅಧಿಕಾರಿ ಮುಹಮ್ಮದ್ ಶಾಹಿದ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಊರುಕೂಟದ ಪ್ರಧಾನೆ ವಿಮಲ, ಏಕೋಪಾಧ್ಯಾಯ ಶಾಲೆಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ, ರಾಮ ಬದಿಯಡ್ಕ, ಎಸ್.ಟಿ.ಪ್ರಮೋಟರ್ ಪುಷ್ಪವೇಣಿ, ಅಧ್ಯಾಪಕರಾದ ಉಣ್ಣಿಕೃಷ್ಣನ್, ರಾಜೇಶ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ಕೃಷ್ಣ ಯಾದವ್ ಅಗಲ್ಪಾಡಿ ಉಪಸ್ಥಿತರಿದ್ದರು. ಬದಿಯಡ್ಕ ಠಾಣಾಧಿಕಾರಿ ಅನೀಶ್ ಸ್ವಾಗತಿಸಿ, ಎನ್‍ಎಸ್‍ಎಸ್ ಸಂಚಾಲಕ ಶ್ರೀನಾಥ್ ವಂದಿಸಿದರು. ಅಧ್ಯಾಪಕ ರಾಜೀವನ್ ನಿರೂಪಿಸಿದರು. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.
ನವಜೀವನದತ್ತ ಕಾಲನಿವಾಸಿಗಳು :
ಅನೇಕ ಸಮಯಗಳಿಂದ ಕಾಲನಿವಾಸಿಗಳ ಮನೆಯ ವಿದ್ಯುತ್ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದರು. ಇದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿದ ಮುಂಬೈಯಲ್ಲಿರುವ ಕೇರಳೀಯ ವ್ಯಕ್ತಿಯೊಬ್ಬರು ಹೆಸರು ಹೇಳಲಿಚ್ಚಿಸದೆ ಬಡ್ಡಿಸಮೇತ 29.762 ರೂಪಾಯಿಯನ್ನು ಕೂಡಲೇ ಓನ್‍ಲೈನ್ ಮೂಲಕ ಕಟ್ಟಿದರು. ಈ ವಿಚಾರವನ್ನು ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಪೆರಡಾಲ ನವಜೀವನ ಶಾಲೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎಸ್‍ಪಿಸಿ, ಬದಿಯಡ್ಕ ಜನಮೈತ್ರಿ ಪೊಲೀಸ್ ಹಾಗೂ ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಕಾಲನಿಯಲ್ಲಿ ವಿಚ್ಚೇದಿಸಲ್ಪಟ್ಟ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಕ್ರಮಕೈಗೊಳ್ಳಲಾಗಿತ್ತು. ಈ ವೇಳೆ ಕಾಲನಿಯ ಮನೆಗಳ ವಯರಿಂಗ್ ಎಲ್ಲಾ ಹಾಳಾಗಿತ್ತು. ನಿಸ್ವಾರ್ಥ ಮನೋಭಾವದ ಕೆಲವೊಂದು ಮಂದಿ ಇವರೊಂದಿಗೆ ಜೊತೆಗೂಡಿ ನಂತರ ವಿದ್ಯುತ್ ತಲುಪದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಯಿತು. ಮನೆಗಳ ವಯರಿಂಗ್‍ಗಳನ್ನು ಸರಿಪಡಿಸಿ ಇದೀಗ 21 ಮನೆಗಳಿಗೆ ಫ್ಯಾನ್ ನೀಡಲಾಗಿದೆ.
ಮುಂದಿನ ಕಾರ್ಯಯೋಜನೆ :
ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಉಪಯೋಗಶೂನ್ಯವಾದ ವಾಸವಿಲ್ಲದ ಮನೆಗಳ ದುರಸ್ಥಿಗೈಯುವ ಯೋಜನೆಯಿದೆ. ಇದಕ್ಕಾಗಿ ಎಲ್ಲಾ ರೂಪುರೇಶೆಗಳನ್ನು ಈಗಾಗಲೇ ತಯಾರಿಸಲಾಗಿದೆ.



