ನವದೆಹಲಿ: ವಿಶೇಷ ಭದ್ರತಾ ಪಡೆ(ಎಸ್ ಪಿಜಿ) ತಿದ್ದುಪಡಿ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಸದಸ್ಯರಿಗೆ ಇನ್ನು ಮುಂದೆ ಉನ್ನತ ಕಮಾಂಡೊಗಳ ಎಸ್ ಪಿಜಿ ಭದ್ರತೆ ಸಿಗುವುದಿಲ್ಲ.
ಶುಕ್ರವಾರ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ ಸಂಸದೀಯ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘಾವಲ್, ಎಸ್ ಪಿಜಿ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮುಂದಿನ ವಾರ ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು ಎಂದರು. ಉದ್ದೇಶಿತ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಲೋಕಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸದನಕ್ಕೆ ಅವರು ತಿಳಿಸಿದರು. ಉನ್ನತ ಮಟ್ಟದ ಎಸ್ ಪಿಜಿ ಕಮಾಂಡೊಗಳು ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ, ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ನಿಕಟಪೂರ್ವ ಕುಟುಂಬ ಸದಸ್ಯರಿಗೆ ಅವರ ಜೀವಕ್ಕೆ ಇರುವ ಬೆದರಿಕೆಗಳಿಗನುಗುಣವಾಗಿ ಭದ್ರತೆ ಒದಗಿಸುತ್ತಾರೆ.
ಲೋಕಸಭೆಯಲ್ಲಿ ಮುಂದಿನ ವಾರ ಕಲಾಪದಲ್ಲಿ ಬೇರೆ ಮಸೂದೆಗಳ ಜೊತೆಗೆ ಎಸ್ ಪಿಜಿ(ತಿದ್ದುಪಡಿ)ಮಸೂದೆಯನ್ನು ಕೂಡ ಮಂಡಿಸಲಾಗುವುದು.ಇತ್ತೀಚೆಗೆ ಕೇಂದ್ರ ಸರ್ಕಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಿಗೆ ಸುಮಾರು 3 ದಶಕಗಳಿಂದಿದ್ದ ಎಸ್ ಪಿಜಿ ಕಮಾಂಡೊ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲಗಳೇ ನಡೆದಿವೆ.


