ಕುಂಬಳೆ: ಆಧುನಿಕ ವೈಜ್ಞಾನಿಕ ವೇಗದ ಇಂದಿನ ಯುಗದಲ್ಲೂ ಸಾಮಾಜಿಕ ಪಿಡುಗಾಗಿ ಸ್ವಾಥ್ಯ ಕೆಡಿಸುತ್ತಿರುವ ವರದಕ್ಷಿಣೆ ಎಂಬ ಮಹಾ ಕೂಪಕ್ಕೆ ಸೆಡ್ಡು ಹೊಡೆದು ಮಾದರಿಯಾಗಿರುವ ಜನಾಂಗ ಗಾಣಿಗ ಜನಾಂಗ. ವಾಣಿಯ ಅಥವಾ ಗಾಣಿಗ ಸಮುದಾಯದ ಕುಲದೇವರಾದ ಸೀತಾಂಗೋಳಿ ಸಮೀಪದ ಪೆರ್ಣೆ ಮುಚ್ಚಿಲೋಟ್ ಕಾವ್ ಶ್ರೀಭಗವತಿ ಕ್ಷೇತ್ರದಲ್ಲಿ ವಾರ್ಷಿಕ ಉದಯಾಸ್ತಮಾನ ಸಾಮೂಹಿಕ ವಿವಾಹ ಸೋಮವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನೆರವೇರಿತು. ಸೋಮವಾರ ನಡೆದ ಸಾಮೂಹಿಕ ವಿವಾಹದಲ್ಲಿ 22 ಜೋಡಿಗಳು ಹಸೆಮಣೆಗೇರಿದರು.
ಇಲ್ಲಿನ ಸಾಮೂಹಿಕ ವಿವಾಹದಲ್ಲಿ ಏನಿದೆ ಅಂತಹ ವೈಶಿಷ್ಟ್ಯತೆ": ಕೆಲವರಿಗೆ ಸಾಮೂಹಿಕ ವಿವಾಹವೆಂದರೆ ಕೀಳರಿಮೆ, ಪ್ರತಿಷ್ಠೆಯ ಕೊರತೆಯೆಂದು ಭಾವಿಸುವವರಿಗೆ ಗಾಣಿಗ ಸಮುದಾಯ ಎಂದಿಗೂ ಮಾದರಿ. ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತನಿರಲಿ ಅಥವಾ ಬಡವನಿರಲಿ, ಯಾವುದೇ ರೀತಿಯ ಭೇದಭಾವವಿಲ್ಲದೆ ಎಲ್ಲರೂ ಕೂಡಾ ಈ ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿಯೇ ಸರಳವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡಬೇಕೇ ಹೊರತು ಬೇರೆಲ್ಲೂ ವಿವಾಹವಾಗುವಂತಿಲ್ಲ! ಇದು ಕೇವಲ ಅವರವರ ಆಯ್ಕೆಗೆ ಬಿಟ್ಟ ವಿಚಾರವೂ ಅಲ್ಲ, ಬದಲಾಗಿ ಹಲವಾರು ತಲೆಮಾರುಗಳ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಕಟ್ಟುನಿಟ್ಟಿನ ನಿಯಮ. ಒಂದು ವೇಳೆ ಈ ಕಟ್ಟುಪಾಡನ್ನು ಮುರಿದು ಬೇರೆಡೆ ಮದುವೆಯಾದರೆ ಕುಲದೇವತೆಯಾದ ತಾಯಿ ಭಗವತಿಯ ಶಾಪ ತಟ್ಟುತ್ತದೆ ಅನ್ನುವ ಬಲವಾದ ನಂಬಿಕೆಯೂ ಇವರಲ್ಲಿದೆ. ನಿಶ್ಚಿತಾರ್ಥವಾದ ಬಳಿಕ ಪೆರ್ಣೆ ಕ್ಷೇತ್ರದಲ್ಲಿ ವಧೂವರರ ಹೆಸರು ನೊಂದಾಯಿಸಿ ವರನ ಕಡೆಯಿಂದ 1000 ರೂ. ವಧುವಿನ ಕಡೆಯಿಂದ 500 ರೂ. ಸಲ್ಲಿಸಿದಲ್ಲಿಗೆ ದೊಡ್ಡ ಜವಾಬ್ದಾರಿ ಮುಗಿದಂತೆ. ವರ್ಷದಲ್ಲಿ ಎರಡು ಬಾರಿ ನಡೆಯುವ ಇಲ್ಲಿಯ ಸಾಮೂಹಿಕ ವಿವಾಹದ ಒಂದರಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಕ್ಷೇತ್ರದ ಅಧಿಕೃತರು ಪ್ರಕಟಿಸಿದ ದಿನಾಂಕದಂದು ಸುಂದರವಾಗಿ ಅಲಂಕರಿಸಿಕೊಂಡು ಪೆರ್ಣೆ ಭಗವತಿಯಮ್ಮನ ಮಡಿಲ ಮಂಟಪದಲ್ಲಿ ಕುಳಿತುಬಿಟ್ಟರೆ ಸಾಕು. ಸಾಮೂಹಿಕ ಮದುವೆ ನಡೆದೇ ಬಿಡುತ್ತದೆ.
ಇಷ್ಟು ಮಾತ್ರವಲ್ಲದೆ, ವಧುವಿನ ಜೊತೆಗೆ ವರದಕ್ಷಿಣೆಯ ರೂಪದಲ್ಲಿ ಹಣ, ಹೊನ್ನು, ಕಾರು, ಬಂಗಲೆ ಮುಂತಾದವುಗಳನ್ನು ಕೊಡುವ ಪದ್ಧತಿ ಬಹುತೇಕ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಈ ಕಾಲಘಟ್ಟದಲ್ಲೂ, ವರದಕ್ಷಿಣೆ ಪಡೆಯಲೇಬಾರದೆಂಬ ಇನ್ನೊಂದು ನಿಯಮವನ್ನೂ ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಕೇವಲ ಸರ್ಕಾರಿ ಕಡತಗಳಲ್ಲಿ ಮಾತ್ರವೇ ದಾಖಲಾಗಿರುವ 'ವರದಕ್ಷಿಣೆ ನಿಷೇಧ ಪದ್ಧತಿ'ಯು ತಲೆಮಾರುಗಳ ಹಿಂದಿನಿಂದಲೂ ಯಾರ ಬಲವಂತವೂ ಇಲ್ಲದೆ ಸ್ವಯಂಪ್ರೇರಿತವಾಗಿ ಇಲ್ಲಿ ನಡೆದುಕೊಂಡು ಬರುತ್ತಿರುವುದು ಗಮನಾರ್ಹ ಸಂಗತಿ. ಈ ಸಮುದಾಯ ಹೆಮ್ಮೆ ಪಡುವಂತಹ ಇನ್ನೊಂದು ಬಹುಮುಖ್ಯ ವಿಚಾರವೇನೆಂದರೆ, ಇಡೀ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿ, ಒಂದು ಸಮುದಾಯದ ಎಲ್ಲಾ ಜನರನ್ನು ಆ ಕಟ್ಟುಪಾಡುಗಳಿಗೆ ಒಳಪಡಿಸಿ ಇಡೀ ಸಮಾಜಕ್ಕೇ ಮಾದರಿಯಾದಂತಹ ಕೀರ್ತಿ ಸಲ್ಲುವಂತದ್ದು ಕೂಡಾ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಗಾಣಿಗ ಸಮುದಾಯಕ್ಕೆ!
ಕುಲದೇವತೆ ಶ್ರೀ ಮುಚ್ಚಿಲೋಟ್ ಭಗವತಿ:
ತಾಯಿ ಭಗವತಿಯು ಗಾಣಿಗ ಸಮುದಾಯದ ಕುಲದೇವತೆಯಾಗಿದ್ದು ಸುಳ್ಯ, ಪುತ್ತೂರು, ಮಂಗಳೂರು, ಕುಂಬಳೆ, ಕಾಸರಗೋಡು ವ್ಯಾಪ್ತಿಯ ಜನರು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರಕ್ಕೆ ಒಳಪಟ್ಟವರಾಗಿರುತ್ತಾರೆ. ಈ ಭಾಗದ ಗಾಣಿಗ ಸಮುದಾಯದವರ ದೈವಾರಾಧನೆ, ಪೂಜೆ ಪುರಸ್ಕಾರ, ವಿವಾಹ ಕಾರ್ಯಗಳೆಲ್ಲಾ ಇಲ್ಲೇ ನೆರವೇರುವಂತದ್ದು. ಇಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಯಾವಾಗ ಪ್ರಾರಂಭವಾಯಿತು ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದಿದ್ದರೂ ಇವರ ಪೂರ್ವಜರು ಉಲ್ಲೇಖಿಸುವ ಪ್ರಕಾರ ಸರಿಸುಮಾರು ಕ್ರಿ.ಶ. 1500 ಕ್ಕೆ ಪ್ರಾರಂಭವಾಯಿತೆಂದು ಅಂದಾಜಿಸಲಾಗಿದೆ. ಅಂದರೆ ಈ ವಿವಾಹ ಮಂಗಳೋತ್ಸವಕ್ಕೆ ಬರೋಬ್ಬರಿ 500 ವರ್ಷಗಳ ಇತಿಹಾಸವಿದೆ! ಈ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಕಳಿಯಾಟ ನಡೆಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ ವಧುಪರೀಕ್ಷೆಗೆಂದು ಮನೆಗಳಿಗೆ ಹೋಗುವ ಬದಲಾಗಿ ಕಳಿಯಾಟ ನಡೆಯುವುದಕ್ಕಿಂತ ಸ್ವಲ್ಪ ಸಮಯ ಮೊದಲು ಅದೇ ಸ್ಥಳದಲ್ಲಿಯೇ ವಧುವರರನ್ನು ಆಯ್ಕೆ ಮಾಡಿ ಅಲ್ಲೇ ಸಾಮೂಹಿಕ ವಿವಾಹವಾಗುವ ಪದ್ಧತಿಯಿತ್ತು. ಹುಡುಗನಿಗೆ ಹತ್ತು ವರ್ಷ ಹಾಗೂ ಹುಡುಗಿಗೆ ಎಂಟು ವರ್ಷ ಪ್ರಾಯವಾದಲ್ಲಿ ಅವರು ವಿವಾಹ ಯೋಗ್ಯರೆಂದು ಪರಿಗಣಿಸಿ ಮದುವೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು. ಕಳಿಯಾಟದ ಸಂದರ್ಭದಲ್ಲಿ ಮಾತ್ರವೇ ವಿವಾಹ ನಡೆಯುತ್ತಿದ್ದ ಕಾರಣ ಈ ಸಮುದಾಯದವರ ವಿವಾಹ ಕೂಡಾ ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರವೇ ನಡೆಯುತ್ತಿತ್ತು. ಕಾಲ ಸರಿದಂತೆಲ್ಲಾ ಈ ಪದ್ಧತಿಯಲ್ಲಿ ಹಂತಹಂತವಾಗಿ ಮಾರ್ಪಾಡುಗಳನ್ನು ಮಾಡಲಾಗಿದ್ದು, ಮೊದಲು ಐದು ವರ್ಷಗಳಿಗೊಮ್ಮೆ, ನಂತರ ಮೂರು ವರ್ಷಗಳಿಗೊಮ್ಮೆ, ವರ್ಷದಲ್ಲಿ ಒಂದು ಬಾರಿ ಸಾಮೂಹಿಕ ವಿವಾಹ ನಡೆಯುವಂತೆ ವ್ಯವಸ್ಥೆ ಮಾಡಲಾಯಿತು. ನಂತರದ ದಿನಗಳಲ್ಲಿ ಸಮುದಾಯದ ಜನಸಂಖ್ಯೆಯೂ ಹೆಚ್ಚಾದ ಕಾರಣ 1995 - 96 ರ ಬಳಿಕ ಪ್ರತೀ ವರ್ಷ ಮೀನ ಮಾಸ (ಮಾರ್ಚ್-ಪೂರಂ ವಿವಾಹ) ಮತ್ತು ವೃಶ್ಚಿಕ ಮಾಸ (ನವೆಂಬರ್-ಉದಯಾಸ್ತಮಾನ) ದಲ್ಲಿ ಅಂದರೆ ವರ್ಷಕ್ಕೆ ಎರಡು ಬಾರಿ ವಿವಾಹ ನಡೆಸುವ ಹೊಸ ಪದ್ದತಿಯನ್ನು ಅನುಷ್ಠಾನಗೊಳಿಸಲಾಗಿದ್ದು ಪ್ರಸ್ತುತ ಅದೇ ಸಂಪ್ರದಾಯ ಚಾಲ್ತಿಯಲ್ಲಿದೆ. ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕ್ಷೇತ್ರದ ಬಾಗಿಲು ತೆರೆದು ಮೇ ಎರಡನೇ ತಾರೀಖಿನಂದು ಬಾಗಿಲು ಮುಚ್ಚಲಾಗುತ್ತದೆ. ಈ ನಡುವಿನ ಅವಧಿಯಲ್ಲೇ ಪೂಜೆ, ಸೇವೆ, ವಿವಾಹ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ. ವರ್ಷದ ಉಳಿದ ತಿಂಗಳು ಕ್ಷೇತ್ರದ ಬಾಗಿಲು ತೆರೆದಿರುವುದಿಲ್ಲ.
"ಸರಳ ವಿವಾಹದ ವಿಧಿವಿಧಾನ ಮತ್ತು ಪುಟ್ಟ ಹೆಣ್ಣುಮಕ್ಕಳ ವಿಶಿಷ್ಟ ಚಪ್ಪರ ಮದುವೆ( 'ಪಂದಲ್ ಕಲ್ಯಾಣಂ'):
ಸಾಮೂಹಿಕ ವಿವಾಹದ ಹಿಂದಿನ ದಿನ ತಾಯಿ ಭಗವತಿಗೆ ತುಲಾಭಾರ ಸೇವೆ ನಡೆಯುವುದರೊಂದಿಗೆ ವಿವಾಹದ ವಿಧಿ ವಿಧಾನಗಳು ಆರಂಭವಾಗುತ್ತವೆ. ಹರಕೆ ಹೊತ್ತಿರುವ ಭಕ್ತಾದಿಗಳು ತುಲಾಭಾರ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ವೇಳೆ ಭಗವತಿ ದೇವಿಗೆ 'ಸುತ್ತುಬೆಳಕು' ಅಥವಾ 'ಚೆವ್ವೆಳಕ್ಕು' ಅನ್ನುವ ಸೇವೆಯೂ ನಡೆಸಲ್ಪಡುತ್ತದೆ. ಆ ನಂತರ 'ಅಪ್ಪಸೇವೆ' ಜರಗುತ್ತದೆ. ಇದೊಂದು ವಿಶಿಷ್ಟ ಸೇವೆಯಾಗಿದ್ದು ಹರಕೆ ಹೊತ್ತಂತಹ ಭಕ್ತರು ನಲವತ್ತು ದಿನಗಳ ಕಟ್ಟುನಿಟ್ಟಿನ ವೃತಾಚರಣೆ ಮಾಡಿದ್ದು, ಕುದಿಯುವ ಎಣ್ಣೆಗೆ ಕೈಯನ್ನು ಅದ್ದಿ ಅಪ್ಪವನ್ನು ('ಅಪ್ಪ' ಅಂದರೆ ಒಂದು ಬಗೆಯ ಸಿಹಿತಿಂಡಿ) ತೆಗೆಯಬೇಕು. ಹೆಣ್ಣು ಮಕ್ಕಳು ಈ ಸೇವೆಯಲ್ಲಿ ಭಾಗಿಯಾಗುವಂತಿಲ್ಲ. ಮದುವೆಯ ದಿನ ಬೆಳಗ್ಗೆ 'ಪಂದಲ್ ಕಲ್ಯಾಣಂ' ಅನ್ನುವ ಇನ್ನೊಂದು ವಿಶಿಷ್ಟ ಆಚರಣೆಯನ್ನೂ ನಡೆಸಲಾಗುತ್ತದೆ. ಋತಿಮತಿಯಾಗಿರದ (10 ವರ್ಷ ಪ್ರಾಯಕ್ಕಿಂತ ಚಿಕ್ಕ ಹೆಣ್ಣು ಮಕ್ಕಳು) ಹೆಣ್ಣುಮಕ್ಕಳಿಗಾಗಿ ನಡೆಸಲ್ಪಡುವ ಆಚರಣೆಯು ಇದಾಗಿದ್ದು, ಈ ಪಂದಲ್ ಕಲ್ಯಾಣಂ ನಲ್ಲಿ ಪಾಲ್ಗೊಂಡ ಹೆಣ್ಣುಮಕ್ಕಳಿಗೆ ಸೋದರ ಮಾವ ಅಥವಾ ತಂದೆ ಅಥವಾ ದೇವಿಯ ಸೇವೆಗೈಯುವವರು ಮಾಲೆ ತೊಡಿಸುವ ಕ್ರಮವಿದೆ. ಇವಿಷ್ಟು ಮದುವೆಯ ಮೊದಲು ನಡೆಯುವ ಇತರೇ ಕಾರ್ಯಕ್ರಮಗಳಾದರೆ, ಆ ಬಳಿಕ ವಧೂವರರು ಮದುವೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ವರನಿಗೆ 'ಮಣಿಕಟ್ಟು' ಅನ್ನುವ ಶಾಸ್ತ್ರ ನಡೆಸಿ ಸಾಂಪ್ರದಾಯಿಕ ಕಚ್ಚೆಯನ್ನು ತೊಡಿಸಿ ಹಾಗೂ ವಧುವನ್ನು ಸಿಂಗರಿಸಿ ಮಂಟಪಕ್ಕೆ ಕರೆತರಲಾಗುತ್ತದೆ. ಪರಸ್ಪರ ಹಾರ ಬದಲಾವಣೆ ಮತ್ತು ಮಂಗಳಸೂತ್ರ ಕಟ್ಟುವ ಸರಳ ವಿಧಿಯೊಂದಿಗೆ ವಿವಾಹ ಕಾರ್ಯ ನೆರವೇರುತ್ತದೆ. ಹಿಂದಿನ ಕಾಲದಲ್ಲಿ ಮಂಗಳಸೂತ್ರ ಕಟ್ಟುವ ಪದ್ಧತಿಯೂ ಈ ಸಮುದಾಯದಲ್ಲಿ ಇರಲಿಲ್ಲವೆನ್ನಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದನ್ನು ಕೂಡಾ ವಿವಾಹದ ಭಾಗವಾಗಿ ಅಳವಡಿಸಿಕೊಂಡಿರುತ್ತಾರೆ.
ವಿವಾಹದಲ್ಲಿ ದುಂದುವೆಚ್ಚದ ಭೂರಿ ಭೋಜನಕ್ಕೂ ಕಡಿವಾಣ..!" :-
ಪೆರ್ಣೆಯ ಸಾಮೂಹಿಕ ವಿವಾಹದ ಔತಣ ಕೂಟದಲ್ಲಿ ಎಲ್ಲೂ ವ್ಯರ್ಥ ಎನ್ನುವ ಪದಕ್ಕೆ ಸ್ಥಾನವೇ ಇಲ್ಲ. ಇವರು ವಿವಾಹವನ್ನು ಎಷ್ಟು ಸರಳವಾಗಿ ಮಾಡಿ ಮುಗಿಸುತ್ತಾರೋ ಅಷ್ಟೇ ಸರಳತೆಯನ್ನು ಊಟದಲ್ಲೂ ಅಳವಡಿಸಿಕೊಳ್ಳುತ್ತಾರೆ. ಅನ್ನ, ತೊಗರಿ ಗಸಿ, ಉಪ್ಪಿನಕಾಯಿ, ಒಂದು ಅಥವಾ ಎರಡು ಬಗೆಯ ಪಾಯಸ ಇವಿಷ್ಟೇ ಇಲ್ಲಿನ ಸರಳ ವಿವಾಹದ ಊಟದ ಮೆನು! ಸೇರಿದಂತಹ ಸಾವಿರಾರು ಜನ ಇದನ್ನೇ ತಾಯಿ ಭಗವತಿಯ ಪರಮ ಪವಿತ್ರ ಪ್ರಸಾದವೆಂದು ಸೇವಿಸಿ ಸಂತೃಪ್ತರಾಗುತ್ತಾರೆ. ಮದುವೆಗೆ ಮೊದಲು ನಿಶ್ಚಿತಾರ್ಥ ಹಾಗೂ ಮದುವೆಯ ನಂತರ ಅತಿಥಿ ಸತ್ಕಾರ ಅವಶ್ಯವೆನಿಸಿದಲ್ಲಿ ಅವರವರ ಮನೆಗಳಲ್ಲಿ ಅವರದೇ ಸ್ವಂತ ಖರ್ಚಿನಲ್ಲಿ ಆಯೋಜಿಸಿಕೊಳ್ಳಬಹುದು. ಇದಕ್ಕೆ ಕ್ಷೇತ್ರದ ವತಿಯಿಂದ ಯಾವುದೇ ಅಭ್ಯಂತರವಿಲ್ಲ.


