ಪೆರ್ಲ:'ನೀರ ನೆಮ್ಮದಿಯತ್ತ ಪಡ್ರೆ' ಜಲಯೋಧರ ಪಡ್ರೆ ತೋಡಿನ ಪುನರುತ್ಥಾನ, ತೋಡಿನಲ್ಲಿ ವರ್ಷಪೂರ್ತಿ ನೀರು ಹರಿಸುವ ಕ್ರಿಯಾ ಯೋಜನೆ ಭಾಗವಾಗಿ ಸೋಮವಾರ ಪಳ್ಳತ್ತಮೂಲೆ ಶ್ರೀ ಅನಂತ ಸದನದಲ್ಲಿ ರೂಪುರೇಷೆ ತಯಾರಿ, ವಿಚಾರ ವಿನಿಮಯ ನಡೆಯಿತು.
ಮುಂದಿನ ದಿನಗಳಲ್ಲಿ ಒಂದರ ನಂತರ ಒಂದರಂತೆ ಹಬ್ಬದ ರೀತಿಯಲ್ಲಿ ಸರಣಿ ಕಟ್ಟ ಕಟ್ಟುವ, ಕಟ್ಟದ ಮಣ್ಣನ್ನು ಏಡಿಗಳು ಕೊರೆಯುವ ಸಾಧ್ಯತೆಯಿದ್ದು ಪರಿಹಾರ ಮಾರ್ಗ, ಕಟ್ಟ ಕೇಂದ್ರಿತ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ನ. 29ರಂದು ಪಳ್ಳತಮೂಲೆ ಮಾಧವ ಭಟ್ ಮನೆ ಕೆಳ ಭಾಗದ ತೋಡಿಗೆ ಕಟ್ಟ ಕಟ್ಟುವ ಸಂಭ್ರಮವನ್ನು ಕಟ್ಟ ಕಟ್ಟುವ ಹಬ್ಬವನ್ನಾಗಿಸಿ, ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಕಟ್ಟ ನಿರ್ಮಾಣ, ಸಂಜೆ 3ರಿಂದ ಜಲ ಸಂರಕ್ಷಣೆ ಚೌಕಟ್ಟಿನ ಕಾರ್ಯಕ್ರಮಗಳನ್ನು ನಡೆಸಲು, ಕಟ್ಟಗಳ ಅಂತರಾರ್ಥ ಮನನ ಗೊಳಿಸಲು ಸ್ಥಳೀಯ ಶಾಲಾ ಕಾಲೇಜುಗಳ ಎನ್ನೆಸ್ಸೆಸ್ ಘಟಕ, ಇಕೋ ಕ್ಲಬ್, ಜಲ ಸುಸ್ಥಿರತೆ ಬಯಸುವ ಗುಂಪುಗಳನ್ನು ಸಂಪರ್ಕಿಸಿ ಕಟ್ಟ ನಿರ್ಮಾಣದ ಮಾಹಿತಿ ನೀಡಿ ಆಮಂತ್ರಿಸಲು, ತೀರ್ಮಾನಿಸಲಾಯಿತು. ಜಲತಜ್ಞ ಶ್ರೀಪಡ್ರೆ, ಶ್ರೀಹರಿ ಭಟ್ ಸಜಂಗದ್ದೆ ಮಾತನಾಡಿದರು. ನಿವೃತ್ತ ವಿದ್ಯಾಧಿಕಾರಿ ಸತ್ಯನಾರಾಯಣ ಭಟ್, ಜಗದೀಶ್ ಕುತ್ತಾಜೆ, ಶಿವ ಪ್ರಕಾಶ್ ಪಾಲೆಪ್ಪಾಡಿ, ನಾಗರಾಜ್ ಬಾಳಿಕೆ, ಶ್ರೀಹರಿ ಭರಣೇಕರ್, ಜಗದೀಶ್ ಸೈಪಂಗಲ್ಲು, ಗಣಪತಿ ಭಟ್ ವಿಘ್ನೇಶ್ ಶಿರಂತಡ್ಕ, ಟಿ.ನಾರಾಯಣ ಭಟ್, ಕೃಷ್ಣ ಎ.ಜೆ., ಶ್ರೀಗಣೇಶ್ ಬದಿ ಮತ್ತಿತರು ಉಪಸ್ಥಿತರಿದ್ದರು. ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ. ವೈ.ಸುಬ್ರಹ್ಮಣ್ಯ ಭಟ್ ವಂದಿಸಿದರು.


