ಉಪ್ಪಳ: ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಜನವರಿ 16 ರಂದು ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕನ್ನಡ ಹೋರಾಟ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬ್ಯಾಂಕ್ ರಸ್ತೆಯ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಕನ್ನಡಿಗರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಮಂಜೇಶ್ವರ ತಾಲೂಕಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ದೊರಕಿದರೆ ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕನ್ನಡಿಗರ ವಿಪುಲವಾದ ಉದ್ಯೋಗದ ಅವಕಾಶಗಳು ಲಭಿಸಲಿದೆ. ಈ ಬಗ್ಗೆ ಪೂರಕವಾದ ವರದಿಯನ್ನು ಈ ಮೊದಲೇ ಕಳುಹಿಸಿದ್ದರೂ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಕಡತ ಹಾಗೆಯೇ ಉಳಿದಿರುವುದರ ಉದ್ದೇಶ ಏನೆಂದು ತಿಳಿದು ಬರುತ್ತಿಲ್ಲ. ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲು ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಿದೆ.
ಸಭೆಯಲ್ಲಿ ಮಾಯಿಪ್ಪಾಡಿ ಡಯಟ್ ವಿದ್ಯಾರ್ಥಿಗಳ ಸಮಸ್ಯೆ, ಅಂಗನವಾಡಿ, ಕನ್ನಡ ಉದ್ಯೋಗಾರ್ಥಿಗಳ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವಿಶ್ವನಾಥ ರಾವ್, ಡಾ.ಯು.ಮಹೇಶ್ವರಿ, ಶ್ರೀಶ ಕುಮಾರ್ ಪಿ, ಪ್ರಭಾವತಿ ಕೆದಿಲಾಯ, ಎಸ್.ವಿ.ಭಟ್, ಗುರು ಪ್ರಸಾದ್ ಕೋಟೆಕಣಿ, ಟಿ.ಶಂಕರನಾರಾಯಣ ಭಟ್, ರಘು ಮೀಪುಗುರಿ, ಉಮೇಶ್ ನಾೈಕ್, ವಿಷ್ಣು ಪ್ರಕಾಶ, ಶಾಂತ ಕುಮಾರಿ, ಕೀರ್ತಿ, ವಿನಾಯಕ ಎಂ. ಮೊದಲಾದವರು ಸಭೆಯಲ್ಲಿ ಮಾತನಾಡಿದರು. ಭಾಸ್ಕರ ಕಾಸರಗೋಡು ಸ್ವಾಗತಿಸಿ, ತಾರಾನಾಥ ಮಧೂರು ವಂದಿಸಿದರು.

