ಕಾಸರಗೋಡು: ತಾವು ಕಲಿಯುತ್ತಿರುವ ವಿದ್ಯಾಲಯ ತೀವ್ರ ಕುಡಿಯುವ ನೀರಿನ ಬರ ಅನುಭವಿಸುತ್ತಿರುವುದನ್ನು ಅನುಭವದಿಂದ ಕಂಡುಕೊಂಡ ವಿದ್ಯಾರ್ಥಿಗಳು ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ ನಾಡಿಗೆ ಮದರಿಯಾಗಿದ್ದಾರೆ. ವಿದ್ಯಾನಗರದ ಉದಯಗಿರಿ ಕೇಂದ್ರೀಯ ವಿದ್ಯಾಲಯ(ನಂ2)ದ 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ಇಲ್ಲಿನ
ಶಿಕ್ಷಣ ಪೂರೈಸುವುದರೊಂದಿಗೆ ಪರಿಹಾರ ಒದಗಿಸಿ ತೆರಳುವ ಸಂಕಲ್ಪ ಮಾಡಿದ್ದಾರೆ. ಸಹಪಠಿಗಳಿಂದ ದೇಣಿಗೆ ಪಡೆಯಲಾದ 16,600 ರೂ.ಬಳಸಿ ಇದಕ್ಕಿರುವ ಯೋಜನೆ ಪೂರ್ಣಗೊಳಿಸಲಾಗಿದೆ.
ತಮ್ಮ ಅಧ್ಯಯನದ ಅಂಗವಾಗಿ ಸುಮಾರು 200 ಮನೆಗಳಿಗೆ ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿರುವ ಈ ವಿದ್ಯಾರ್ಥಿಗಳು ಬೃಹತ್ ಯೋಜನೆಯೊಂದಕ್ಕೆ ರೂಪುನೀಡಿದ್ದಾರೆ. ಇ.ವಿ.ಆದಿತ್ಯದೇವ್ ವರದಿಯ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಿರುವ "ಸಮಗ್ರ ಶಿಕ್ಷಣ ಜಲ ಸುರಕ್ಷೆ" ಕ್ಯಾಂಪೇನ್ ಮೂಲಕ ಜಲಸಂರಕ್ಷಣೆಗೆ ವಿವಿಧ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅವರು ಈ ಸಂಬಂಧ ಬಾವಿ ರೀಚಾರ್ಜ್ ಯೂನಿಟ್ ನ್ನು ಶಾಲೆಗೆ ಸಮಪರ್ಪಿಸಿದ್ದಾರೆ. ಪ್ರಾಂಶುಪಾಲ ಕೆ.ಪಿ.ತಂಗಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಚಾಲಕ ಟಿ.ಗೋಪಾಲನ್, ಶಿಕ್ಷಕ-ರಕ್ಷಕ ಸಂಘದ ಸದಸ್ಯ ಬಿ.ಸುಭಾಷ್, ಹನಾನ್ ಹ್ಯಾರಿಸ್ ಮೊದಲಾದವರು ಉಪಸ್ಥಿತರಿದ್ದರು.


