ಕಾಸರಗೋಡು: ರಾಜ್ಯ ಮಾನವಹಕ್ಕು ಆಯೋಗದ ಅಹವಾಲು ಸ್ವೀಕಾರ ಸಭೆ ಸೋಮವಾರ ನಗರದ ಸರಕಾರಿ ವಿಶ್ರಾಂತಿಗೃಹದಲ್ಲಿ ಜರುಗಿತು. ಆಯೋಗ ಸದಸ್ಯ ಪಿ.ಮೋಹನದಾಸ್ ಅವರ ನೇತೃತದಲ್ಲಿ ಸಭೆ ನಡೆಯಿತು. 49 ದೂರುಗಳನ್ನು ಪರಿಶೀಲಿಸಲಾಗಿದ್ದು, 12 ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. 8 ದೂರುಗಳನ್ನು ತನಿಖೆ ಸಂಬಂಧ ಮುಂದೂಡಲಾಗಿದೆ. ನೂತನ ಎರಡು ದೂರುಗಳನ್ನು ಸ್ವೀಕರಿಸಲಾಗಿದೆ.
ಕಾರು ಡಿಕ್ಕಿಯಾಗಿ ಹಾಸುಗೆ ಹಿಡಿದಿರುವ ಲೈನ್ ಮ್ಯಾನ್ ನ ಕುಟುಂಬದ ಬೆಂಬಲಕ್ಕೆ ರಾಜ್ಯ ಮಾನವಹಕ್ಕು ಆಯೋಗ ನಿಂತಿದೆ. ಅಪಘಾತದ ಪರಿಣಾಮ ಶೇ 100 ವಿಕಲಚೇತನರಾದ, ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಲೈನ್ ಮ್ಯಾನ್ ಒಬ್ಬರ ಕುಟುಂಬದ ದುರಾವಸ್ತೆಯ ಬಗ್ಗೆ ಅವರ ಪತ್ನಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ತಕ್ಷಣ ಸ್ಪಂದಿಸಿದ ಆಯೋಗ ಇನ್ ವ್ಯಾಲಿಡ್ ಪಿಂಚಣಿ ಮತ್ತು ಸುದೀರ್ಘ ಅವಧಿಯಿಂದ ಹಾಸುಗೆ ಹಿಡಿದಿರುವ ಲೈನ್ ಮ್ಯಾನ್ ಅವರ ಸ್ಥಿತಿ ಪರಿಶೀಲಿಸಿ ಆಶ್ರಿತರೊಬ್ಬರಿಗೆ ನೇಮಕಾತಿ ಒದಗಿಸುವಂತೆ ಆಯೋಗ ಸಂಬಂಧಪಟ್ಟವರಿಗೆ ಆದೇಶ ನೀಡಿದೆ.
ಕೆಲವು ಅಧಿಕಾರಿಗಳ ವಿರುದ್ಧ ಕೆಲವು ಸಿಬ್ಬಂದಿಯ ಪತ್ನಿಯರು ನೀಡಿದ್ದ ದೂರನ್ನು ಆಯೋಗ ಪರಿಶಿಲಿಸಿದೆ.ಹೆಚ್ಚುವರಿ ಕಾಯಕ ಹೇರುತ್ತಿರುವುದಾಗಿಯೂ, ಅಗತ್ಯದ ವಿಶ್ರಾಂತಿಯನ್ನೂ ನೀಡುತ್ತಿಲ್ಲ ಎಂಬುದಾಗಿಯೂ, ಅಗತ್ಯಕ್ಕೆ ರಜೆ ಮಂಜೂರು ಮಾಡುತ್ತಿಲ್ಲ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸ್ಪಷ್ಟೀಕರಣ ನೀಡುವಂತೆ ಇಲಾಖೆಯ ವರಿಷ್ಠಾಧಿಕಾರಿಗೆ ಆದೇಶಿಸಲಾಗಿದೆ.
ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಎಂಡೋಸಲ್ಫಾನ್ ಸಂಸತ್ರರಲ್ಲಿ ಕೆಲವರು ಸಲ್ಲಿಸಿದ್ದ ದೂರುಗಳನ್ನು ಆಯೋಗ ಪರಿಶೀಲಿಸಿದೆ.


