HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-28-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿಸಿ

                         ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ನೇಣು ಬಿಗಿದು ಆತ್ಮಹತ್ಯೆಯೋ, ನೇಣು ಬಿಗಿದುಕೊಂಡು ಆತ್ಮಹತ್ಯೆಯೋ?
ಹೊಸದಿಗಂತ ಪತ್ರಿಕೆಯ ೧೧ಡಿಸೆಂಬರ್೨೦೧೯ರ ಸಂಚಿಕೆಯಲ್ಲಿ ಒಂದು ಕಿರು ಸುದ್ದಿಯ ತಲೆಬರಹ “ನೇಣು ಬಿಗಿದು ಆತ್ಮಹತ್ಯೆ" ಎಂದು ಇದೆ [ಗಮನಿಸಿ ಕಳುಹಿಸಿದವರು ಗಿರೀಶ ಮಿರ್ಜಿ]. ಇದು ಸಾವಿನ ವಿಚಾರ, ಗಂಭೀರವಾದದ್ದು. "HANG HIM NOT SPARE HIM"ಅನ್ನು ಹೇಗೆ "HANG HIM", "NOT SPARE HIM" ಎಂದು ಬೇಕಾದರೂ, ಅಥವಾ "HANG HIM NOT", "SPARE HIM" ಎಂದು ಬೇಕಾದರೂ ಅರ್ಥಮಾಡಿಕೊಳ್ಳಬಹುದೋ (ಆ ಮೂಲಕ ವ್ಯಕ್ತಿಯ ಜೀವನ-ಮರಣ ನಿರ್ಧಾರವಾಗುತ್ತದೋ), ಹಾಗೆಯೇ "ನೇಣು ಬಿಗಿದು ಆತ್ಮಹತ್ಯೆ" ಎಂಬ ವಾಕ್ಯದಲ್ಲಿಯೂ ಒಂದು ಸೂಕ್ಷ್ಮ ವಿಚಾರವಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೇ ನೇಣು ಬಿಗಿದುಕೊಂಡದ್ದಾದರೆ "ನೇಣು ಬಿಗಿದುಕೊಂಡು ಆತ್ಮಹತ್ಯೆ" ಎನ್ನಬೇಕು. ಒಂದುವೇಳೆ ಬೇರೆಯವರು ನೇಣು ಬಿಗಿದು ಈ ವ್ಯಕ್ತಿ ಸತ್ತದ್ದಾದರೆ ಆಗ ಅದು ಕೊಲೆ ಎನಿಸುತ್ತದೆ ಅಥವಾ ಗಲ್ಲು ಶಿಕ್ಷೆ ಕೊಟ್ಟದ್ದು ಎಂದೆನಿಸುತ್ತದೆಯೇ ಹೊರತು ಆತ್ಮಹತ್ಯೆ ಆಗುವುದಿಲ್ಲ!
ಇದು, ಕ್ರಿಯಾಪದಗಳ ವಿವಿಧ ರೂಪಗಳ ಚಮತ್ಕಾರ. ‘ಬಿಗಿದು’ ಎಂಬ ರೂಪದಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಮಾಡುವ ಕ್ರಿಯೆ ಎಂಬ ಅರ್ಥವಾಗುವ ಸಾಧ್ಯತೆಯಿರುತ್ತದೆ. ‘ಬಿಗಿದುಕೊಂಡು’ ಎಂಬ ರೂಪದಲ್ಲಾದರೆ ಆ ವ್ಯಕ್ತಿಯೇ ಆ ಕ್ರಿಯೆಯನ್ನು ಮಾಡಿದ್ದೆಂದು ಅರ್ಥವಾಗುತ್ತದೆ. ಇನ್ನೊಂದು ಉದಾಹರಣೆ, ಸ್ಪಷ್ಟ ಚಿತ್ರಣ ಮೂಡುವಂಥದ್ದು, ಬೇಕಾದರೆ- "ಊಟ ಬಡಿಸು" ಎಂದಾಗ ಒಬ್ಬರು ಇನ್ನೊಬ್ಬರಿಗೆ ಊಟ ಬಡಿಸುವ ಚಿತ್ರಣವೇ ಕಣ್ಮುಂದೆ ಬರುತ್ತದೆ. "ಊಟ ಬಡಿಸಿಕೊಂಡು" ಎಂದಾಗ ಸ್ವಸಹಾಯ (self service) ಪದ್ಧತಿಯಲ್ಲಿ ತಾವೇ ಬಡಿಸಿಕೊಂಡು ತಿನ್ನುವ ಚಿತ್ರಣ ಕಣ್ಮುಂದೆ ಬರುತ್ತದೆ.
"ಪತ್ರಿಕೆಗಳಲ್ಲಿ ಸ್ಥಳ ಮಿತಿಯಿಂದಾಗಿ ತಲೆಬರಹಗಳು ಎಷ್ಟು ಸಾಧ್ಯವೋ ಅಷ್ಟು ಸಂಕುಚಿತ ರೂಪದಲ್ಲಿರಬೇಕಾಗುತ್ತದೆ" ಎಂಬುದು ಒಪ್ಪತಕ್ಕ ವಿಚಾರವೇ. ಆದರೆ ಅದೇವೇಳೆಗೆ, “ತಲೆಬರಹವು ನಿರ್ದಿಷ್ಟವಾದ, ನಿಖರವಾದ, ಒಂದೇಒಂದು ಅರ್ಥವನ್ನು ಮಾತ್ರ ಪ್ರತಿಬಿಂಬಿಸುವಂತೆ ಇರಬೇಕು" ಎನ್ನುವುದೂ ಅಷ್ಟೇ ಮುಖ್ಯ ಮತ್ತು ಗಮನಾರ್ಹ ವಿಚಾರ.
===
೨. ಒಡಂಬಡಿಕೆ ಪದದ ವಿಶ್ಲೇಷಣೆ
“ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧ: ರಾಜ್ಯ ಸರ್ಕಾರ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ನಡುವೆ ಒಡಂಬಡಿಕೆ.", “ಸುಳ್ಳು ಸುದ್ದಿ ಪ್ರಸಾರ ನಿಯಂತ್ರಣಕ್ಕೆ ಭಾರತ ಸೇರಿ 20 ದೇಶಗಳಿಂದ ವಿಶ್ವಸಂಸ್ಥೆಯೊಂದಿಗೆ ಒಡಂಬಡಿಕೆ.", "ಎಲ್ಐಸಿ ಜೊತೆ ಪೇಟಿಎಂ ಒಡಂಬಡಿಕೆ: ಆನ್ಲೈನ್ ಮೂಲಕ ಕಂತು ಪಾವತಿ ಇನ್ನು ಸುಗಮ." - ಹೀಗೆ ಸುದ್ದಿಶೀರ್ಷಿಕೆಗಳಲ್ಲಿ ‘ಒಡಂಬಡಿಕೆ’ ಪದ ಆಗಾಗ ಕಾಣಿಸಿಕೊಳ್ಳುತ್ತದೆ.
ಒಪ್ಪಂದ, ಕರಾರು, ಸಮ್ಮತಿ, ಅಂಗೀಕಾರ ಮುಂತಾದ ಅರ್ಥಗಳಲ್ಲಿ ಬಳಕೆಯಾಗುವ ಈ ಪದ ಸ್ವಾರಸ್ಯಕರವಾದದ್ದು. ಅಚ್ಚಕನ್ನಡದ್ದು, ಮತ್ತು ತೆಲುಗಿನಲ್ಲೂ ‘ಒಡಂಬಡಿಕ’ ಎಂದು ಬಳಕೆಯಾಗುವುದು. ಹಾಗಾಗಿ, ಒಂದು ರೀತಿಯಲ್ಲಿ ದ್ರಾವಿಡ ಮೂಲ ಈ ಪದಕ್ಕಿದೆ.
ಒಡಮ್ ಎಂಬ ಪದದಿಂದ ಬಂದದ್ದು ಒಡಮ್ಬಡಿಕೆ (ಒಡಂಬಡಿಕೆ) ಎನ್ನುತ್ತದೆ ಕಿಟ್ಟೆಲ್ ಕೋಶ. "ಒಡಮ್ಬಡಿಕೆಯಿಂದ ಆಗುವದು ದಡಮ್ಬಡಿಕೆಯಿನ್ದ ಆದೀತೇ?" ಎಂಬ ನುಡಿಗಟ್ಟನ್ನೂ ಉಲ್ಲೇಖಿಸಲಾಗಿದೆ. ಇಲ್ಲಿ ‘ದಡಂಬಡಿಕೆ’ಯೆಂದರೆ ಜಗಳ, ವಾದವಿವಾದ ಎಂಬರ್ಥದ ಗ್ರಾಮ್ಯ ಪದವೆಂದು ಸುಲಭವಾಗಿ ಅರ್ಥೈಸಬಹುದು. “ಒಡಮ್ಬಡಿಸಿದರೆ ಒಡಲು ಸರಿಹೋದೀತೇ?" ಎಂಬ ಇನ್ನೊಂದು ನುಡಿಗಟ್ಟೂ ಇದೆ. ಒಡಮ್ಪಡಿಸುವಿಕೆ ಅಂದರೆ causing to agree ಎಂಬ ಅರ್ಥ ಕೊಡಲಾಗಿದೆ. “ದೀರ್ಘಾದೇಶಮನ್ ಒಡಮ್ಪಡುವರ್", “ಮನಕ್ಕೆ ಬಾರದುದನ್ ಒಡಮ್ಬಡುವಲ್ಲಿ ಕಾಮಮ್ ಎಮ್ಬ ಅವ್ಯಯಂ ನೆಗಳ್ದು", “ನುಡಿಗೆಲ್ಲಂ ಸಲ್ಲದ ಕನ್ನಡದೊಳ್ ಜತ್ತಾಣಮುಂ ಬೆದಣ್ಡೆಯುಮ್ ಎನ್ದು, ಈಗಡಿನ ನೆಗಳ್ತೆಯ ಕಬ್ಬದೊಳ್ ಒಡಮ್ಬಡಂ ಮಾಡಿದರ್ ಪುರಾತನಕವಿಗಳ್" ಎಂದು ಮುಂತಾಗಿ ಹಳಗನ್ನಡದಲ್ಲಿ ‘ಒಡಂಬಡಿಕೆ’ ಪದಪ್ರಯೋಗದ ಉದಾಹರಣೆಗಳಿವೆ.
"ಒಡಂಬಡಿಕೆ, ಒಪ್ಪಂದ ಮತ್ತು ಕರಾರು ಎಂಬ ಪದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ. ಆದರೆ ನ್ಯಾಯಶಾಸ್ತ್ರದಲ್ಲಿ ಇವಕ್ಕೆ ವಿಶಿಷ್ಟ ಅರ್ಥಗಳಿವೆ. ಆಧುನಿಕ ಭಾರತದ ನ್ಯಾಯಸೂತ್ರಗಳು ಇಂಗ್ಲಿಷ್ ನ್ಯಾಯಸೂತ್ರಗಳ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದು ಇಂಗ್ಲಿಷ್ ಭಾಷೆಯಲ್ಲಿರುವ ಕಾರಣದಿಂದ ಅ) ಒಡಂಬಡಿಕೆ, ಆ) ಒಪ್ಪಂದ ಮತ್ತು ಇ) ಕರಾರು ಶಬ್ದಗಳನ್ನು ಕ್ರಮವಾಗಿ ಇಂಗ್ಲಿಷಿನ Covenant, Agreement, ಮತ್ತು Testament ಎಂಬ ಅರ್ಥಗಳಲ್ಲಿ ಬಳಸಲಾಗಿದೆ. ಒಪ್ಪಂದ ಮತ್ತು ಕರಾರು-ಈ ಎರಡೂ ಪದಗಳನ್ನು ಭಾರತದ ಕರಾರುಗಳ ಕಾಯಿದೆಯಲ್ಲಿ ವಿವರಿಸಲಾಗಿದೆ. ಇಬ್ಬರು ಅಥವಾ ಹೆಚ್ಚು ಜನರು ಗುಂಪುಗಳು ಪರಸ್ಪರವಾಗಿ ಒಪ್ಪಿರುವುದೇ ಒಡಂಬಡಿಕೆ (Covenant). ಒಡಂಬಡಿಕೆಯೂ ಒಪ್ಪಂದವೇ ಆದರೂ ಒಡಂಬಡಿಕೆ ಮಾಡಿಕೊಂಡ ಉಭಯ ಪಕ್ಷದವರಿಗೂ ತನ್ಮೂಲಕ ಪರಸ್ಪರ ಲಾಭ ಅಥವಾ ಪ್ರತಿಫಲ ದೊರೆಯಲೇಬೇಕಾಗಿಲ್ಲ. ಉಭಯ ಪಕ್ಷಗಳ ಒಪ್ಪಂದ ವಿವರಣಾತ್ಮಕವಾಗಿರುವುದು ಒಡಂಬಡಿಕೆಯ ಲಕ್ಷಣ. ಇವು ಒಂದು ಅಥವಾ ಹಲವು ವಿಷಯಗಳ ಸತ್ಯತೆಯ ಬಗ್ಗೆ ಒಪ್ಪಿರುವುದನ್ನು ಅಥವಾ ಏನನ್ನಾದರೂ ಮಾಡಲು ಇಲ್ಲವೆ ಮಾಡದಿರಲು ಒಪ್ಪಿರುವುದನ್ನು ಒಡಂಬಡಿಕೆ ಸೃಷ್ಟೀಕರಿಸುತ್ತದೆ. ಒಡಂಬಡಿಕೆಗೆ ನಿರ್ದಿಷ್ಟ ಸ್ವರೂಪ-ನಮೂನೆ (form)-ಅಥವಾ ಶಬ್ದಗಳ ಆವಶ್ಯಕತೆ ಇಲ್ಲ. ನಿರೂಪಣೆ ಸ್ಪಷ್ಟವಾಗಿದ್ದರೆ ಸಾಕು." - ಎಂಬ ವಿವರಣೆ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿ ಇದೆ.
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಭ್ರಾತೃತ್ವ ಸರಿ. ಸಹೋದರಭಾವ ಅಥವಾ ಸೋದರಿಕೆ ಎಂದು ಅರ್ಥ. ಭಾತೃತ್ವ ಎಂದು ‘ಭಾ’ ಅಕ್ಷರಕ್ಕೆ ಅರ್ಧಚಂದ್ರ ಒತ್ತು ಕೊಡದೆ ಬರೆದರೆ ತಪ್ಪು.
ಆ) ಪ್ರಶಸ್ತ ಸರಿ. ಉತ್ತಮವಾದ, ಚೆಲುವಾದ, ತಕ್ಕುದಾದ ಎಂದು ಅರ್ಥ. ಉದಾ: ಅಕ್ಷಯ ತೃತೀಯಾ ದಿನವು ಶುಭಕಾರ್ಯಗಳಿಗೆ ಪ್ರಶಸ್ತವಾದುದು. ಪ್ರಶಸ್ಥ ಎಂದು ಮಹಾಪ್ರಾಣ ಥ ಒತ್ತು ಕೊಟ್ಟು ಬರೆಯುವುದು ತಪ್ಪು.
ಇ) ಸ್ತುತ್ಯರ್ಹ ಸರಿ. ಸ್ತುತಿ+ಅರ್ಹ = ಸ್ತುತ್ಯರ್ಹ. ಯಣ್ ಸಂಧಿ. ಸ್ತುತ್ಯಾರ್ಹ ಎಂದು ಹಲವರು ತಪ್ಪಾಗಿ ಬರೆಯುತ್ತಾರೆ. ‘ಕೋಟ್ಯಾಧಿಪತಿ’ ಹೇಗೆ ತಪ್ಪೋ (‘ಕೋಟ್ಯಧಿಪತಿ’ ಸರಿ) ಹಾಗೆಯೇ ಸ್ತುತ್ಯಾರ್ಹ ಸಹ ತಪ್ಪು. ಯಣ್ ಸಂಧಿಯಲ್ಲಿ ಸ್ವರವು ದೀರ್ಘವಾಗುವ/ವೃದ್ಧಿಗೊಳ್ಳುವ ಪ್ರಕ್ರಿಯೆ ನಡೆಯುವುದಿಲ್ಲ. ಇತಿ+ಅರ್ಥ= ಇತ್ಯರ್ಥ ಎಂದು ಸರಿಯಾಗಿ ಉಚ್ಚರಿಸುವವರು/ಬರೆಯುವವರು ಕೂಡ ಸ್ತುತ್ಯಾರ್ಹ ಎಂದು ತಪ್ಪಾಗಿ ಬರೆಯುವುದಿದೆ.
ಈ) ಆನುವಂಶಿಕ ಸರಿ. ತಲೆಮಾರುಗಳಿಂದ ಬಂದದ್ದು ಎಂಬ ಅರ್ಥ. ವಂಶವನ್ನು ಅನುಸರಿಸಿಕೊಂಡು ಬಂದದ್ದು ಅನುವಂಶ. ಅದಕ್ಕೆ ‘ಇಕ’ ಪ್ರತ್ಯಯ ಸೇರಿದಾಗ ಮೊದಲ ಸ್ವರ ದೀರ್ಘವಾಗುತ್ತದಾದ್ದರಿಂದ ‘ಅನುವಂಶಿಕ’ ಎಂದು ಬರೆಯಬಾರದು. ಆನುವಂಶಿಕ ಎಂದು ಬರೆಯಬೇಕು. ಪರಿವಾರ->ಪಾರಿವಾರಿಕ; ಸರ್ವಜನ->ಸಾರ್ವಜನಿಕ... ಇವೆಲ್ಲ ಪದರಚನೆಗಳೂ ಹೀಗೆಯೇ ಆಗಿರುವುದು. ‘ಇಕ’ ಪ್ರತ್ಯಯ ಸೇರಿದಾಗ ಆರಂಭದ ಸ್ವರ ದೀರ್ಘವಾಗುವುದು.
ಉ) ಹುರುಳು ಸರಿ.  ೧ ವಸ್ತು, ಪದಾರ್ಥ ೨ ಸತ್ತ್ವ, ಸಾರ ೩ ಶಕ್ತಿ, ಸಾಮರ್ಥ್ಯ ೪ ಒಳಿತು, ಲೇಸು ೫ ಚೆಲವು, ಅಂದ ೬ ಫಲ, ಪ್ರಯೋಜನ ೭ ಅಪೇಕ್ಷೆ, ಆಶಯ ೮ ನೆಲೆ, ಆಶ್ರಯ ೯ ಮರ್ಮ, ರಹಸ್ಯ ೧೦ ನಾಯಕ, ಮುಂದಾಳು - ಹೀಗೆ ಹಲವಾರು ಅರ್ಥಗಳಿವೆ ಎನ್ನುತ್ತಾರೆ ಪ್ರೊ.ಜಿ.ವೆಂಕಟಸುಬ್ಬಯ್ಯನವರು. “ಅತ್ತಿ ಹಣ್ಣು ಕೆಂಪಾದರೂ ಒಳಗೆ ನೋಡಿದರೆ ಹುರುಳಿಲ್ಲ" ಎಂಬ ಗಾದೆಯನ್ನು ಕಿಟ್ಟೆಲ್ ಕೋಶ ಉಲ್ಲೇಖಿಸಿದೆ. ಇಂತಹ ಅರ್ಥಪೂರ್ಣ ‘ಹುರುಳು’ ಪದವನ್ನು ‘ಆ-ಹಾ’ ಸಮಸ್ಯೆಯಿರುವವರು (ಅಕಾರ ಹಕಾರಗಳನ್ನು ಅದಲುಬದಲು ಮಾಡುವವರು) ‘ಉರುಳು’ ಎಂದು ತಪ್ಪಾಗಿ ಬರೆಯುತ್ತಾರೆ. ೬ಡಿಸೆಂಬರ್೨೦೧೯ರ ವಿಜಯವಾಣಿ ಪತ್ರಿಕೆಯಲ್ಲಿ “ಟಿಪ್ಪು ಪಠ್ಯ ತೆಗೆಯಲು ತಜ್ಞರ ಸಮಿತಿ ವಿರೋಧ?" ಎಂಬ ಶೀರ್ಷಿಕೆಯ ಸುದ್ದಿಯಲ್ಲಿ “ಮಡಿಕೇರಿಯ ಶಾಸಕ ನೀಡಿದ ವರದಿ ಕಟ್ಟುಕಥೆಯಾಗಿದ್ದು, ಇದರಲ್ಲಿ ಯಾವುದೇ ಉರುಳಿಲ್ಲ." ಎಂಬ ವಾಕ್ಯ ಪ್ರಕಟವಾಗಿದೆ! [ಗಮನಿಸಿ ಕಳುಹಿಸಿದವರು: ಗುರುಪ್ರಸಾದ್ ಶಾಸ್ತ್ರಿ]
    ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries