HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-29-ಬರಹ:ಶ್ರೀವತ್ಸ ಜೋಶಿ ವಾಶಿಂಗ್ಟನ್ ಡಿಸಿ

                                               ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ‘ಪಟ್ಟು’ ಪದಾರ್ಥ
ಪಟ್ಟು ಎಂಬ ಪದಕ್ಕೆ ಕಿಟ್ಟೆಲ್ ಕೋಶದಲ್ಲಿ ಬೇರೆಬೇರೆ ಅರ್ಥಗಳ ವಿವರಣೆಯಿದೆ. To seize, to catch, to take hold of, to stick to ಇತ್ಯಾದಿ ಮೊದಲ ಗುಂಪು. “ಮಹದಾಯಿ ಹೋರಾಟ: ರಾಜ್ಯಪಾಲರ ಭೇಟಿ ಆಗಿಲ್ಲ, ಪಟ್ಟು ಬಿಡದೆ ಮನವಿ ಪತ್ರ ಕೊಟ್ಟ ರೈತರು." - ಇಲ್ಲಿರುವುದು ಅದೇ ಅರ್ಥ. Persistence, firmness, resolution, stubbornness, habit, character ಇತ್ಯಾದಿ ಎರಡನೆಯ ಗುಂಪು. “ಪಟ್ಟ ಕಟ್ಟಿದರೂ ಪಟ್ಟು ಹೋಗಲಿಲ್ಲ." ಎಂದು ಕಿಟ್ಟೆಲ್ ಕೊಟ್ಟಿರುವ ಉದಾಹರಣೆ. Coherence, suitable connection ಎಂದು ಇನ್ನೊಂದು ಅರ್ಥ. ‘ನತ್ತಿ ಮಾತಾಡುವವನ ಮಾತು ಸುತ್ತಿ ತೊದಲಿದರೆ ಪಟ್ಟು ಆದೀತೇ?’ ಎಂದು ಗಾದೆ ಇದೆಯಂತೆ. Lying down, to put in a lying position, to lay down, to place ಎಂದು ಮತ್ತೊಂದು ಅರ್ಥ. ಇದು ‘ಪಡು’ವಿನ ಭೂತಕಾಲರೂಪ (ಆಸೆ ಪಡು -> ಆಸೆ ಪಟ್ಟು). ಕನ್ನಡದಲ್ಲಿ ‘ಪಟ್ಟೆ’ (ಉದಾ: ಪಟ್ಟೆಪೀತಾಂಬರ) ಎಂಬ ಪದ ಬಳಕೆಯಲ್ಲಿದೆಯಾದರೂ ‘ಪಟ್ಟು’ ಸಹ ರೇಷ್ಮೆಬಟ್ಟೆ ಎಂಬ ಅರ್ಥ ಕೊಡುತ್ತದೆ. ಎರೆವಟ್ಟು, ಮಣಿವಟ್ಟು ಮೊದಲಾದ ಪದಗಳ ಮೂಲ ಅದೇ. ತೆಲುಗು ಭಾಷೆಯಲ್ಲೂ ‘ಪಟ್ಟು ಚೀರ’ ಅಂದರೆ ರೇಷ್ಮೆ ಸೀರೆ.
ಇವಿಷ್ಟೇ ಅಲ್ಲದೆ, ಪಟ್ಟು ಪದಕ್ಕೆ ಇನ್ನೊಂದು ಅರ್ಥವನ್ನೂ ಕಿಟ್ಟೆಲ್ ವಿವರಿಸಿದ್ದಾರೆ. The state of a quantity taken as often as the prefixed numeral denotes: so much as; time, repetition. ದುಪ್ಪಟ್ಟು, ಹತ್ತು ಪಟ್ಟು, ನೂರು ಪಟ್ಟು ಎನ್ನುತ್ತೇವಲ್ಲ, ಇದು ಆ ‘ಪಟ್ಟು’. ಇದನ್ನು ಯಾವಾಗಲೂ multiplied quantity ಅಥವಾ bloated magnitudeಅನ್ನು ತಿಳಿಸಲು ಬಳಸುತ್ತೇವೆ. ಉದಾ: ಸೌರವ್ಯೂಹದಲ್ಲಿ ಗುರು ಗ್ರಹದ ಗಾತ್ರವು ಭೂಮಿಯ ಗಾತ್ರಕ್ಕಿಂತ ೧೩೦೦ ಪಟ್ಟು ಇದೆ. ಅಂದರೆ, ಗುರು ಗ್ರಹದೊಳಗೆ ೧೩೦೦ ಭೂಮಿಗಳನ್ನು ತುಂಬಿಸಲಿಕ್ಕಾಗುತ್ತದೆ.
ಮೊನ್ನೆ ೧೫ಡಿಸೆಂಬರ್೨೦೧೯ರ ಪ್ರಜಾವಾಣಿಯಲ್ಲಿ ‘ಕೌತುಕ ಸವಿಯಲು ಸಜ್ಜಾಗಿ’ ಎಂಬ ವಿಜ್ಞಾನಲೇಖನವೊಂದು ಪ್ರಕಟವಾಗಿದೆ. ಡಿಸೆಂಬರ್ ೨೬ರಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣ ಬಗೆಗಿನ ಆಸಕ್ತಿಕರ ಲೇಖನವದು. ಆದರೆ ಅದರಲ್ಲಿ “ಸೂರ್ಯನಿಗಿಂತ ೪೦೦ ಪಟ್ಟು ಚಿಕ್ಕವನಾದ ಚಂದ್ರ, ಸೂರ್ಯಗ್ರಹಣದ ದಿನ ಭೂಮಿಯಿಂದ ನೋಡಿದರೆ ಸೂರ್ಯಬಿಂಬವನ್ನು ಸಂಪೂರ್ಣ ಮರೆಮಾಡುತ್ತಾನೆ" ಎಂಬ ವಾಕ್ಯವೊಂದಿದೆ. ಇಲ್ಲಿ ‘೪೦೦ ಪಟ್ಟು ಚಿಕ್ಕವನಾದ’ ಎಂಬುದು ತಪ್ಪು ಪದಪ್ರಯೋಗ [ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ರಘುಪತಿ ತಾಮ್ಹನಕರ.] “ಸೂರ್ಯನ ೪೦೦ನೆಯ ಒಂದು ಭಾಗದಷ್ಟು ಚಿಕ್ಕವನಾದ ಚಂದ್ರ" ಎಂದು ಬರೆಯಬೇಕು. ಏಕೆಂದರೆ ‘ಪಟ್ಟು’ವನ್ನು ಹಿರಿದು ಎಂದು ಸೂಚಿಸಲಿಕ್ಕೆ ಮಾತ್ರ ಬಳಸುವುದು, ಕಿರಿಯದನ್ನಲ್ಲ. 
೨. ತಲೆಬರಹಗಳಲ್ಲಿ ವಿವರಣ ಸೂಚಿ ಚಿಹ್ನೆ (colon) ಬಳಕೆ
ಪತ್ರಿಕೆಗಳಲ್ಲಿ ಸುದ್ದಿಶೀರ್ಷಿಕೆಗಳನ್ನು ಸಂಕ್ಷಿಪ್ತ ಮತ್ತು ನಿಖರ ಆಗಿಸಲಿಕ್ಕೆ, ವಿವರಣ ಸೂಚಿ ಚಿಹ್ನೆ (colon : ) ಬಳಕೆ ಪರಿಣಾಮಕಾರಿಯಾಗುತ್ತದೆ. ಉದಾಹರಣೆಗೆ “ಪೌರತ್ವ ಮಸೂದೆ: ಇಲ್ಲಸಲ್ಲದ ಊಹಾಪೋಹ" ಇಲ್ಲಿ ಪೌರತ್ವ ಮಸೂದೆ ಎಂಬ ಮುಖ್ಯ ವಿಷಯವನ್ನು ಉಲ್ಲೇಖಿಸಿ, ಅದಕ್ಕೆ ಸಂಬಂಧಿಸಿದಂತೆ, ಅಥವಾ ಅದರ ಪರಿಣಾಮವಾಗಿ (as a consequence) ಎಂಬಂತೆ “ಇಲ್ಲಸಲ್ಲದ ಊಹಾಪೋಹ" ಎಂಬ ಭಾಗವನ್ನು ಜೋಡಿಸಲಾಗಿದೆ. ಹೀಗೆ ಮಾಡುವುದರಿಂದ ತಲೆಬರಹದಲ್ಲಿ ವಿಭಕ್ತಿಪ್ರತ್ಯಯಗಳನ್ನು ಬಳಸದೆಯೇ, ವಿರೋಧಾರ್ಥಕ್ಕೆ ಎಡೆಮಾಡಿಕೊಡದೆಯೇ, ನಿಖರವಾಗಿ ಸುದ್ದಿಯನ್ನು ತಲುಪಿಸಲಿಕ್ಕಾಗುತ್ತದೆ. “ಹೆಂಡತಿ ಕೊಂದ ಗಂಡನ ಬಂಧನ" ಎಂಬ ಅಸಂಬದ್ಧ ಶೀರ್ಷಿಕೆಗಿಂತ “ಪತ್ನಿ ಹತ್ಯೆ : ಪತಿಯ ಸೆರೆ" ಎಂದು ಕಡಿಮೆ ಅಕ್ಷರಗಳನ್ನು ಬಳಸಿ ನಿಖರ ಸುದ್ದಿ ಕೊಡಲಿಕ್ಕಾಗುತ್ತದೆ. “ಬೈಕ್ ಅಪಘಾತ : ಬೀಗರ ಊಟ ಬಳಿಕ ವಧು ಸಾವು", “ಸಾಲ ಬಾಧೆ : ನದಿಗೆ ಹಾರಿ ಆತ್ಮಹತ್ಯೆ" ಸಹ ಒಳ್ಳೆಯ ಉದಾಹರಣೆಗಳು [ಇವು ಕನ್ನಡಪ್ರಭದಲ್ಲಿ ೫ಡಿಸೆಂಬರ್೨೦೧೯ರ ಸಂಚಿಕೆಯಲ್ಲಿ ಪ್ರಕಟವಾದ, ಸರಿಯಾಗಿಯೇ ಇರುವ ಶೀರ್ಷಿಕೆಗಳು]. “ಉನ್ನತ ಶಿಕ್ಷಣದಲ್ಲಿ ಕನ್ನಡ ಕಡತಗಳಿಗಷ್ಟೇ ಸೀಮಿತ" ಎಂದು ಉದಯವಾಣಿಯ ೩ಅಕ್ಟೋಬರ್೨೦೧೯ರ ಸಂಚಿಕೆಯಲ್ಲೊಂದು ತಲೆಬರಹವಿತ್ತು. ಇದನ್ನು “ಉನ್ನತ ಶಿಕ್ಷಣದಲ್ಲಿ ಕನ್ನಡ : ಕಡತಗಳಿಗಷ್ಟೇ ಸೀಮಿತ" ಎಂದು ಬರೆದಿದ್ದರೆ ಇನ್ನಷ್ಟು ಅರ್ಥಪೂರ್ಣ ಮತ್ತು ನಿಖರ ಆಗುತ್ತಿತ್ತು. ಉದಯವಾಣಿಯಲ್ಲೇ ಇನ್ನೊಂದು ಶೀರ್ಷಿಕೆಯಲ್ಲಿ “ರಸ್ತೆ ಕಾಮಗಾರಿಯಲ್ಲಿ ಕಳಪೆ ಆರೋಪ" ಎಂದು ಆರೋಪವನ್ನೇ ಕಳಪೆ ಆಗಿಸುವುದಕ್ಕಿಂತ “ರಸ್ತೆ ಕಾಮಗಾರಿ ಕಳಪೆ: ಆರೋಪ" ಎಂದು ಬರೆದಿದ್ದರೆ ಒಳ್ಳೆಯದಿತ್ತು.
ಹಾಗೆಯೇ, colon ಬಳಸುವಾಗ ಎಚ್ಚರವಿರಬೇಕು. ಪ್ರಜಾವಾಣಿಯ ೧೩ಡಿಸೆಂಬರ್೨೦೧೯ರ ಸಂಚಿಕೆಯಲ್ಲಿ “ನಿರ್ಭಯಾ : ನೇಣಿಗೆ ದಿನಗಣನೆ?" ಎಂಬೊಂದು ಅಸಂಬದ್ಧ ತಲೆಬರಹ ಪ್ರಕಟವಾಗಿದೆ [ಗಮನಿಸಿ ಕಳುಹಿಸಿದವರು: ನಾಗೇಂದ್ರರಾವ್ ಖಂಡಗಲೆ]. ಇದನ್ನೋದಿದರೆ ನಿರ್ಭಯಾಳಿಗೇ ನೇಣು ಶಿಕ್ಷೆಯೇನೋ ಅಂತಂದುಕೊಳ್ಳಬೇಕು. ನೇಣು ಆಗಬೇಕಾದ್ದು, ಇಷ್ಟು ತಡವಾಗಿಯಾದರೂ ಆಗುತ್ತಿರುವುದು ನಿರ್ಭಯಾಳ ಮೇಲೆ ಅತ್ಯಾಚಾರವೆಸಗಿ ಬರ್ಬರ ಹತ್ಯೆಗೈದವರಿಗೆ. ಆದರೆ ತಲೆಬರಹದಲ್ಲಿ ಅವರ ಪ್ರಸ್ತಾವವಿಲ್ಲದೆ ನಿರ್ಭಯಾಳಿಗೇ ನೇಣು ಎಂಬಂತೆ ಬರೆದ ಪತ್ರಕರ್ತ ಅಷ್ಟೊಂದು ಸಂವೇದನಾರಹಿತನೇ?
===
೩. ಭಾಷಾಂತರ ಅವಾಂತರ
ಅ) “ಮೊಹರುಗಳ ದೊಡ್ಡ ಸಂತಾನೋತ್ಪತ್ತಿ ಕಾಲೋನಿಯ ದೃಶ್ಯ". ಡಿಸ್ಕವರಿ ಚಾನೆಲ್ ಕನ್ನಡ ಅವತರಣಿಕೆಯಲ್ಲಿ ಬಂದದ್ದಿದು. ‘ಸೀಲ್’ (Seal) ಎಂಬ ಸಸ್ತನಿ ಉಭಯವಾಸಿ ಜೀವಿಗಳನ್ನು ಪರಿಚಯಿಸಿದ ಕಾರ್ಯಕ್ರಮದಲ್ಲಿ Seal ಎಂಬುದು ‘ಮೊಹರು’ ಆಗಿತ್ತು! [ಗಮನಿಸಿ ಕಳುಹಿಸಿದವರು" ವೇಣುಗೋಪಾಲ ಗಾಂವಕರ]
ಆ) “ಶಾಖಾಧಿಕಾರಿ, ಎಲ್‌ಐಸಿ, ಬೆಳ್ತಂಗಡಿ ಉಪಗ್ರಹ ಶಾಖೆ". ವಿಮಾ ಪಾವತಿ ಕೇಂದ್ರದ ಉದ್ಘಾಟನಾ ಸಮಾರಂಭದ ಕರೆಯೋಲೆಯಲ್ಲಿ ಬಂದದ್ದಿದು. ಮುಖ್ಯ ಅತಿಥಿಯ ವಿವರದಲ್ಲಿ ಬೆಳ್ತಂಗಡಿ Satellite branch ಎಂಬುದನ್ನು ಉಪಗ್ರಹ ಶಾಖೆ ಎಂದು ಅನುವಾದ ಮಾಡಿದ್ದಾರೆ. [ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಅನಂತ ತಾಮ್ಹನಕರ]. ಉಪ ಶಾಖೆ ಎಂದಿದ್ದರೆ ಸಾಕಿತ್ತು.
ಇ) “ನವಿನ್ ಕೋಸಲ್ ಸೀ ಪುಡ್ಸ್" : Naveen Coastal Sea Foods ಎಂಬ ಅಂಗಡಿ ಫಲಕದಲ್ಲಿ ಕನ್ನಡ [ಗಮನಿಸಿ ಕಳುಹಿಸಿದವರು: ರವೀಂದ್ರ ಬೆಂಗಳೂರು]. ‘ಕೋಸಲ್’ ಅಂದರೇನು, ‘ಪುಡ್ಸ್’ ಅಂದರೇನು, ಈ ರೀತಿ ಇಂಗ್ಲಿಷ್ ಪದಗಳನ್ನು ಕನ್ನಡ ಅಕ್ಷರಗಳಲ್ಲಿ ತಪ್ಪುತಪ್ಪಾಗಿ ಬರೆಯುವುದರಿಂದ, ಅಥವಾ ಒಂದೊಮ್ಮೆ ‘ಕೋಸ್ಟಲ್ ಸೀ ಫುಡ್ಸ್’ ಎಂದು ಸರಿಯಾಗಿಯೇ ಬರೆದಿರುತ್ತಿದ್ದರೂ, ಉಪಯೋಗವೇನು, ಯಾರಿಗೆ ಗೊತ್ತು?
ಈ) “ಪ್ರಾಣಿಗಳು ಅನುಮತಿಸಿಲ್ಲ". ಉದಕಮಂಡಲಂನಲ್ಲಿ ದೋಣಿಮನೆ(ಬೋಟ್ ಹೌಸ್) ಒಳಗೆ Pets not allowed ಎಂಬ ಸೂಚನಾಫಲಕದಲ್ಲಿ ಇಂಗ್ಲಿಷ್, ತಮಿಳು, ಮಲಯಾಳಂ, ಹಿಂದೀ, ಮತ್ತು ಕೊನೆಗೆ ಕನ್ನಡದಲ್ಲಿ ಹೀಗೆ ಬರೆದದ್ದಿದೆ. ಪ್ರಾಣಿಗಳು ಮನುಷ್ಯನೆಂಬ ಪ್ರಾಣಿಗೆ ಅನುಮತಿ ನೀಡಿಲ್ಲ ಎಂದು ಇದರ ಅರ್ಥ?
ಉ) “ಅನ್ನಪೂರ್ಣ ಅಟ್ಟ. 5Kg/ ರೂ 164.90". Annapoorna Atta (ಗೋಧಿ ಹಿಟ್ಟು) ರಿಯಾಯಿತಿ ಬೆಲೆಯಲ್ಲಿ ದೊರಕುತ್ತದೆ ಎಂದು ಬೆಂಗಳೂರಿನ ಸೂಪರ್‌ಮಾರ್ಕೆಟೊಂದರ ಫಲಕದಲ್ಲಿ ಬರೆದು ಗಿರಾಕಿಗಳನ್ನು ಅಟ್ಟಕ್ಕೇರಿಸಿದ್ದು. [ಗಮನಿಸಿ ಕಳುಹಿಸಿದವರು: ವೆಂಕಟೇಶ ಕುಮಾರ್].
        ಶ್ರೀವತ್ಸ ಜೋಶಿ ವಾಶಿಂಗ್ಟನ್ ಡಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries