ಕುಂಬಳೆ: ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರ 70ರ ಸಂಭ್ರಮ ಕಾರ್ಯಕ್ರಮ ಬುಧವಾರ ಅನಂತಪುರ ದೊಡ್ಡಮನೆ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ 10 ರಿಂದ ನಡೆದ 70ರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ರಂಗಕರ್ಮಿ, ಸಾಹಿತಿ ನಾ.ದಾಮೋದರ ಶೆಟ್ಟಿ. ಅವರು ಮಾತನಾಡಿ, ಅಕ್ಷರಗಳಲ್ಲಿ ಪೋಣಿಸುವ ಕಾವ್ಯಗುಚ್ಚಗಳು ಜೀವ ಕಾರುಣ್ಯವನ್ನು ಪ್ರತಿಬಿಂಬಿಸಿದಾಗ ಕವಿ-ಕಾವ್ಯ ಗೆಲ್ಲುತ್ತದೆ. ನವ್ಯ ಕಾವ್ಯಗಳೊಡನೆ ನವೋದಯದ ಸತ್ವಯುತ ಕಾವ್ಯ ಸಮೀಕರಣ ಶ್ರೀಕೃಷ್ಣಯ್ಯ ಅನಂತಪುರ ಅವರ ಕೃತಿಗಳ ವಿಶೇಷತೆಯಾಗಿದೆ ಎಂದು ತಿಳಿಸಿದರು. ಅವರ ಕಾವ್ಯಗಳಲ್ಲಿ ಆತ್ಮೀಯತೆಯ ಕೌಶಲ್ಯ ಹಾಗೂ ತುಡಿತ ಸಮೃದ್ದವಾಗಿ ಪ್ರತಿಬಿಂಬಿತವಾಗಿ ಕಾವ್ಯಾಸಕ್ತರ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು.
ಹಿರಿಯ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅವರು ಮಾತನಾಡಿ, ಕ್ರಿಯಾಶೀಲ, ಸೃಷ್ಟಿಶೀಲ ಕವಿತ್ವ ಶ್ರೀಕೃಷ್ಣಯ್ಯರ ಕವಿತ್ವದ ಸಂಕೇತವಾಗಿದೆ. ಮಹಾನಗರಗಳಿಂದ ದೂರ ಉಳಿದು ಹುಟ್ಟಿದ ಗ್ರಾಮದಲ್ಲೇ ಕವಿ ಮೂಡಿಸಿದ ಅಕ್ಷರ ಸಹಿತ ವಿವಿಧ ಆಯಾಮಗಳ ಕೊಡುಗೆಗಳು ಅನನ್ಯವಾಗಿ ಹೊಸ ತಲೆಮಾರಿಗೆ ಪ್ರೇರಣದಾಯಿಯಾಗಿದೆ ಎಂದು ತಿಳಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಅವರು ಮಾತನಾಡಿ, ಸರಳ ಸಜ್ಜನಿಕೆಯ ಅನಂತಪುರದ ದೊಡ್ಡಮನೆ ಸಂಸಾರ ಅಪೂರ್ವ ಬಹುಮುಖಿ ಆಯಾಮಗಳ ಕೇಂದ್ರವಾಗಿ ಗಮನಾರ್ಹವಾಗಿ ಗುರುತಿಸಲ್ಪಟ್ಟಿದೆ. ತನ್ನ ಮಾಧ್ಯಮ ಕ್ಷೇತ್ರದ ಸುಧೀರ್ಘ ಅವಧಿಯ ಎಲ್ಲಾ ಶ್ರೇಯಸ್ಸಿಗೂ ಮೂಲ ಪ್ರೇರಣೆಯಾಗಿ ಈ ಮನೆತನ ತನ್ನನ್ನು ಪ್ರೋತ್ಸಾಹಿಸಿ, ಬೆಳೆಸಿದೆ ಎಂದು ತಿಳಿಸಿದರು.
ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಆಶೀರ್ವಚನಗೈದು ಮಾತನಾಡಿದರು. ವಿಷ್ಣು ಶಾನುಭೋಗ್ ಎರೆಪಾಡಿ, ಹಿರಿಯ ವೈದ್ಯ ಡಾ.ಸರ್ವೇಶ್ವರ ಭಟ್, ಶಿಕ್ಷಣ ತಜ್ಞ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಮಾತನಾಡಿದರು.
ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ, ಡಾ.ಎ.ಪಿ.ಕೃಷ್ಣ, ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್, ವಿಜಯಕುಮಾರ್ ಅನಂತಪುರ, ಪೆರ್ಣೆ ಮುಚ್ಚಿಲೋಟ್ ಕ್ಷೇತ್ರದ ಅಧ್ಯಕ್ಷ ಶಂಕರ ಬೆಳ್ಳಿಗೆ, ಮೋನ.ಎಲ್.ಎನ್.ಶಾನುಭೋಗ್, ರಾಂ.ಎಲ್ಲಂಗಳ, ಡಾ.ಪಿ.ಪಿ.ರಾವ್ ಮೊದಲಾದವರು ಶುಭಹಾರೈಸಿ ಮಾತನಾಡಿದರು.
ಈ ಸಂದರ್ಭ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಕೃಷ್ಣಯ್ಯ ಅನಂತಪುರ ಅವರು, ನಡೆವ ಪಾದಗಳು ಒದ್ದೆಯಾಗದಂತೆ ಸಾಗರವನ್ನು ದಾಟಬಹುದು. ಆದರೆ ಕಣ್ಣೀರು ಬಾರದೆ ಕುಟುಂಬ ಸಾಗರವನ್ನು ದಾಟಿಸುವುದು ಅಸಾಧ್ಯ ಎಂಬ ಅನುಭವ ತನ್ನ ಜೀವನಾನುಭವ ಎಂದು ತಿಳಿಸಿದರು. ಬದುಕಿನ ಒಟ್ಟು ಸ್ಥಾಯೀ ಭಾವವು ವಿಶಾದವೇ ಆಗಿದೆ. ಆದರೆ ಸವಾಲು, ನೋವುಗಳನ್ನು ಮೆಟ್ಟಿನಿಂತು ದೃಢಚಿತ್ತದಿಂದ ಸುಖವನ್ನು ಕಾಣುವ ಯತ್ನವೇ ನಿಜವಾದ ಜೀವನವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಸುಂದರ ನಾಳೆಗಳು ಎನ್ನುವುದು ಭ್ರಮೆಗಳಾಗಿದ್ದು, ಇಂದೇ ಅದು ಎನ್ನುವುದು ಮಾತ್ರ ನೈಜವಾದುದು ಎಂದು ತಿಳಿಸಿದರು.
ವ್ಯಕ್ತಿಗಳು, ಸಂಘಸಂಸ್ಥೆಗಳು, ವಿವಿಧ ಕುಟುಂಬಗಳ ಪ್ರತಿನಿಧಿಗಳಿಂದ 70ರ ಅಭಿನಂದನೆ ನಡೆಯಿತು. ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಉಪಸ್ಥಿತರಿದ್ದರು. ಸಂತೋಷ್ ಅನಂತಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ವಪ್ನಾ ಸಂತೋಷ್ ವಂದಿಸಿದರು. ದೇವಯಾನಿ ಸಂತೋಷ್ ಪ್ರಾರ್ಥಿಸಿದರು. ಬಳಿಕ ಶ್ರೀಕೃಷ್ಣಯ್ಯ ಅನಂತಪುರ ರಚಿಸಿದ ವಿವಿಧ ಭಾವಗೀತೆಗಳ ಗಾಯನ ಜಯಶ್ರೀ ಅನಂತಪುರ ಅವರ ರಾಗ ಸಂಯೋಜನೆಯಲ್ಲಿ ನಡೆಯಿತು. ರೇಖಾ ಸಂದೀಪ್ ಬೆಂಗಳೂರು ಭಾವಗಾಯನ ನಡೆಸಿದರು.


