ಕಾಸರಗೋಡು: ಆಡಂಬರದ ವಿವಾಹ ನಡೆಸದೆ, ಸುಂದರ ವೈವಾಹಿಕ ಜೀವನಕ್ಕೆ ಆದ್ಯತೆ ಕಲ್ಪಿಸುವಂತಾಗಬೇಕು ಎಂದು ಮಹಿಳಾ ಆಯೋಗ ಸದಸ್ಯೆ ಡಾ. ಷಾಹಿದಾ ಕಮಾಲ್ ತಿಳಿಸಿದ್ದಾರೆ. ಅವರು ಕಾಸರಗೋಡು ತಳಂಗರೆಯ ಮಾಲಿಕ್‍ದೀನಾರ್ ನರ್ಸಿಂಗ್ ಕಾಲೇಜಿನಲ್ಲಿ ಮಹಿಳಾ ಆಯೋಗ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಿವಾಹ ಪೂರ್ವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ವಿವಾಹ ಆಮಂತ್ರಣ ಪತ್ರಿಕೆಯಿಂದ ತೊಡಗಿ, ಹನಿಮೂನ್ ವರೆಗೆ ನಡೆಸುವ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹದೆಡೆಗೆ ಗಮನಹರಿಸುವುದು ಮುಖ್ಯ ಎಂದು ತಿಳಿಸಿದರು.
ಅಜ್ಞಾನ ದೂರಾಗಬೇಕು:
ವೈವಾಹಿಕ ಜೀವನದ ಬಗೆಗಿರುವ ಅಜ್ಞಾನ, ದಂಪತಿಗಳಲ್ಲಿ ಸಾಮರಸ್ಯಕ್ಕೆ ಧಕೆಕ ತಂದೊಡ್ಡಬಹುದು ಎಂದು ಮಹಿಳಾ ಆಯೋಗ ಸದಸ್ಯೆ ಡಾ. ಷಾಹಿದಾ ಕಮಾಲ್ ತಿಳಿಸಿದ್ದಾರೆ. ಅವರು ನಗರದ ನವಭಾರತ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿವಾಹ ಪೂರ್ವ ಕಾರ್ಯಾಗಾರದಲ್ಲಿ ಮಾತನಾಡಿದರು. ದಾಂಪತ್ಯವು ಆಹಾರ, ಬಟ್ಟೆ ಧರಿಸುವಿಕೆ, ವಿಶ್ರಾಂತಿಯಂತೆ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಸರಿಯಾಗಿ ಮುನ್ನಡೆಯಬೇಕಾದರೆ ಪರಸ್ಪರ ಸಹಕಾರ ಅಗತ್ಯ ಎಂದು ತಿಳಿಸಿದರು.
ವಿದ್ಯಾನಗರ ತ್ರಿವೇಣಿ ಕಾಲೇಜಿನಲ್ಲಿ ನಡೆದ ವಿವಾಹಪೂರ್ವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಡಾ. ಷಾಹಿದಾ ಕಮಾಲ್ ಅವರು, ವಿದ್ಯಾರ್ಥಿಗಳು ಸ್ವಾವಲಂಬಿ ಜೀವನ ನಡೆಸಲು ಆದ್ಯತೆ ನೀಡಬೇಕು. ಹೆಣ್ಮಕ್ಕಳು ಆರ್ಥಿಕ ಸ್ವಾವಲಂಬಿಗಳಾಗಬೇಕಾದರೆ, ಉದ್ಯೋಗದತ್ತ ಗಮನಹರಿಸುವುದು ಅಗತ್ಯ. ಇದು ಮಹಿಳೆಯರಲ್ಲಿನ ಆರ್ಥಿಕ ಭದ್ರತೆ ಒದಗಿಸಲು ಸಹಕಾರಿಯಾಗುವುದಾಗಿ ತಿಳಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ. ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಂ.ವಿ ವಿಜಯನ್ ನಂಬ್ಯಾರ್ ಸ್ವಾಗತಿಸಿದರು. ಪ್ರಾಧ್ಯಾಪಕ ಕೆ. ಗೋಪಾಲಕೃಷ್ಣನ್ ವಂದಿಸಿದರು.


