ಕೊಚ್ಚಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಸುಳ್ಳು ಪ್ರಚಾರದ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವುದರ ಜತೆಗೆ ಜನಜಾಗೃತಿ ಸಭೆ ಆಯೋಜಿಸಲು ಕೇರಳ ಬಿಜೆಪಿ ಘಟಕ ತೀರ್ಮಾನಿಸಿದೆ. ಇದಕ್ಕಾಗಿ ಡಿಸೆಂಬರ್ 23ರಿಂದ 31ರ ವರೆಗೆ ಗೃಹಸಂದರ್ಶನ ನಡೆಸಿ, ಕರಪತ್ರ ವಿತರಿಸಿ, ಕಾನೂನಿನ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವಿಲ್ಲದೆ, ಜನರನ್ನು ತಪ್ಪುಹಾದಿಗೆಳೆಯುತ್ತಿರುವ ಬಗ್ಗೆ ಜನತೆಗೆ ಮಾಹಿತಿ ನೀಡಲು ರಾಜ್ಯ ಸಮಿತಿ ತೀರ್ಮಾನಿಸಿದೆ. ಜತೆಗೆ ಡಿ.24ರಿಂದ 26ರ ವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಮಂಡಲ ಕೇಂದ್ರಗಳಲ್ಲಿ ಜನಜಾಗೃತಿ ಸಭೆ ಆಯೋಜಿಸಲಾಗುವುದು.ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ರಂಗದ ನೇತಾರರು, ಚಲನಚಿತ್ರ ಕಲಾವಿದರು ಪಾಲ್ಗೊಳ್ಳಲಿರುವುದಾಗಿ ಬಿಜೆಪಿ ಮುಖಂಡ ಎಂ.ಟಿ ರಮೇಶ್ ಕೊಚ್ಚಿಯಲ್ಲಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಎಂದಿಗೂ ಮುಸ್ಲಿಂರ ವಿರುದ್ಧವಲ್ಲ. ಕೇಂದ್ರದ ಎನ್‍ಡಿಎ ಸರ್ಕಾರ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಪ್ರಚಾರ ನಡೆಸುವ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾನೂನು ಮುಸ್ಲಿಂ ವಿರೋಧಿ ಎಂದು ಚಿತ್ರೀಕರಿಸಿ, ಕಾಂಗ್ರೆಸ್, ಸಿಪಿಎಂ ಹಾಗೂ ಇತರ ಪ್ರತಿಪಕ್ಷಗಳು ಹೋರಾಟಕಣಕ್ಕಿಳಿದಿರುವುದು ದುರಾದೃಷ್ಟಕರ. ಈ ಹಿಂದೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವ ಬಗ್ಗೆ ಕಾಂಗ್ರೆಸ್ ಸಕಾರಾತ್ಮಕ ಧೋರಣೆಯನ್ನು ತಳೆದಿದ್ದು, ಈ ನಿಲುವಿನಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಲು ಕಾಂಗ್ರೆಸ್ ಮುಂದಾಗಬೇಕು ಎಂದೂ ರಮೇಶ್ ತಿಳಿಸಿದ್ದಾರೆ.

