ಪೆರ್ಲ:ಎಂಡೋಸಲ್ಫಾನ್ ಸಿಂಪಡಣೆ ವಿರುದ್ಧ ಆರಂಭ ಹಂತದಿಂದಲೇ ಹೋರಾಡಿ ಪೆರ್ಲ ಉಕ್ಕಿನಡ್ಕ ಬಳಿಯ ಕುದ್ವದ ತೋಟಗಾರಿಕಾ ನಿಗಮದ ಕಚೇರಿಗೆ 2009ರಲ್ಲಿ ಮುತ್ತಿಗೆ ಹಾಕಿದ ಆರೋಪದಂತೆ ಸರ್ಕಾರ ಹಾಗೂ ಪೆÇಲೀಸರು ಕೇಸು ದಾಖಲಿಸಿದ ಪರಿಣಾಮ 9 ವರ್ಷಗಳ ಕಾಲ ಬಿಜೆಪಿ ನೇತಾರ ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳಲ್ಲಿ ಅಲೆದಾಡಿದ ಪೆರ್ಲದ ಯುವ ಕಾರ್ಯಕರ್ತರಿಗೆ ಶನಿವಾರ ನ್ಯಾಯಾಲಯವು ಆರೋಪ ಮುಕ್ತಗೊಳಿಸುವ ಐತಿಹಾಸಿಕ ತೀರ್ಪು ನೀಡಿದೆ.
ಎಂಡೋ ಹೋರಾಟದಲ್ಲಿ ಅಂದು ಮುತ್ತಿಗೆ ಹಾಕಿದ್ದ ಕಾರ್ಯಕರ್ತರಾದ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಸಾದ್ ಟಿ.ಪೆರ್ಲ, ಸುಭಾಸ್ ಪೆರ್ಲ, ಗಣೇಶ್ ಶೆಟ್ಟಿ ಪೆರ್ಲ, ಸತೀಶ್ ಕಂಚಿಕಟ್ಟೆ,ಧನ್‍ರಾಜ್ ಪ್ರತಾಪನಗರ,ಅಶೋಕ್ ಬೇಕೂರು, ಹರೀಶ್ ತಿಂಬರ, ಪ್ರವೀಣ್ ಪ್ರತಾಪನಗರ, ರವಿ ಕುಬಣೂರು ಹಾಗೂ ಉದಯ ಶಾಂತಿಗುರಿ ಇವರುಗಳ ವಿರುದ್ದ ದೂರು ದಾಖಲಿಸಿ ಬಂಧಿಸಲಾಗಿತ್ತು. ಬಳಿಕ ರಾಜ್ಯ ಉಚ್ಚ ನ್ಯಾಯಾಲಯ ಜಾಮೀನು ನೀಡಿತ್ತು. ಸುಧೀರ್ಘ ಅವಧಿಯ ವಿಚಾರಣೆಯ ಬಳಿಕ ಶನಿವಾರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಈ ಪೈಕಿ ಇಬ್ಬರ ಹೊರತು ಮಿಕ್ಕವರ ಮೇಲಿನ ಆರೋಪ ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪದಿಂದ ಖುಲಾಸೆ ಗೊಳಿಸಿ ತೀರ್ಪು ಹೊರಡಿಸಿದೆ. ನ್ಯಾಯವಾದಿ ಕೆ.ಶ್ರೀಕಾಂತ್ ಶನಿವಾರ ತೀರ್ಪು ಪ್ರಕ್ರಿಯೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆ ಬಗೆಗಿನ ತೀರ್ಪು ಕಾಯ್ದಿರಿಸಲಾಗಿದೆ. ಜೊತೆಗೆ ಉದಯ ಶಾಂತಿಗುರಿ ಉದ್ಯೋಗ ನಿಮಿತ್ತ ವಿದೇಶದಲ್ಲಿರುವುದರಿಂದ ಅವರ ತೀರ್ಪನ್ನೂ ಪ್ರಕಟಿಸಿಲ್ಲ. ಹೋರಾಟಗಾರರ ಪರವಾಗಿ ನ್ಯಾಯವಾದಿ ಪಿ.ಮುರಳೀಧರನ್ ವಾದಿಸಿದ್ದರು.
ಅಭಿಮತ:
ಎಂಡೋಸಲ್ಫಾನ್ ದುಷ್ಪರಿಣಾಮದ ಬಗ್ಗೆ ಮೊತ್ತಮೊದಲು ದನಿಯೆತ್ತಿದ್ದ ನಾವು ಸಾಮಾಜಿಕ ಜಾಗೃತಿಗಾಗಿ ಆರಂಭ ಕಾಲಘಟ್ಟದಿಂದಲೇ ಹೋರಾಟ, ಪ್ರತಿಭಟನೆ ನಡೆಸಿದ್ದೆವು. ನಮ್ಮ ನಿರಂತರ ಹೋರಾಟದ ಭಾಗವಾಗಿ ರಾಷ್ಟ್ರ ವ್ಯಾಪಿಯಾಗಿ ಈ ಬಗೆಗಿನ ಕಾಳಜಿ ವ್ಯಕ್ತವಾಗಿ ಬಳಿಕ ಅನೇಕ ಮಂದಿ ಹೋರಾಟದ ಮುನ್ನೆಲೆಗೆ ಬಂದರು. ಕೊನೆಗೂ ನಮ್ಮ ಹೋರಾಟಕ್ಕೆ ನ್ಯಾಯ ಲಭಿಸಿ ಅಮಾಯಕ ಜನಸಾಮಾನ್ಯರ ಮೇಲೆ ಉಂಟಾಗುತ್ತಿದ್ದ ದುಷ್ಪರಿಣಾಮವನ್ನು ತಡವಾಗಿಯಾದರೂ ನಿಷೇಧಿಸಿದ ಕೃತಾರ್ಥತೆ ನಮಗಿದೆ. ಇದೀಗ ಅಂದಿನ ದಾವೆಗೆ ಸಂಬಂಧಿಸಿ ನ್ಯಾಯಾಲಯ ಖುಲಾಸೆಗೊಳಿಸಿರುವುದು ಹರ್ಷ ತಂದಿದೆ.ಇದು ಜನಪರ ಕಾಳಜಿಗೆ ಸಂದ ವಿಜಯವಾಗಿದೆ.
ಟಿ.ಪ್ರಸಾದ್.
ಸಾಮಾಜಿಕ ಕಾರ್ಯಕರ್ತ., ನ್ಯಾಯಾಲಯದಲ್ಲಿ ದಾವೆಗೊಳಗಾಗಿದ್ದ ಹೋರಾಟ ಸಮಿತಿ ಸದಸ್ಯ.


