ಬದಿಯಡ್ಕ: ಸತ್ಯದ ದಾರಿಯಲ್ಲಿ ಮುನ್ನಡೆಸುವ ಗುರುವನ್ನು ವಂದಿಸಿ ದೇವತಾಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಕಲ ಚರಾಚರಗಳಲ್ಲಿಯೂ ದೇವರನ್ನು ಕಾಣುವ ಮನುಷ್ಯಜನ್ಮದಲ್ಲಿ ಧರ್ಮ ಪರಿಪಾಲನೆಯ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಹೇಳಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಬದಿಯಡ್ಕ ವಲಯ ಇದರ ಸಂಯುಕ್ತಾಶ್ರಯದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸವನ್ನು ನೀಡಿದರು. ನಮ್ಮ ಮಕ್ಕಳು ಸನ್ಮಾರ್ಗದಲ್ಲಿ ನಡೆಯುವಂತೆ ಅವರನ್ನು ಬೆಳೆಸಬೇಕು. ಅನಗತ್ಯ ಒತ್ತಡಗಳನ್ನು ಹಾಕಿ ಅವರು ದಾರಿತಪ್ಪಿ ನಡೆಯುವಂತೆ ಮಾಡಬಾರದು. ಮುಂದಿನ ಜನಾಂಗದ ಕುರಿತು ಸದಾ ಕಾಳಜಿಯನ್ನಿಟ್ಟು ಮುಂದುವರಿಯಬೇಕು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಯೋಜನಾಧಿಕಾರಿ ಚೇತನಾ ಎಂ. ಮಾತನಾಡಿ ಕಳೆದ 8 ವರ್ಷಗಳಿಂದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಶ್ರೀಕ್ಷೇತ್ರದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳು ಅತೀ ಅಗತ್ಯ ಎಂಬುದನ್ನು ಮನಗಂಡು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಂಸ್ಕøತಿ ಸಂಪ್ರದಾಯಗಳಲ್ಲಿ ಶ್ರೀಮಂತಿಕೆಯಿರುವ ಭಾರತ ದೇಶದಲ್ಲಿ ಸ್ತ್ರೀಯರಿಗೆ ವಿಶೇಷ ಗೌರವದ ಸ್ಥಾನವನ್ನು ನೀಡಿ ಪೂಜ್ಯ ಭಾವದಿಂದ ಕಾಣಲಾಗುತ್ತಿದೆ. ನಾವು ನಮ್ಮ ಆಚಾರಗಳನ್ನು ಕುಂಠಿತಗೊಳಿಸಿದರೆ ಅದು ಮುಂದಿನ ಜನಾಂಗಕ್ಕೆ ದೊಡ್ಡಹೊಡೆತನ್ನೇ ನೀಡುತ್ತದೆ ಎಂಬುದನ್ನು ನಾವು ಅರಿತಿರಬೇಕು. ಸದಾ ಧಾರ್ಮಿಕ ಚಟುವಟಿಕೆಗಳ ಮೂಲಕ ಅವರನ್ನು ಸಂಸ್ಕøತಿಯತ್ತ ಮನಮಾಡುವಂತೆ ಪ್ರೇರೇಪಿಸುವ ಕಾರ್ಯ ಆಗಬೇಕು. ಬದಿಯಡ್ಕ ವಲಯವು ಉತ್ತಮ ರೀತಿಯ ಕಾರ್ಯ ಚಟುವಟಿಕೆಗಳ ಮೂಲಕ ಮೊದಲಸ್ಥಾನದಲ್ಲಿದೆ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶಂಕರ ಡಿ., ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ಪ್ರಾಂಶುಪಾಲ ಶಿವಪ್ರಕಾಶ್, ಕಡಂಬಳ ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು. ಶಶಿಕಲಾ ಪ್ರಾರ್ಥನೆ ಹಾಡಿದರು. ಬೇಬಿ ಪೂವಾಳೆ ಸ್ವಾಗತಿಸಿ, ನಳಿನಾಕ್ಷಿ ವಂದಿಸಿದರು. ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ಟ ಪೆರಡಾಲ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಟ್ಟರು.


