HEALTH TIPS

ಇಂದು 'ಸುಪ್ರೀಂ' ಮುಂದೆ ಸಿಎಎ, ಪೌರತ್ವ ಕಾಯ್ದೆ ಕುರಿತ 132 ಅರ್ಜಿಗಳ ವಿಚಾರಣೆ

     
       ನವದೆಹಲಿ: ಪೌರತ್ವತಿದ್ದುಪಡಿಕಾಯ್ದೆಯ (ಸಿಎಎ) ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಕೋರಿ ಸಲ್ಲಿಸಿದ ಮನವಿಗಳನ್ನು  ಸುಪ್ರೀಂ ಕೋರ್ಟ್ ಇಂದು( ಬುಧವಾರ) ವಿಚಾರಣೆ ನಡೆಸಲಿದೆ.
       ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು ವಿವಿಧ ಮನವಿಗಳ ಕುರಿತು ಕೇಂದ್ರಕ್ಕೆ ನೋಟಿಸ್ ನೀಡಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ಸಲ್ಲಿಸಿದ್ದ ಅರ್ಜಿಗಳು ಸೇರಿದಂತೆ 132 ಅರ್ಜಿಗಳನ್ನು ಆಲಿಸುವ ಸಾಧ್ಯತೆ ಇದೆ.
    ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ದೇಶಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಸಿಎಎ ಅನುಕೂಲ ಕಲ್ಪಿಸಿದೆ ಆದರೆ ಈ ಕಾಯ್ದೆ ಜಾರಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿದ್ದು ಜನವರಿ 10 ರಿಂದ ಜಾರಿಗೆ ಬಂದ ಶಾಸನದ ಅನುಷ್ಠಾನ ತಡೆಯಲು ಅರ್ಜಿಗಳು ಮನವಿ ಮಾಡಿವೆ.ಸಿಎಎಯನ್ನು ಸಾಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಜನವರಿ 9 ರಂದು ನಿರಾಕರಿಸಿತು, ದೇಶವು ಕಷ್ಟದ ಸಮಯಗಳನ್ನು ಎದುರಿಸುತ್ತಿದೆ ಮತ್ತು ಸಾಕಷ್ಟು ಹಿಂಸಾಚಾರಗಳು ನಡೆಯುತ್ತಿವೆ ಮತ್ತು ಶಾಂತಿಯ ಪ್ರಯತ್ನ ನಡೆಯಬೇಕೆಂದು ಅದು ಅಭಿಪ್ರಾಯಪಟ್ಟಿದೆ. ಸಿಎಎ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಬೇಧ ಮಾಡುವ ಮೂಲಕ  ಅಕ್ರಮ ವಲಸಿಗರ ಒಂದು ಭಾಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ಐಯುಎಂಎಲ್ ತನ್ನ ಮನವಿಯಲ್ಲಿ ಹೇಳಿದೆ.
      ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡಿಸೆಂಬರ್ 12 ರಂದು 2019ರ ಪೌರತ್ವ (ತಿದ್ದುಪಡಿ) ಮಸೂದೆಗೆಅಂಕಿತ ಹಾಕಿದ್ದರು.
   ಸರ್ಕಾರದ ಸಿಎಎ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಮತ್ತು ಮುಸ್ಲಿಮರ ವಿರುದ್ಧ ಸ್ಪಷ್ಟವಾಗಿ ತಾರತಮ್ಯ ಮಾಡುವ ಉದ್ದೇಶವನ್ನು ಹೊಂದಿದೆ.ಈ ಕಾಯಿದೆಯು ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಹೆಚ್ಚಿನ ಮಹತ್ವ ನೀಡಿದೆಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಲ್ಲಿಸಿದ್ದ ಮನವಿಯಲ್ಲಿ, ಈ ಕಾಯಿದೆಯು ಸಂವಿಧಾನದಡಿಯಲ್ಲಿ ರೂಪಿಸಲಾಗಿರುವ ಪ್ರಮುಖ ಮೂಲಭೂತ ಹಕ್ಕುಗಳ ಮೇಲಿನ "ಲಜ್ಜೆಗೆಟ್ಟ ದಾಳಿ" ಮತ್ತು "ಸಮಾನತೆಗೆ ಧಕ್ಕೆ"ಎಂದು ವಿವರಿಸಿದೆ.
      ಸಿಎಎಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ, ಇದರಲ್ಲಿ ಆರ್ಜೆಡಿ ನಾಯಕ ಮನೋಜ್ ಝಾ,  ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಎಐಐಎಂ ನಾಯಕ ಅಸದುದ್ದೀನ್ ಒವೈಸಿಸಹ ಸೇರಿದ್ದಾರೆ. ಮುಸ್ಲಿಂ ಬಾಡಿ ಜಮಿಯತ್ ಉಲಾಮಾ-ಇ-ಹಿಂದ್, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‍ಯು), ಪೀಸ್ ಪಾರ್ಟಿ, ಸಿಪಿಐ, ಎನ್‍ಜಿಒಗಳಾದ 'ರಿಹೈ ಮಂಚ್' ಮತ್ತು ಸಿಟಿಜನ್ಸ್ ಎಗೇನ್ಸ್ಟ್ ಹೇಟ್, ವಕೀಲ ಎಂ.ಎಲ್.ಶರ್ಮಾ, ಮತ್ತು ಕಾನೂನು ವಿದ್ಯಾರ್ಥಿಗಳು ಸಹ ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries