HEALTH TIPS

ಡಿಸಿ, ಡಿಡಿಇ ಆದೇಶಕ್ಕೆ ಬೆಲೆಕೊಡದ ಮಲಯಾಳಿ ಶಿಕ್ಷಕಿ- ಜನಪ್ರತಿನಿಧಿಗಳ ಪ್ರತಿಭಟನೆಗೆ ಮಣಿದು ಮತ್ತೆರಜೆಗೆ ಸಮ್ಮತಿ


          ಕಾಸರಗೋಡು: ಬೇಕಲ ಫಿಶರಿಸ್ ಸರ್ಕಾರಿ ಶಾಲೆಯ ಕನ್ನಡ ವಿಭಾಗದ ಸಮಾಜ ವಿಜ್ಞಾನ(ಸೋಶಿಯಲ್ ಸಯನ್ಸ್) ಅಧ್ಯಾಪಕಿಯಾಗಿ ತಿರುವನಂತಪುರ ಮೂಲದ ಕನ್ನಡ ಅರಿಯದ ಅಧ್ಯಾಪಕಿ ತರಗತಿಗೆ ಹಾಜರಾದ ಹಿನ್ನೆಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಹಾಗೂ ಹೆತ್ತವರು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಹಾಗೂ ಶಿಕ್ಷಣ ಉಪನಿರ್ದೇಶಕಿ ಪುಷ್ಪಾ ಅವರಿಗೆ ಮನವಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ  ಡಿಸಿ ಹಾಗೂ ಡಿಡಿಇ ರಜೆಯಲ್ಲಿ ತೆರಳಲು ಆದೇಶ ನೀಡಿದ್ದರು. ಆದರೆ ಅದಕ್ಕೆ ಕಿವಿಗೊಡದ ಶಿಕ್ಷಕಿ ಮಂಗಳವಾರ ಮತ್ತೆ ತರಗತಿಗೆ ಹಾಜರಾಗಲು ಆಗಮಿಸಿದ್ದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು ಈ ಅಧ್ಯಾಪಕಿ ಶಾಲೆಗೆ ಹಾಜರಾದರೆ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಸೋಮವಾರವೇ ತಿಳಿಸಿದ್ದರು.
         ತಿರುವನಂತಪುರದ ಸೆಕ್ರೆಟರಿಯೇಟ್‍ನ ಉನ್ನತ ಅಧಿಕಾರಿಯ ನಿರ್ದೇಶ ಪ್ರಕಾರ ಯಾವ ಕಾರಣಕ್ಕೂ ರಜೆಗೆ ತೆರಳಬಾರದೆಂಬ ನಿರ್ದೇಶಾನುಸರ ಹಠ ಹಿಡಿದು ಶಾಲೆಗೆ ಮಂಗಳವಾರ ಮತ್ತೆ ಹಾಜರಾದರು. ಆದರೆ  ಶಾಲೆಯಲ್ಲಿ ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಆಧ್ಯಕ್ಷ ಶಾನವಾಸ್ ಪಾತೂರು, ಜಿಪಂ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವದ ಜನಪ್ರತಿನಿಧಿಗಳು, ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಕಾಸರಗೋಡು ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿಗಳು ಅಧ್ಯಾಪಕಿಯನ್ನು ತರಗತಿಗೆ ಪ್ರವೇಶಿಸದಂತೆ ತಡೆದರು. ಈ ಸಂದರ್ಭದಲ್ಲಿ ಅಧ್ಯಾಪಕಿ ಹಾಗೂ ಜನಪ್ರತಿನಿಧಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಯಾವ ಕಾರಣಕ್ಕೂ ರಜೆಯಲ್ಲಿ ತೆರಳುವುದಿಲ್ಲ ಎಂಬುದಾಗಿ  ಮತ್ತೆ ಹಠ ಹಿಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ತಕ್ಷಣ ರಜೆಯಲ್ಲಿ ತೆರಳುವಂತೆಯೂ  ಯಾವ ಕಾರಣಕ್ಕೂ ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳದಲ್ಲಿ ಪಾಠ ಮಾಡಬಾರದೆಂದೂ, ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟ ಆಡದಂತೆ ತಿಳಿಸಿದರು. ಅದನ್ನು ಮೀರಿ ತರಗತಿಗೆ ಹಾಜರಾದರೆ ಉಂಟಾಗುವ ಯಾವುದೇ ಅನಾಹುತಗಳಿಗೆ ಆ ಅಧ್ಯಾಪಕಿಯೇ ಕಾರಣವೆಂದು ಖಾರವಾಗಿ ಹೇಳಿದಾಗ, ಬೇರೆ ದಾರಿಯಿಲ್ಲದೇ 45 ದಿನಗಳ ರಜೆಯಲ್ಲಿ ತೆರಳುವುದಾಗಿ(ಫೆ.28ರ ವರೆಗೆ) ಒಪ್ಪಿದರು. 
     ಕಳೆದ ದಿನ ಬೇಕಲ ಫಿಶರೀಸ್ ಸರ್ಕಾರಿ ಶಾಲೆಯ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು ಕಲೆಕ್ಟರೇಟ್‍ಗೆ ತೆರಳಿ ಶಿಕ್ಷಣ ಉಪನಿರ್ದೇಶಕರ ಮುಂದೆ ಮನವಿ ಸಲ್ಲಿಸಿದ್ದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ  ಡಿಸಿ ಭರವಸೆ ನೀಡಿದ್ದರು. ಆದರೆ ಸಮಸ್ಯೆ ಬಗೆ ಹರಿಯದ ಕಾರಣ ಮಂಗಳವಾರ ಮತ್ತೆ ಶಾಲೆಯ ಮುಂದೆ ಪ್ರತಿಭಟಿಸಲಾಯಿತು.  ಎಸ್ಸೆಸ್ಸೆಲ್ಸಿ ಪರೀಕ್ಷೆಯು ಇನ್ನೆರಡು ತಿಂಗಳು ಮಾತ್ರ ಬಾಕಿಯಿರುವಾಗ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮುಗಿಸಬೇಕಾದ ಅನಿವಾರ್ಯತೆಯಿರುವಾಗ  ಈ ರೀತಿಯಲ್ಲಿ ಮಲಯಾಳ ಅಧ್ಯಾಪಕಿ ತರಗತಿಗೆ ಬರುವುದು ಕನ್ನಡ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಹೆತ್ತವರು  ತಿಳಿಸಿದ್ದಾರೆ.
                   ಆಯ್ಕೆಯಾಗುವುದು ಹೇಗೆ..ಬಗೆಹರಿಯದ ಯಕ್ಷ ಪ್ರಶ್ನೆ:
      ಕಳೆದ ಕೆಲವು ವರ್ಷಗಳಿಂದ ಕಾಸರಗೋಡಿನ ವಿವಿಧ ಶಾಲೆಗಳಿಗೆ ಆಯ್ಕೆಯಾಗಿ ಬರುತ್ತಿರುವ ಕನ್ನಡ ಗಂಧಗಾಳಿಯಿಲ್ಲದ ಮಲೆಯಾಳಿ ಶಿಕ್ಷಕರು ಹೇಗೆ ನೇಮಕವಾಗುತ್ತಾರೆ ಎನ್ನುವುದು ಜನಸಾಮಾನ್ಯರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಸಾಮಾನ್ಯವಾಗಿ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಬಳಿಕ ಆಯ್ಕೆ ಪ್ರಕ್ರಿಯೆಯ ಮೂಲಕ ಅಂತಿಮ ನೇಮಕಾತಿ ನಡೆಯುತ್ತದೆ. ಈ ಸಂದರ್ಭ ಆಯೋಗದ ಬೋರ್ಡ್ ಸದಸ್ಯರು,  ವಿವಿ, ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವವರು/ನಿವೃತ್ತರಾದವರು ಆಯ್ಕೆ ಸಮಿತಿಯಲ್ಲಿರುತ್ತಾರೆ. ಮೌಖಿಕ ಪರೀಕ್ಷೆಯಲ್ಲಿ ನೇರಾನೇರ ಸಂದರ್ಶನ ನಡೆಸುವ ವೇಳೆ ಕನ್ನಡದಲ್ಲಿ ಬೋಧಿಸಲು ಅರ್ಹತೆ ಇದೆಯೇ, ಇಲ್ಲವೇ ಎಂಬ ಅಂಶಗಳು ಅರಿವಾಗದಷ್ಟು ಬುದ್ದಿಶೂನ್ಯರು ಆಯ್ಕೆ ಸಮಿತಿಯಲ್ಲಿರುವರೇ ಎಂಬ ಸಂಶಯ ಜನಸಾಮಾನ್ಯರದ್ದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries