ಬದಿಯಡ್ಕ: ನಾನಾ ಸ್ವಭಾವದ ಮಕ್ಕಳನ್ನು ವೇದಿಕೆಯಲ್ಲಿ ಒಂದುಗೂಡಿಸುವ ಚಾಕಚಕ್ಯತೆಯನ್ನು ಹೊಂದಿದ ಗುರುಗಳು ತನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ ವಿದ್ಯಾರ್ಥಿಗಳ ಕುರಿತಾಗಿ ಯೋಚಿಸುತ್ತಿರುತ್ತಾರೆ. ರಾತ್ರಿ ನಿದ್ರೆಯಲ್ಲೂ ಮಕ್ಕಳ ಕುರಿತು ಕಾಳಜಿಯನ್ನು ಹೊಂದಿದರೆ ಮಾತ್ರ ಉತ್ತಮವಾದ ಕಥೆಯನ್ನು ರಂಗದಲ್ಲಿ ಪ್ರಸ್ತುತಪಡಿಸಲು ಸಾಧ್ಯವಿದೆ. ಅಂತಹ ಎಲ್ಲಾ ಅಂಶಗಳನ್ನೂ ಮೈಗೂಡಿಸಿಕೊಂಡಿರುವ ವೈಷ್ಣವೀ ನಾಟ್ಯಾಲಯದ ನೃತ್ಯನಿರ್ದೇಶಕಿ ಯೋಗೀಶ್ವರಿಯ ಸಾಧನೆ ನಮಗೆ ಹೆಮ್ಮೆ ತರುವಂತಿದೆ ಎಂದು ಪುತ್ತೂರು ಪದಡ್ಕ ವಿಶ್ವಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ ಏಂಡ್ ಕಲ್ಚರ್‍ನ ನೃತ್ಯ ಗುರುಗಳಾದ ವಿದುಷಿ ನಯನ ವಿ.ರೈ ಹೇಳಿದರು.
ಶನಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಜರಗಿದ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಶಾಖೆಯ 15ನೇ ವರ್ಷದ `ನೃತ್ಯೋತ್ಸವ 2020' ಕಾರ್ಯಕ್ರಮ `ಭಕ್ತ ಪ್ರಹ್ಲಾದ' ಎಂಬ ನೃತ್ಯ ರೂಪಕ ಹಾಗೂ ಭರತನಾಟ್ಯದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ತನ್ನ ಯೋಚನೆಗಳನ್ನು ಸಾಕಾರಗೊಳಿಸಲು ಪ್ರತಿಭಾವಂತ ಮಕ್ಕಳು ಅಗತ್ಯ. 9ನೇ ವಯಸ್ಸಿನಿಂದ ನೃತ್ಯಾಭ್ಯಾಸವನ್ನು ಆರಂಭಿಸಿದ ಯೋಗೀಶ್ವರಿಯ ಸಾಧನೆಯು ಅಪಾರವಾಗಿದೆ. ಸತತ ಅಭ್ಯಾಸದಿಂದ ಮಾತ್ರ ನಟನೆ ಸಾಧ್ಯವಿದೆ. ಪರೀಕ್ಷೆಗೆ ಬೇಕಾದ ಎಲ್ಲಾ ಅಂಶಗಳನ್ನು ನೃತ್ಯ ಪ್ರದರ್ಶನಗಳಲ್ಲಿ ಒಳಪಡಿಸಿ, ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವುದು ಸಂತಸದ ವಿಚಾರವಾಗಿದ್ದು ಅವರ ಭವಿಷ್ಯದ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ ಎಂದರು.
ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣುಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ ಭರತ ಮುನಿಯಿಂದ ಅನುಗ್ರಹವಾದ ಭರತಾಟ್ಯವು ನೃತ್ಯ ಕಲೆಯಾಗಿದ್ದು, ಕಲಾಭಿಮಾನಿಗಳಿಗೆ ಉಣಬಡಿಸುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ. ಸಂಗೀತವನ್ನು ಭಾವ, ರಾಗ, ತಾಳ, ನೃತ್ಯಗಳ ಮೂಲಕ ತೋರ್ಪಡಿಸಲಾಗುತ್ತಿದೆ. ಇದೆಲ್ಲವೂ ನಮ್ಮ ಸಂಸ್ಕøತಿಯ ಭಾಗವೇ ಆಗಿದೆ. ನಮ್ಮ ಸಂಸ್ಕøತಿಯ ಬೇರುಗಳು ಗಟ್ಟಿಯಾಗಿದ್ದು, ಇದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ನಾಟ್ಯಾಲಯದ ಮೂಲಕ ಕಲೆಗೆ ಸದಾ ಪ್ರೋತ್ಸಾಹ ಲಭಿಸಲಿ ಎಂದರು. ವೈಷ್ಣವಿ ನಾಟ್ಯಾಲಯದ ಬದಿಯಡ್ಕ ಶಾಖೆಯ ಅಧ್ಯಕ್ಷ ಮಹೇಶ್ ವಳಕುಂಜ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಯದೇವ ಖಂಡಿಗೆ, ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ನಿರ್ದೇಶಕರಾದ ಡಾ. ರಾಜೇಶ್ ಬೆಜ್ಜಂಗಳ, ನ್ಯಾಯವಾದಿ ಜಯಪ್ರಕಾಶ್ ಪುತ್ತೂರು ಉಪಸ್ಥಿತರಿದ್ದರು. ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಭಾಸ್ಕರ ಕನಕಪ್ಪಾಡಿ ವಂದಿಸಿದರು. ನಾರಾಯಣ ಆಸ್ರ ಹಾಗೂ ಸತ್ಯನಾರಾಯಣ ತಂತ್ರಿ ನಿರೂಪಿಸಿದರು.
ಜನಮನಸೂರೆಗೊಂಡ ಭಕ್ತ ಪ್ರಹ್ಲಾದ ನೃತ್ಯರೂಪಕದ ಪ್ರಥಮ ಪ್ರದರ್ಶನ :
ಸಭಾಕಾರ್ಯಕ್ರಮದ ಬಳಿಕ ಕಾಸರಗೋಡು ಚಾಲದಲ್ಲಿರುವ ಕಣ್ಣೂರು ವಿವಿ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಡಾ. ರಾಜೇಶ್ ಬೆಜ್ಜಂಗಳ ಸಾಹಿತ್ಯ ಸಂಯೋಜನೆಯಲ್ಲಿ ಮೂಡಿಬಂದ `ಭಕ್ತ ಪ್ರಹ್ಲಾದ' ಎಂಬ ನೃತ್ಯ ರೂಪಕದ ಪ್ರಥಮ ಪ್ರದರ್ಶನವು ಜನಮನಸೂರೆಗೊಂಡಿತು. ನೃತ್ಯ ಸಂಯೋಜನೆಯಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು, ಸಂಗೀತ ಮತ್ತು ರಾಗಸಂಯೋಜನೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ವಿದ್ವಾನ್ ವೆಳ್ಳಿಕೋತ್ ವಿಷ್ಣುಭಟ್, ವಿದ್ವಾನ್ ವಸಂತ ಕುಮಾರ್ ಗೋಸಾಡ, ಟಿ.ವಿ.ಗಿರಿ ಮುಡಿಪ್ಪು, ವಿದ್ವಾನ್ ಗೀತೇಶ್ ಕುಮಾರ್ ನೀಲೇಶ್ವರ, ವಿದ್ವಾನ್ ರಾಜಗೋಪಾಲ್ ಕಾಞಂಗಾಡು, ಬಾಬಣ್ಣ ಪುತ್ತೂರು, ಸಚಿನ್ ಪುತ್ತೂರು ಹಿಮ್ಮೇಳ ತಂಡದೊಂದಿಗೆ ವಿಘ್ನೇಶ್ ವಿಶ್ವಕರ್ಮ, ಭಾವನಾ ಕಲಾ ಆಟ್ರ್ಸ್ ಪುತ್ತೂರು, ಕೃಷ್ಣಪ್ಪ ಮಾಸ್ತರ್ ಅಡೂರು ಮುಖವರ್ಣಿಕೆ ಹಾಗೂ ವಸ್ತ್ರ ವಿನ್ಯಾಸದಲ್ಲಿ ಸಹಕರಿಸಿದ್ದರು.



