HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-30-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

                   ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ. 

೧. ರೋಮ್‌ನಲ್ಲಿ ರೋಮನ್ನನಾಗಿರು, ಕರ್ನಾಟಕದಲ್ಲಲ್ಲ!

ಪ್ರಾಚೀನ ರೋಮ್‌ನಲ್ಲಿ ಆರಂಭವಾಗಿ ಸುಮಾರು ೧೫ನೆಯ ಶತಮಾನದವರೆಗೂ ಯುರೋಪ್‌‍ನಲ್ಲೆಲ್ಲ ಚಾಲ್ತಿಯಲ್ಲಿದ್ದ ವಿಧಾನ I,V,X,L,C,D,M ಎಂಬ ಏಳು ರೋಮನ್ ಅಕ್ಷರಗಳನ್ನು ಉಪಯೋಗಿಸಿ ಸಂಖ್ಯೆಗಳನ್ನು ಬರೆಯುವುದು. ಕ್ರಮೇಣ ಹಿಂದೂ-ಅರೇಬಿಕ್ ಅಂಕಿಗಳೇ ಜಗತ್ತಿನಾದ್ಯಂತ ಜನಪ್ರಿಯವಾದ ಮೇಲೆ, ಅದರಲ್ಲೂ ಭಾರತವು ಕೊಟ್ಟ ‘೦’ ಬಹೂಪಯೋಗಿ ಎಂದು ತಿಳಿದಮೇಲೆ ರೋಮನ್ ಸಂಖ್ಯೆಗಳ ಬಳಕೆ ಕಡಿಮೆಯಾಯಿತು. ಈಗ ಅವು ಬಹು ಮಟ್ಟಿಗೆ ಹಳೆಯ (ಉದಾ: ಬಿಗ್ ಬೆನ್) ಗಡಿಯಾರಗಳಿಗೆ, ಸ್ಮಾರಕಗಳ ಸ್ಥಾಪನಾ ವರ್ಷ ಗುರುತಿಸಲಿಕ್ಕೆ, ಸಿನಿಮಾ, ಟಿವಿ ಸರಣಿ, ಮತ್ತು ಪುಸ್ತಕಗಳ ಕಾಪಿರೈಟ್ ನೋಂದಣಿ ವರ್ಷವನ್ನು ನಮೂದಿಸಲಿಕ್ಕೆ - ಮಾತ್ರ ಸೀಮಿತ ಎಂದಾಗಿದೆ. ನ್ಯೂಯಾರ್ಕ್‌ನಲ್ಲಿರುವ ಸ್ಟಾಚ್ಯೂ ಆಫ್ ಲಿಬರ್ಟಿ ಪ್ರತಿಮೆಯಲ್ಲಿ ಸ್ವಾತಂತ್ರ್ಯದೇವತೆಯು ಕೈಯಲ್ಲಿ ಹಿಡಿದ ಪುಸ್ತಕದ ಮೇಲೆ JULY IV MDCCLXXVI ಎಂದು ಅಮೆರಿಕದ ಸ್ವಾತಂತ್ರ್ಯ ಘೋಷಣೆ ದಿನಾಂಕ 4 ಜುಲೈ 1776ನ್ನು ಕೆತ್ತಿದ್ದಿದೆಯೆಂಬುದನ್ನು ಇಲ್ಲಿ ಸ್ಮರಿಸಬಹುದು. ಸಾಮಾನ್ಯವಾಗಿ ೪ನ್ನು ರೋಮನ್‌ನಲ್ಲಿ ಬರೆಯುವಾಗ IV ಎಂದು ಬರೆಯುವುದಾದರೂ ಗಡಿಯಾರಗಳಲ್ಲಿ IIII ಎಂದು ಬರೆಯುವುದು ವಾಡಿಕೆ. ಅದು VIIIರೊಂದಿಗೆ ಸಮಮಿತಿಯಲ್ಲಿ ಬ್ಯಾಲೆನ್ಸ್ಡ್ ಆಗಿ ಕಾಣುತ್ತದೆ ಎಂಬ ಕಾರಣಕ್ಕೆ. 

ತಲೆಮಾರುಗಳ ಸಂಖ್ಯೆಯನ್ನು ನಮೂದಿಸಲಿಕ್ಕೂ ರೋಮನ್ ಅಂಕಿಗಳನ್ನು ಬಳಸುವುದಿದೆ. ಉದಾ: ಬ್ರಿಟನ್‌ನ ದೊರೆ George V ಅಂದರೆ ಐದನೆಯ (ತಲೆಮಾರಿನ) ಜಾರ್ಜ್. ಭಾರತಕ್ಕೆ ಭೇಟಿಯಿತ್ತ ಏಕೈಕ ಬ್ರಿಟಿಷ್ ಚಕ್ರವರ್ತಿ ಎಂಬ ಖ್ಯಾತಿಯವನು. ಆತನ ಸ್ವಾಗತಕ್ಕೆಂದು ರವೀಂದ್ರನಾಥ ಟಾಗೋರರು ಬರೆದದ್ದೇ ಜನಗಣಮನ “ಅಧಿನಾಯಕ" ಜಯ ಹೇ ಭಾರತ “ಭಾಗ್ಯವಿಧಾತ" ಪದ್ಯ. ಆಮೇಲೆ ಅದರ ಒಂದು ಭಾಗವನ್ನಷ್ಟೇ ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಯ್ತು.

ಸರಿ, ಈಗ ವಿಷಯವೇನೆಂದರೆ- ರಾಜಮನೆತನದ ಬಿರುದುಬಾವಲಿಗಳನ್ನು ಬದಿಗಿಟ್ಟು ಸಾಮಾನ್ಯ ಪ್ರಜೆಗಳಾಗಿ ಬಾಳಬಯಸಿರುವ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿಯ ಬಗೆಗಿನ ಸುದ್ದಿಯಲ್ಲಿ ಬ್ರಿಟನ್‌ನ ರಾಣಿ Elizabeth II (ಎರಡನೆಯ ತಲೆಮಾರಿನ ಎಲಿಜಬೆತ್) ಮತ್ತು King Edward III (ಮೂರನೆಯ ತಲೆಮಾರಿನ ಕಿಂಗ್ ಎಡ್ವರ್ಡ್) ಇವರ ಹೆಸರುಗಳನ್ನು ಉಲ್ಲೇಖಿಸುವಾಗ ವಿಶ್ವವಾಣಿ ಪತ್ರಿಕೆಯು “ರಾಣಿ ಎಲಿಜಬೆತ್ ಐಐ ಹೇಳಿಕೆಯಲ್ಲಿ ತಿಳಿಸಿದ್ದಾರೆ", “ತನ್ನ ಮೊಮ್ಮಗನ ಭವಿಷ್ಯದ ಬಗ್ಗೆ ರಾಣಿಯು ತೆಗೆದುಕೊಂಡ ತೀರ್ಪು 1936ರಲ್ಲಿ ಕಿಂಗ್ ಎಡ್ವರ್ಡ್ ಐಐಐ ಅವರ ಪದತ್ಯಾಗದ ಹೋಲಿಕೆಯಾಗಿದೆ" ಎಂದು ಬರೆದಿರುವುದು! ಅಂದರೆ ರೋಮನ್ ಅಕ್ಷರಗಳ ಇಂಗ್ಲಿಷ್ ಉಚ್ಚಾರವನ್ನು ಕನ್ನಡ ಲಿಪಿಯಲ್ಲಿ ಬರೆದದ್ದು! ಇದು ಆಭಾಸವೋ ಹೊಸದೊಂದು ಆವಿಷ್ಕಾರವೋ ಬರೆದವರಿಗೇ ಗೊತ್ತು. ಇದನ್ನು ಗಮನಿಸಿ ಕಳುಹಿಸಿರುವ ಕಾರ್ತಿಕ್ ದೇಶಪಾಂಡೆ ಗಂಗಾವತಿ ಅವರು "ಇದರ ಬದಲಿಗೆ ಅಚ್ಚ ಕನ್ನಡದಲ್ಲೆಂಬಂತೆ ಇಮ್ಮಡಿ, ಮುಮ್ಮಡಿ, ನಾಲ್ವಡಿ ಎಂದಿದ್ದರೂ ತಪ್ಪಿರಲಿಲ್ಲವಲ್ಲ!" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಈ ಹಿಂದೆ ನಡೆದಿದ್ದ ಇಂಥದೇ ಇನ್ನೊಂದು ಅಧ್ವಾನವನ್ನೂ ನೆನಪಿಸಿಕೊಂಡಿದ್ದಾರೆ: ಕೆಲ ವರ್ಷಗಳ ಹಿಂದೆ ಚೈನಾ ಅಧ್ಯಕ್ಷ Xi Jinping ಭಾರತಕ್ಕೆ ಭೇಟಿಯಿತ್ತಿದ್ದಾಗ ಅವರ ಹೆಸರಿನ "ಕ್ಸಿ" (Xi) ಭಾಗವನ್ನು ರೋಮನ್ ಸಂಖ್ಯೆ ಹನ್ನೊಂದು ಎಂದು ತಪ್ಪಾಗಿ ತಿಳಿದು "ಚೈನಾ ಅಧ್ಯಕ್ಷ ಹನ್ನೊಂದನೆಯ ಜಿನ್ಪಿಂಗ್..." ಎಂದು ಕೆಲವು ಕನ್ನಡ ಪತ್ರಿಕೆಗಳು ಬರೆದಿದ್ದವು! 

===
೨. ಸರಿಪಡಿಸಬಹುದಾಗಿದ್ದ ತಲೆಬರಹಗಳು

ಅ) “ವಿದ್ಯೆಯನ್ನು ಹರಸಿ ಬಂದ ಮಕ್ಕಳನ್ನು ಅಪ್ಪಿಕೊಂಡ ಶ್ರೀ" [ಕನ್ನಡಪ್ರಭ. ೨೨ಜನವರಿ೨೦೨೦. ಗಮನಿಸಿ ಕಳುಹಿಸಿದವರು: ನಾಗೇಂದ್ರರಾವ್ ಖಂಡಗಾಳೆ] ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮ. ಅದರಲ್ಲಿ ಪಾಲ್ಗೊಂಡಿದ್ದ ಅರಸೀಕೆರೆ ನಗರ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರಯ್ಯ ಅವರು ಸ್ವಾಮೀಜಿ ನಡೆಸುತ್ತಿದ್ದ ಅನ್ನದಾಸೋಹ + ಜ್ಞಾನದಾಸೋಹಗಳನ್ನು ಬಾಯ್ತುಂಬ ಕೊಂಡಾಡಿದ್ದಾರೆ. ಆದರೆ ‘ಅರಸಿ ಬಂದ ಮಕ್ಕಳನ್ನು’ ಎನ್ನಲು ‘ಹರಸಿ ಬಂದ ಮಕ್ಕಳನ್ನು’ ಎಂದಿದ್ದು ಅವರೋ, ಅಥವಾ ಕ.ಪ್ರ ಸುದ್ದಿಮನೆಯವರು ಆ-ಹಾ ವ್ಯಾಧಿಗೊಳಗಾದದ್ದೋ ಗೊತ್ತಿಲ್ಲ.

ಆ) “ವಿಜಯ್ ಮಲ್ಯ ಒಂದು ಪೈಸೆ ಮರುಪಾವತಿಸಿಲ್ಲ" [ವಿಜಯವಾಣಿ. ೨೦ಜನವರಿ೨೦೨೦. ಗಮನಿಸಿ ಕಳುಹಿಸಿದವರು: ಸುಪ್ರೀತ್ ಡಿಸೋಜಾ]. ವಿಜಯ್ ಮಲ್ಯ ಮರುಪಾವತಿಸಬೇಕಾದ ಸಾಲ 807 ಕೋಟಿ ರೂಪಾಯಿ ಎಂದು ಹಿಂದೊಮ್ಮೆ ವರದಿಯಾಗಿತ್ತು. ಅಂಕೆಗಳಲ್ಲಿ ಬರೆದರೆ 8070000000.00 ರೂಪಾಯಿ. ಇದರಲ್ಲಿ ಒಂದು ಪೈಸೆ ಮಾತ್ರ ಮರುಪಾವತಿಸಿಲ್ಲ ಅಂದರೆ, ವಿಜಯವಾಣಿಯ ಪ್ರಕಾರ ವಿಜಯ್ ಮಲ್ಯ 
ಈಗಾಗಲೇ 8069999999 ರೂಪಾಯಿ ಮತ್ತು 99 ಪೈಸೆ ಮರುಪಾವತಿಸಿ ಆಗಿದೆ ಅಂತಾಯ್ತು. ಹಾಗಾಗಿ, ಬರಿ ಒಂದು ಪೈಸೆಗಾಗಿ ಇಷ್ಟೇಕೆ ಹಲ್ಲಾಗುಲ್ಲಾ?

ಇ) “ಕೆಲಸಕ್ಕೆ ಸೇರಿದ ದಿನವೇ ವಿದ್ಯುತ್ ಸ್ಪರ್ಶಿಸಿ ಯುವಕ" [ಕನ್ನಡಪ್ರಭ ೨೦ಜನವರಿ೨೦೨೦. ಗಮನಿಸಿ ಕಳುಹಿಸಿದವರು: ಶ್ರೀಕಾಂತ್ ಬೆಂಗಳೂರು]. ಇದೊಂಥರ ಪ್ರಶ್ನೆಪತ್ರಿಕೆಯಲ್ಲಿ ‘ಬಿಟ್ಟ ಸ್ಥಳ ತುಂಬಿ" ರೀತಿಯದು. ವಿದ್ಯುತ್ ಸ್ಪರ್ಶಿಸಿ ಯುವಕ ಸತ್ತಿದ್ದಾನೆ. ಆದರೆ ಕನ್ನಡಪ್ರಭ ಆ ವಿವರವನ್ನು ತಲೆಬರಹದಲ್ಲಿ ಬಿಟ್ಟಿಬಿಟ್ಟಿದೆ. ಓದುಗರೇ ಊಹಿಸಿಕೊಳ್ಳಲಿ ಎಂದು ಇರಬಹುದು.

ಈ) “ಪೋಲಿಯೋ ಹಾನಿ ಹಾಕಿಸಿದ್ರೆ ಅಂಗವಿಕಲತೆ ದೂರ" [ವಿಜಯವಾಣಿ. ೨೦ಜನವರಿ೨೦೨೦. ಗಮನಿಸಿ ಕಳುಹಿಸಿದವರು: ವತ್ಸಲಾ ಹೊಳ್ಳ]. ಪೋಲಿಯೋದಿಂದ ಹಾನಿ ಆಗದಂತೆ ಹನಿ ಹಾಕಿಸಿಕೊಳ್ಳುವುದು ಗೊತ್ತು. ಪೋಲಿಯೋ ಹಾನಿ ಹಾಕಿಸೋದಂದ್ರೆ ಏನು!? ದಾರೀಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆದಂತೆ?

ಉ) “ಇಬ್ಬರು ಮನಗಳ್ಳರ ಬಂಧನ" [ವಿಜಯಕರ್ನಾಟಕ. ೧೫ಜನವರಿ೨೦೨೦. ಗಮನಿಸಿ ಕಳುಹಿಸಿದವರು: ರಾಘವೇಂದ್ರ ಎಚ್‌ಎಸ್] ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರಂತೆ. ಒಂಟಿ ಮನೆಗಳು ಅಂದರೆ ಮನೆಯಲ್ಲಿ ಒಂಟಿಯಾಗಿ ಇರುವವರ ಮನೆಗಳು ಎಂದರ್ಥ. ಅದಿರಲಿ, ಕಳ್ಳರನ್ನು "ಮನಗಳ್ಳರು" ಎಂದು ಕರೆಯಲಿಕ್ಕೆ ಅವರು ಯಾರ ಮನಸ್ಸನ್ನು ಕದ್ದಿದ್ದಾರೆ? 

===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು

ಅ) ಶೀತಲ ಸರಿ. ತಣ್ಣಗಿರುವ, ತಂಪಾಗಿರುವ ಎಂದು ಅರ್ಥ. ಶೀತಲೀಕರಣ ಅಂದರೆ ತಂಪಾಗಿಸುವಿಕೆ. ಹಾಲನ್ನು ಶೀತಲೀಕರಿಸಿ ಸಂಗ್ರಹಿಸಿಟ್ಟರೆ ಒಂದೆರಡು ದಿನ ಕೆಡುವುದಿಲ್ಲ. ವಿಜಯಕರ್ನಾಟಕ ಪತ್ರಿಕೆಯಲ್ಲಿ ೧೯ಜನವರಿ೨೦೨೦ರಂದು ಒಂದು ಸುದ್ದಿಯಲ್ಲಿ “ದೊಡ್ಡಬಳ್ಳಾಪುರ: ಬಾಲಚಂದ್ರ ಜಾರಕಿಹೊಳಿ ಅವರು ಇಲ್ಲಿನ ಹಾಲು ಶಿಥಿಲ ಕೇಂದ್ರದಲ್ಲಿ ಶನಿವಾರ ನಡೆದ ಹಾಲು ಉತ್ಪಾದಕರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಹೆಚ್ಚುವರಿ ಶಿಥಿಲ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು" ಎಂದು ಪ್ರಕಟವಾಗಿದೆ! [ಗಮನಿಸಿ ಕಳುಹಿಸಿದವರು: ಲಕ್ಷ್ಮೀಶ ಎಮ್.ಟಿ]

ಆ) ವೈಕುಂಠ ಸರಿ. ವಿಷ್ಣುವಿನ ವಾಸಸ್ಥಳ, ಪರಮಪದ. ಅದನ್ನು ವೈಕುಂಟ, ವಯಕುಂಟ ಅಂತೆಲ್ಲ ಬರೆಯುವುದು ತಪ್ಪು. “ತಿರುಪತಿ ತಿರುಮಲ ಶ್ರೀ ವೆಮಕಟೇಶ್ವರ ದೇವಾಲಯದಲ್ಲಿ ವಯಕುಂಟದ್ವಾರ ದರ್ಶನ ಕೇವಲ ಎರಡು ದನಾ ಮತ್ರ ಎಂದು ದೇವಸ್ತಾನ ಮಂಡಳಿ ಹೆಳಿದೆ" ಎಂಬ ವಾಕ್ಯ ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡ ಸಂಜೆಪತ್ರಿಕೆ ಸಂಜೆವಾಣಿಯಲ್ಲಿ ಪ್ರಕಟವಾದ ಸುದ್ದಿಯಲ್ಲಿತ್ತು [೬ಜನವರಿ೨೦೨೦. ಗಮನಿಸಿ ಕಳುಹಿಸಿದವರು: ಭರದ್ವಾಜ ಸೆಲ್ಲಪ್ಪನ್]. ಈ ಒಂದೇ ವಾಕ್ಯದಲ್ಲಿ ಎಷ್ಟು ತಪ್ಪುಗಳಿವೆ ಎಂದು ಕಂಡುಕೊಂಡರೆ ದುರ್ಬಲ ಹೃದಯದವರು ವೈಕುಂಠ ಸೇರುವ ಅಪಾಯವಿದೆ! 

ಇ) ಪಾರುಪತ್ಯ ಸರಿ. ಮೇಲ್ವಿಚಾರಣೆ, ಉಸ್ತುವಾರಿ, ಅಧಿಕಾರ ಎಂಬ ಅರ್ಥ. “ದಳಪತಿಗಳ ಪಾರಂಪತ್ಯದಿಂದ ಉದುರುತ್ತಿವೆ ಜನತಾದಳ" ಎಂದು ವಿಶ್ವವಾಣಿ ೧೬ಜನವರಿ೨೦೨೦ರ ಸಂಚಿಕೆಯಲ್ಲಿ ಲೇಖನವೊಂದರ ತಲೆಬರಹದಲ್ಲಿ ಪ್ರಕಟವಾಗಿತ್ತು. ಪಾರಂಪತ್ಯ ತಪ್ಪು.  

ಈ) ಸಂಪ್ರದಾಯ ಸರಿ. ಪೂರ್ವಾಚಾರ, ಸದುಪದೇಶ ಪರಂಪರೆ ಎಂದು ಅರ್ಥ. ಇದನ್ನು ‘ಸಂಪ್ರಾದಾಯ’ ಎಂದು ತಪ್ಪಾಗಿ ಬರೆಯುವುದು ವಿಜಯವಾಣಿ, ಪ್ರಜಾವಾಣಿ ಮುಂತಾದ ಪ್ರಮುಖ ಪತ್ರಿಕೆಗಳಲ್ಲೂ ಆಗಾಗ ಕಾಣಿಸುತ್ತದೆ.

ಉ) ಮೌಢ್ಯ ಸರಿ. ದಡ್ಡತನ, ಮೂರ್ಖತನ ಎಂಬ ಅರ್ಥದ ನಾಮಪದ ಇದು. ಅದಕ್ಕೆ ಮತ್ತೆ ‘ತೆ’ ಸೇರಿಸಿ ಮೌಢ್ಯತೆ ಎನ್ನಬೇಕಿಲ್ಲ. 
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ
===========

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries