ಬದಿಯಡ್ಕ: ಸರ್ವಜನರಿಗೂ ನೆಮ್ಮದಿ, ಹಿತ ನೀಡುವ ದೈವ ಪ್ರಾರ್ಥನೆಯಿಂದ ಸುಭಿಕ್ಷ ನೆಲೆಗೊಳ್ಳುತ್ತದೆ. ಎಲ್ಲರ ಒಗ್ಗಟ್ಟಿನ ಪಾಲ್ಗೊಳ್ಳುವಿಕೆ ಯಾಗವಾಗಿದ್ದು, ಬ್ರಹ್ಮಕಲಶ ಉತ್ಸವವೂ ವಿಷ್ಣು ಯಾಗವಾಗಿ ಪರಿಗಣಿಸಲ್ಪಟ್ಟಿದ್ದು, ಮಾನವ ಸುಖ ಜೀವನ-ಅಸ್ತಿತ್ವದ ಪೂರಕ ಬೆಳವಣಿಗೆಗೆ ಕಾರಣವಾಗುವುದು ಎಂದು ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ತಿಳಿಸಿದರು.
ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಶ್ರೀಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವೀ ಚಿಂತನೆಯ ಸುಮಸ್ಸು ಅರಳುವ ಮೂಲಕ ಸಮೃದ್ದತೆ ನೆಲೆಗೊಳ್ಳುವುದು. ದೇವಾಲಯಗಳ ಆರಾಧನೆ, ಪ್ರಾರ್ಥನೆಗಳು ಭಕ್ತರ ದುಗುಡಗಳನ್ನು ನಿವಾರಿಸಿ ಶಾಂತಿ-ನೆಮ್ಮದಿಗೆ ಕಾರಣವಾಗುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಶ್ರೀಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅವರು ಉಪಸ್ಥಿತರಿದ್ದು ಮಾತನಾಡಿ, ದೈವ-ದೇವರುಗಳ ಸಂಪ್ರೀತಿಯಿಂದಲ್ಲದೆ ಬೇರೊಂದು ಮಾರ್ಗದಿಂದ ನೆಮ್ಮದಿ ಪ್ರಾಪ್ತವಾಗದು. ಒಗ್ಗಟ್ಟಿನ ಶುದ್ದ ಅಂತಃಕರಣದ ಸೇವೆಗಳ ಮೂಲಕ ಭಗವದನುಗ್ರಹ ಪ್ರಾಪ್ತಿಗೆ ಸಂಕಲ್ಪಿಸುವ ಹೃದಯವಂತಿಕೆ ನಮ್ಮ ಬದುಕಿನ ಮೂಲ ಲಕ್ಷ್ಯವಾಗಬೇಕು ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೊಡಿಂಗಾರು ಗುತ್ತು ಗೌರೀಶಂಕರ ರೈ ಅಧ್ಯಕ್ಷತೆ ವಹಿಸಿದ್ದರು. ಶಂಕರ ಮಾಸ್ತರ್, ಕಾರ್ಯಾಧ್ಯಕ್ಷ ಶಾಮ ಭಟ್ ಏವುಂಜೆ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಭಟ್ ಪಡಿಯಡ್ಪು, ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಎನ್.ವೆಂಕಟರಮಣ ಹೊಳ್ಳ ಕಾಸರಗೋಡು, ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ ಕೃಷ್ಣ ಅಳಕ್ಕೆ, ರಾಮಪ್ಪ ಮಂಜೇಶ್ವರ, ರಾಮ ಕಾರ್ಮಾರು, ಕೃಷ್ಣ ದರ್ಬೆತ್ತಡ್ಕ, ಸೂರ್ಯಪ್ರಕಾಶ ಶೆಟ್ಟಿ ಚೌಕಾರು, ಚಂದ್ರಹಾಸ ರೈ ಏವುಂಜೆ, ರಾಮಕೃಷ್ಣ ಮಯ್ಯ, ಕೇಶವ ಮಯ್ಯ ನೀರ್ಚಾಲು, ಸುಬ್ರಹ್ಮಣ್ಯ ಮಯ್ಯ ನೀರ್ಚಾಲು, ನಾರಾಯಣ ಮಣಿಯಾಣಿ ಅಗಲ್ಪಾಡಿ, ಭರಣ್ಯ ಶಿವರಾಮ ಭಟ್, ಬಾಲ ಮಧುರಕಾನನ, ಡಾ.ಶಶಿರಾಜ ನೀಲಂಗಳ, ಪ್ರೊ.ಎ.ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಾಧ್ಯಕ್ಷ ಶಾಮ ಭಟ್ ಏವುಂಜೆ ವಂದಿಸಿದರು. ಕುಕ್ಕಂಗೋಡ್ಲು ಶ್ರೀಕ್ಷೇತ್ರದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.20 ರಿಂದ 28ರ ವರೆಗೆ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


