ಕುಂಬಳೆ: ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಇಂದು ಹಾಗೂ ನಾಳೆ(ಜ.25-26) ಸೂರಂಬೈಲು ಶ್ರೀಗಣೇಶ ಕಲಾಮಂದಿರದಲ್ಲಿ ಹಿರಿಯರ ನೆನಪು ಮತ್ತು ಯಕ್ಷಗಾನ ಪೂರ್ವರಂಗ ಅಧ್ಯಯನ ಶಿಬಿರ ಆಯೋಜಿಸಲಾಗಿದೆ.
ಇಂದು ಬೆಳಿಗ್ಗೆ 10ಕ್ಕೆ ಕೇರಳ ಸರ್ಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್ ಬಾಡೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಎಡನಾಡು ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ ಉದ್ಘಾಟಿಸುವರು. ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಪ್ರಬಂಧಕ ಎ.ಕೃಷ್ಣ ಭಟ್, ಎಡನಾಡು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಎಂ.ಶಂಕರನಾರಾಯಣ ರಾವ್, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್ ಆನಂದ ಭಂಡಾರಿ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು. ಸ್ವಸ್ತಿಶ್ರೀಕಲಾ ಪ್ರತಿಷ್ಠಾನದ ನಿದೇಶಕ ದಿವಾಣ ಶಿವಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡುವರು. ಬಳಿಕ ಯಕ್ಷಗಾನೀಯ ರಸ್ಪಪ್ರಶ್ನೆ ಸ್ಪರ್ಧೆ ಸಂಜೆ 5ರ ತನಕ ಏರ್ಪಡಿಸಲಾಗಿದೆ.
ಭಾನುವಾರ ಬೆಳಿಗ್ಗೆ 10 ರಿಂದ 11ರ ವರೆಗೆ ಯಕ್ಷಗಾನೀಯ ರಸಪ್ರಶ್ನೆ ಸ್ಪರ್ಧೆ, 11 ರಿಂದ ಅಪರಾಹ್ನ 1ರ ವರೆಗೆ ಮಾತಿನ ಮಂಟಪ ಯಕ್ಷಕವಿ-ಕಾವ್ಯ ವಿಚಾರ ನಡೆಯಲಿದ್ದು ಜಬ್ಬಾರ್ ಸಮೋ ಸಂಪಾಜೆ ಸಮನ್ವಯಕಾರರಾಗಿ ಭಾಗವಹಿಸುವರು. ಜಿಲ್ಲಾ ವಾರ್ತಾ ಇಲಾಖೆಯ ಕನ್ನಡ ಮಾಹಿತಿ ಸಹಾಯಕ ಅಧಿಕಾರಿ ವೀ.ಜಿ.ಕಾಸರಗೋಡು, ಪತ್ರಕರ್ತ ಪುರುಷೋತ್ತಮ ಭಟ್ ಅವಲೋಕನ ನಡೆಸುವರು. ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಸಂಯೋಜನೆ ನಡೆಸುವರು. ಅಪರಾಹ್ನ 2.30 ರಿಂದ ಸಂಜೆ 5.30ರ ವರೆಗೆ ಕರ್ಣಬೇಧನ ಆಖ್ಯಾಯಿಕೆಯ ಯಕ್ಷಗಾನ ಕೂಟ ನಡೆಯಲಿದೆ. ಸಚಿನ್ ಶೆಟ್ಟಿ ಕುದ್ರೆಪ್ಪಾಡಿ,(ಭಾಗವತಿಕೆ), ರಾಜೇಂದ್ರಪ್ರಸಾದ್ ಪುಂಡಿಕಾೈ, ಶ್ರೀಸ್ಕಂದ ದಿವಾಣ(ಚೆಂಡೆ-ಮದ್ದಳೆ), ಅರ್ಥಧಾರಿಗಳಾಗಿ ನಾರಾಯಣ ಮಣಿಯಾಣಿ ಬೆಳ್ಳಿಗೆ, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಪುರುಷೋತ್ತಮ ಭಟ್ ಕೆ ಭಾಗವಹಿಸುವರು. ಸಂಜೆ 5ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಅವರು ಲಾಂಛನ ಬಿಡುಗಡೆಗೊಳಿಸುವರು. ಈ ಸಂದರ್ಭ ನಡೆಯುವ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ದಿ.ಕೆ.ಗೋವಿಂದ ಭಟ್ ಸೂರಂಬೈಲು, ದಿ.ಕೆ.ರಾಮಯ್ಯ ಭಟ್ ಕುಳ್ಳಂಬೆಟ್ಟು, ದಿ.ವಿಠಲ ಶರ್ಮ ಅಜ್ಜಕಾನ, ದಿ.ಆನಂದ ನಾಯಕ್ ಸೂರಂಬೈಲು, ದಿ.ಗಣಪತಿ ದಿವಾಣ ಇವರ ಸಂಸ್ಮರಣೆಯನನು ನಾರಾಯಣ ಮಣಿಯಾಣಿ ಬೆಳ್ಳಿಗೆ ಹಾಗೂ ಗೋಪಾಲಕೃಷ್ಣ ನಾಯಕ್ ಸೂರಂಬೈಲು ನಿರ್ವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ, ಪುತ್ತಿಗೆ ಗ್ರಾ.ಪಂ.ಸದಸ್ಯ ವರಪ್ರಸಾದ್ ಪೆರ್ಣೆ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಯಕ್ಷಗಾನ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಪೆಡೆದ ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅವರನ್ನು ಈ ಸಂದರ್ಭ ಗೌರವಿಸಿ ಅಭಿನಂದಿಸಲಾಗುವುದು. ಬಳಿಕ ಸಂಜೆ 6.30 ರಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ನಡೆಯಲಿದೆ.


