ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿಯ ಲೈಫ್ ಮಿಷನ್ ಯೋಜನೆ ಮೂಲಕ 611 ಕುಟುಂಬಗಳ ಸ್ವಂತ ಮನೆಯ ನಿರೀಕ್ಷೆ ಸಫಲಗೊಂಡಿದೆ. ಈ ನಿಟ್ಟಿನಲ್ಲಿ ಫಲಾನುಭವಿಗಳ ಬದುಕಿನಲ್ಲಿ ಒದಗಿದ ಸಂತಸ ಮತ್ತು ಉತ್ಸಾಹ ಸೋಮವಾರ ನಡೆದ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು.
ಮಂಜೇಶ್ವರ ಕಲಾಸ್ಪರ್ಶ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಶಾಸಕ ಎಂ.ಸಿ.ಕಮರುದ್ದೀನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಯೋಜನೆಯಲ್ಲಿ ಸೇರಿರುವ ಫಲಾನುಭವಿಗಳಿಗೆ ಉತ್ತಮ ಸೌಲಭ್ಯಗಳ ಸಹಿತ ಮನೆ ಲಭ್ಯವಾಗಿಸುವ ನಿಟ್ಟಿನಲ್ಲಿ ಅದಾಲತ್ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಯೋಜನೆ ನಿರ್ವಹಣೆಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ, ಪುತ್ತಿಗೆ, ಪೈವಳಿಕೆ, ಎಣ್ಮಕಜೆ ಗ್ರಾಮಪಂಚಾಯತಿಗಳಿಗೆ ಅವರು ಬಹುಮಾನ ವಿತರಿಸಿದರು.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ ದಿವಾಕರ್, ಮಂಜೇಶ್ವರ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ, ಮೀಂಜ ಗ್ರಾಮಪಂಚಾಯತಿ ಅಧ್ಯಕ್ಷೆ ಶಂಸಾದ್ ಶುಕೂರ್, ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್, ಎಣ್ಮಕಜೆ ಗ್ರಾಮಪಂಚಾಯತಿ ಅಧ್ಯಕ್ಷೆ ವೈ.ಶಾರದಾ, ಬ್ಲಾಕ್ ಪಂಚಾಯತಿ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಮುಸ್ತಫಾ, ಬಹರೈನ್ ಮಹಮ್ಮದ್, ಸದಸ್ಯರಾದ ಹಸೀನಾ, ಸದಾಶಿವ, ಎ.ಸಪ್ರೀನಾ, ಬಿ.ಸವಿತಾ, ಎಂ.ಪ್ರದೀಪ್ ಕುಮಾರ್, ಬಿ.ಮಿಸ್ಬಾನಾ, ಬಿ.ಎಂ.ಆಶಾಲತಾ, ಸಾಯಿರಾ ಬಾನು, ಸಹಾಯಕ ಅಭಿವೃದ್ದಿ ಅಧಿಕಾರಿ(ಬಿ.ಡಿ.ಒ.) ಕೆ.ನೂತನ ಕುಮಾರಿ, ಜನಪ್ರತಿನಿಧಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎನ್.ಸುರೇಂದ್ರನ್ ವರದಿ ವಾಚಿಸಿದರು.
ಬಹುಭಾಷಾ ಸಂಗಮ:
ಮಂಜೇಶ್ವರದಲ್ಲಿ ಸೋಮವಾರ ನಡೆದ ಬ್ಲಾಕ್ ಪಂಚಾಯತಿಯ ಲೈಫ್ ಫಲಾನುಭವಿಗಳ ಕುಟುಂಬ ಸಂಗಮ ಅಂಗವಾಗಿ ನಡೆದ ಅದಾಲತ್ ಬಹುಭಾಷಾ ಸಂಗಮ ವೇದಿಕೆಯಾಗಿಯೂ ಗಮನ ಸೆಳೆಯಿತು. ಫಲಾನುಭವಿಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ನಡೆಸಿದ ಸ್ಟಾಲ್ ಗಳಲ್ಲಿ ಕನ್ನಡ, ತುಳು, ಉರ್ದು, ಬ್ಯಾರಿ ಸಹಿತ ಅನೇಕ ಭಾಷೆಗಳಲ್ಲಿ ಮಾಹಿತಿ ನೀಡಲಾಗಿತ್ತು. ಬಹುಭಾಷಾ ಪ್ರದೇಶವಾಗಿರುವ ಮಂಜೇಶ್ವರದ ಹಿನ್ನೆಲೆಯಲ್ಲಿ ಫಲಾನುಭವಿಗಳ ಸೌಲಭ್ಯಕ್ಕಾಗಿ ಈ ವ್ಯವಸ್ಥೆ ಮಾಡಲಾಗಿತ್ತು.
611 ಮನೆಗಳ ನಿರ್ಮಾಣ ಪೂರ್ಣ:
ಮಂಜೇಶ್ವರ ಬ್ಲಾಕ್ ನ ಲೈಫ್ ಮಿಷನ್ ಯೋಜನೆ ಮೂಲಕ 611 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಇವುಗಳಲ್ಲಿ 68 ಮನೆಗಳು ಬ್ಲಾಕ್ ಪಂಚಾಯತಿ ವತಿಯಿಂದ ಪೂರ್ಣಗೊಳಿಸಲಾಗಿದೆ. ಎಣ್ಮಕಜೆ ಗ್ರಾಮಪಂಚಾಯತಿ ಮೂಲಕ 77 ಮನೆಗಳು, ಮಂಗಲ್ಪಾಡಿ 65, ಮಂಜೇಶ್ವರ 50, ಮೀಂಜ 71, ಪೈವಳಿಕೆ 68, ಪುತ್ತಿಗೆ 61, ವರ್ಕಾಡಿ ಗ್ರಾಮಪಂಚಾಯತಿ ಮೂಲಕ 55 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಮನೆ, ಪರಿಶಿಷ್ಟ ಜಾತಿ ಜನಾಂಗದ 7 ಮನೆಗಳು, ಪರಿಶಿಷ್ಟ ಪಂಗಡದ 20 ಮನೆಗಳು, ಪಿ.ಎಂ.ಎ.ವೈ. ಗ್ರಾಮೀಣ ಯೋಜನೆಯಲ್ಲಿ 66 ಮನೆಗಳು ಪೂರ್ಣಗೊಂಡಿವೆ. ಲೈಫ್ ಯೋಜನೆಯ ಮೊದಲ ಹಂತದಲ್ಲಿ 182 ಮನೆಗಳು, ದ್ವಿತೀಯ ಹಂತದಲ್ಲಿ 429 ಮನೆಗಳು ನಿರ್ಮಾಣಗೊಂಡಿವೆ. ಉಳಿದ ಮನೆಗಳ ನಿರ್ಮಾಣ ಚಟುವಟಿಕೆಗಳು ಪ್ರಗತಿಯಲ್ಲಿದೆ.

