ಪೆರ್ಲ: ಯುವ ಮನಸ್ಸುಗಳಲ್ಲಿ ಭಾಷೆ, ಸಂಸ್ಕøತಿಯ ಬಗ್ಗೆ ಸಂವೇದನಾಶೀಲತೆಯನ್ನು ಬೆಳೆಸುವಲ್ಲಿ ಸಾಹಿತ್ಯ ಚಟುವಟಿಕೆಗಳ ಪಾತ್ರ ಮಹತ್ತರವಾದುದು. ಸಾಹಿತ್ಯ ವ್ಯಕ್ತಿಯೊಂದಿಗೆ ಸಮಾಜ, ರಾಷ್ಟ್ರವನ್ನು ಬೆಳೆಸುವ ಸಾಮಥ್ರ್ಯದೊಂದಿಗೆ ಕಾಲಘಟ್ಟದ ಆಗುಹೋಗುಗಳ ದಾಖಲೆಯಾಗಿ ದೇಶ-ಕಾಲ-ಸಮಾಜದ ಕೈಗನ್ನಡಿಯಾಗಿರುತ್ತದೆ ಎಂದು ಉದಯೋನ್ಮುಖ ಸಾಹಿತಿ, ಶಿಕ್ಷಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅವರು ತಿಳಿಸಿದರು.
ಸಾಹಿತ್ತಿಕ-ಸಾಂಸ್ಕøತಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ನೇತೃತ್ವದಲ್ಲಿ ಪೆರ್ಲದ ವ್ಯಾಪಾರಿ ಭವನ ಸಭಾಂಗಣದಲ್ಲಿ ಭಾನುವಾರ ಅಪರಾಹ್ನ ಆಯೋಜಿಸಲಾಗಿದ್ದ ಮಕರ ಸಂಕ್ರಾಂತಿ ಸಾಹಿತ್ಯ ಸಂಭ್ರಮ ಹಾಗೂ ಅಭಿನಂದನಾ ಸಮಾರಂಭದ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರಂತರ ಸಾಹಿತ್ಯ ಚಟುವಟಿಕೆಗಳು ವ್ಯಕ್ತಿಯ ಭಾಷೆ, ಅನುಭವ-ಕಳಕಳಿಗಳ ಬೆಳವಣಿಗೆಗೆ ಪೂರಕವಾಗಿ ಸದಾ ಕ್ರಿಯಾತ್ಮಕವಾಗಿರಿಸುತ್ತದೆ. ಓದುವಿಕೆ, ಗ್ರಹಿಸುವಿಕೆ ಮತ್ತು ಚಿಂತನೆಗಳ ಉತ್ಪನ್ನವಾಗಿ ಮೂಡಿಬರುವ ಅಕ್ಷರದ ಅನುಭೂತಿ ವಿಶಿಷ್ಟವಾಗಿ ಮಧುರತೆಯನ್ನು ಉಂಟುಮಾಡುತ್ತದೆ ಎಂದು ಅವರು ತಿಳಿಸಿದರು. ಕವಿ, ಕಥೆಗಾರನಾದವ ಎಂದಿಗೂ ಕೆಡುಕನ್ನು ಬಯಸಲಾರ. ತನ್ನರಿವಿನ ಸತ್ಯಗಳ ಮೂಲಕ ಒಟ್ಟು ವ್ಯವಸ್ಥೆಯನ್ನು ಸೋಸಿ ಮಥಿಸಿದ ರೂಪಕವಾಗಿ ಸಾಹಿತ್ಯ ಹೊಸಹುಟ್ಟು ಪಡೆಯುತ್ತದೆ. ನಿನ್ನೆಯ ಇತಿಹಾಸ, ಇಂದಿನ ವರ್ತಮಾನ ಮತ್ತು ನಾಳೆಯ ಭವಿಷ್ಯದ ತ್ರಿಕಾಲ ಜ್ಞಾನಿಯಾದವ ಮಾತ್ರ ಉತ್ತಮ ಕಥೆಗಾರನಾಗಬಲ್ಲ. ನಿತ್ಯ ಘಟನೆಗಳು ನೀಡುವ ಅನುಭೂತಿಗಳನ್ನು ಪೋಣಿಸಿ ನೀಡುವ ಚಮತ್ಕಾರಿಕೆ ಕಥೆಗಾರನಿಗೆ ಅನುಭವಗಳಿಂದ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದರು. ವೇದಿಕೆಯ ನಿರಂತರ ಸಾಹಿತ್ಯ ಚಟುವಟಿಕೆ ಇಲ್ಲಿಯ ಭಾಷಾ ಬೆಳವಣಿಗೆ, ಅವಕಾಶಗಳ ಒದಗಿಸುವಿಕೆಗೆ ಪ್ರೇರಣೆಯಾಗಿ ಎಂದು ಶ್ಲಾಘಿಸಿದರು.
ಈ ಸಂದರ್ಭ ನಡೆದ ಕಥಾಗೋಷ್ಠಿಯಲ್ಲಿ ಲತಾ ಬನಾರಿ, ಪ್ರಭಾವತಿ ಕೆದಿಲಾಯ, ನರಸಿಂಹ ಭಟ್ ಏತಡ್ಕ, ಪರಮೇಶ್ವರ ನಾಯ್ಕ್ ಬಾಳೆಗುಳಿ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ರಾಮ ಏದಾರ್, ಹರೀಶ್ ಪೆರ್ಲ, ಸುಶ್ಮಿತಾ ಬಾಳೆಗುಳಿ, ನಾರಾಯಣ ನಾಯ್ಕ, ನವನೀತ್ ಬದಿಯಡ್ಕ, ಸ್ನೇಹಲತಾ ದಿವಾಕರ್, ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ವೆಂಕಟ್ ಭಟ್ ಎಡನೀರು, ನಿರ್ಮಲಾ ಸೇಸಪ್ಪ ಖಂಡಿಗೆ ಮೊದಲಾದವರು ಸ್ವರಚಿತ ಕಥಾ ವಾಚನಗೈದರು. ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ನಿರ್ದೇಶಕರಾದ ರಾಧಾಕೃಷ್ಣ ಉಳಿಯತ್ತಡ್ಕ, ಸಹ ಸಂಚಾಲಕಿ ಚೇತನಾ ಕುಂಬಳೆ, ರಿತೇಶ್ ಕಿರಣ್ ಕಾಟುಕುಕ್ಕೆ, ಬಾಲಕೃಷ್ಣ ಬೇರಿಕೆ, ಜಯ ಮಣಿಯಂಪಾರೆ, ವೀ.ಜಿ.ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.ಸಂಯೋಜಕ ಪುರುಷೋತ್ತಮ ಭಟ್.ಕೆ. ನಿರೂಪಿಸಿದರು.

