ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ, ಎನ್ ಆರ್ ಸಿ ವಿರುದ್ಧ ಅರೋಗ್ಯ ಹಾಗು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್ ಮಂಡಿಸಿದ ಠರಾವನ್ನು ಅನುಮೋದಿಸಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಪ್ರತಿಭಟನೆ ಸಾರಿರುವರು.
ಬಿಜೆಪಿ ಸದಸ್ಯರಾದ ಕೆ.ಮುರಳೀಧರ ಯಾದವ್, ಕೆ.ರಮೇಶ್ ಭಟ್, ಕೆ.ಸುಧಾಕರ ಕಾಮತ್, ಸುಜಿತ್ ರೈ, ಹರೀಶ್ ಗಟ್ಟಿ, ಪುಷ್ಪಲತಾ ಹಾಗು ಪ್ರೇಮಲತಾ ಅವರು ತೀಕ್ಷ್ಣವಾಗಿ ಪ್ರತಿಭಟಿಸಿದರು. ಠರಾವಿನ ವಿರುದ್ಧ ಮಾತನಾಡಿದ ಕೆ.ಮುರಳೀಧರ ಯಾದವ್ ಅವರು ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆಯ ಕುರಿತು ಸಮಗ್ರ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು. ಸಂವಿಧಾನದ ವಿರುದ್ಧ ಹಾಗು ಪಂಚಾಯತಿ ರಾಜ್ ಆಕ್ಟ್ ನ್ನು ದುರುಪಯೋಗ ಪಡಿಸಿ ಠರಾವು ಮಂಡನೆಗೆ ಬೆಂಬಲ ನೀಡಿದ 16 ಮಂದಿ ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಲಾಗಿದೆ.


