ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ವತಿಯಿಂದ ಶಿಕ್ಷಣ ಇಲಾಖೆಯ ಪರೀಕ್ಷಾ ತರಬೇತಿ ಶಿಬಿರವು ಐಲ ಶ್ರೀ ಶಾರದಾ ಬೋವಿ ಶಾಲೆಯಲ್ಲಿ ನಡೆಯುತ್ತಿದೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅಧ್ಯಾಪಕರು ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಲು ಅಗತ್ಯವಿರುವ ಶಿಕ್ಷಣ ಇಲಾಖೆಯ ಪರೀಕ್ಷೆಯ ತೇರ್ಗಡೆಗೆ ಅನುಕೂಲವಾಗುವಂತೆ ಈ ಶಿಬಿರ ನಡೆಯುತ್ತಿದ್ದು ಅನೇಕ ಅಧ್ಯಾಪಕರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಪಿ. ಬಿ ಶ್ರೀನಿವಾಸ್ ರಾವ್ ಹಾಗೂ ಸುಖೇಶ್ ಎ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ದುರ್ಘಟನೆಗೆ ಒಳಗಾಗಿ ಸಾವಿಗೀಡಾದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸದಸ್ಯೆ, ಮೀಯಪದವು ವಿದ್ಯಾವರ್ಧಕ ಪ್ರೌಢಶಾಲೆಯ ಅಧ್ಯಾಪಕಿ ರೂಪಶ್ರೀ ಬಿ. ಕೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾವಿನ ಸತ್ಯಾಸತ್ಯತೆ ಹೊರಬರುವಂತಾಗಲು ಶೀಘ್ರ ತನಿಖೆ ನಡೆಸಿ ಅಧ್ಯಾಪಕಿಯ ಸಾವಿಗೆ ನ್ಯಾಯ ಒದಗುವಂತಾಗಬೇಕು ಎಂದು ಸಂಘಟನೆಯು ಆಗ್ರಹಿಸಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅಧ್ಯಾಪಕಿಯ ಅಗಲುವಿಕೆಯು ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂಘಟನೆ ಸಂತಾಪ ಸೂಚಿಸಿದೆ.


