ಮಂಜೇಶ್ವರ: ಸಂಗೀತವೆಂಬುದು ಶೂನ್ಯದಿಂದ ಶೂನ್ಯವಲ್ಲ. ಅದು ಪೂರ್ಣತ್ವದ ಸಂಕೇತ. ಸಂಗೀತ ಆತ್ಮ ಸುಖವನ್ನು ಕೊಡುವಂತದದ್ದು. ಈ ಮೂಲಕ ಭಾರತೀಯ ಸಂಸ್ಕøತಿ ಚಿರಂತನವಾಗಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಅಪರಾಹ್ನ ವಾಮಂಜೂರು ಚೆಕ್‍ಪೋಸ್ಟ್‍ನಲ್ಲಿರುವ ಶ್ರೀ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದ 'ರಾಗ ಸುಧಾ' ಗೋವಿಂದನಗರ ಅಂಗಡಿಪದವು ಹೊಸಂಗಡಿ ಇದರ 3ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ 'ಸಂಗೀತಾರ್ಪಣಂ' ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಂಗೀತ ಮನುಷ್ಯನನ್ನು ಮಾತ್ರ ಮುದಗೊಳಿಸದೆ ಗೋವು, ಸಸ್ಯ ಇವುಗಳನ್ನು ಮುದಗೊಳಿಸುತ್ತದೆ. ಹಾಗೂ ಸಂಗೀತ ಮನುಷ್ಯನಲ್ಲಿ ಸಂಸ್ಕಾರ ಬೆಳೆಸುವ ಸಂಪನ್ನತೆ ಹೊಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಮಚಂದ್ರಾಪುರ ಮಠ ಮಂಗಳೂರು ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶಿಪಟ್ಣ ವಹಿಸಿದ್ದರು. ಸಂಗೀತ ಗುರುಗಳಾದ ಉಂಡೆಮನೆ ವಿದ್ವಾನ್ ನಾರಾಯಣ ಶರ್ಮ ಶುಭಾಶಂಸನೆಗೈದರು. ರಾಗ ಸುಧಾ ಅಂಗಡಿಪದವಿನ ಸಂಗೀತ ಗುರುಗಳಾದ ಶಿಲ್ಪಾ ವಿಶ್ವನಾಥ ಭಟ್ ಉಪಸ್ಥಿತರಿದ್ದರು. ಈ ವೇಳೆ ಮಂಗಳೂರು ನಾದ ಸರಸ್ವತಿ ಸಂಗೀತ ವಿದ್ಯಾಲಯದ ಸಂಗೀತ ಗುರುಗಳಾದ ವಿದುಷಿಃ ಸತ್ಯವತಿ ಮೂಡಂಬಡಿತ್ತಾಯ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಮೀಯಪದವು ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ ಮಹಾಬಲೇಶ್ವರ ಭಟ್ ಸ್ವಾಗತಿಸಿ, ಅಧ್ಯಾಪಕ ಪ್ರಕಾಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಟಿ.ಡಿ. ಸದಾಶಿವರಾವ್ ವಂದಿಸಿದರು. ಬೆಳಗ್ಗೆ ರಾಗಸುಧಾದ ವಿದ್ಯಾರ್ಥಿಗಳಿಂದ 'ಸಂಗೀತಾರ್ಪಣಂ' ಕಾರ್ಯಕ್ರಮ ನಡೆಯಿತು. ಸಂಗೀತ ಗುರುಗಳಾದ ಶಿಲ್ಪಾ ವಿಶ್ವನಾಥ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮೃದಂಗದಲ್ಲಿ ಮುರಲಿ ಕೃಷ್ಣ ಕುಕ್ಕಿಲ ಮತ್ತು ಶಿಷ್ಯಂದಿರು ಹಾಗೂ ವಯಲಿನ್‍ನಲ್ಲಿ ಜ್ಯೋತಿ ಲಕ್ಷ್ಮೀ ಅಮೈ ಮತ್ತು ಶಿಷ್ಯಂದಿರು ಕಾರ್ಯಕ್ರಮ ನಡೆಸಿ ಕೊಟ್ಟರು. ಸಂಜೆ ವಿದುಷಿಃ ಆರ್ಥಾ ಶಶಾಂಕ್‍ರವರಿಂದ ಭರತನಾಟ್ಯ ಕಾರ್ಯಕ್ರಮ ನೃತ್ಯಾರ್ಪಣಂ ನಡೆಯಿತು. ನಟುವಾಂಗದಲ್ಲಿ ವಿದುಷಿ ಅಯನಾ ಪೆರ್ಲ, ಹಾಡುಗಾರಿಕೆಯಲ್ಲಿ ಶಿಲ್ಪಾ ವಿಶ್ವನಾಥ ಭಟ್, ಮೃದಂಗದಲ್ಲಿ ಭಾರ್ಗವ ಕುಂಜತ್ತಾಯ ಮಲ್ಲರ, ಕೊಳಲಿನಲ್ಲಿ ಅಭಿಷೇಕ ಎಮ್.ಎಸ್ ಸಹಕರಿಸಿದರು.


