ಕಾಸರಗೋಡು: ಕಪೋಲಕಲ್ಪಿತ, ಸುಳ್ಳು ದೂರಿನೊಂದಿಗೆ ರಾಜ್ಯ ಮಹಿಳಾ ಆಯೋಗಕ್ಕೆ ಅಹವಾಲು ಸಲ್ಲಿಸಬಾರದು ಎಂದು ಆಯೋಗ ಸದಸ್ಯರಾದ ಷಾಹಿದಾ ಕಮಾಲ್ ಮತ್ತು ಇ.ಎಂ.ರಾಧಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಗಣದಲ್ಲಿ ಶುಕ್ರವಾರ ನಡೆದ ಆಯೋಗದ ಅದಾಲತ್ ವೇಳೆ ಅವರು ಮಾತನಾಡಿದರು.
ತಂಡವೊಂದ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದರು. ತನಿಖೆಯ ಅಂಗವಾಗಿ ಸಿ.ಸಿ.ಟಿ.ವಿ. ದೃಶ್ಯಗಳ ಸಹಿತ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ವೇಳೆ ಇದು ಸುಳ್ಳು ದೂರು ಎಂದು ಖಚಿತಗೊಂಡಿತ್ತು. ಬೇರೊಂದು ವಿಚಾರದಲ್ಲಿರುವ ದ್ವೇಷವನ್ನು ಹಲ್ಲೆ ನಡೆಸಿದ ಆರೋಪದ ಮೂಲಕ ತೀರಿಸುವ ಯತ್ನವನ್ನು ದೂರುದಾತೆ ನಡೆಸಿದ್ದರು ಎಂದು ಆಯೋಗ ಸದಸ್ಯೆಯರು ಆರೋಪಿಸಿದರು. ಇಂಥಾ ದೂರನ್ನು ಆಯೋಗಕ್ಕೆ ಸಲ್ಲಿಸಕೂಡದು ಎಂದು ಅವರು ದೂರುದಾತೆಗೆ ಎಚ್ಚರಿಕೆ ನೀಡಿದರು. ಮಹಿಳೆಯರ ಮೇಲೆ ನಡೆಯುವ ನಿಜವಾದ ದೌರ್ಜನ್ಯಗಳ ಸಂಬಂಧ ದೂರುಗಳಿಗೆ ಆಯೋಗ ಆದ್ಯತೆ ನೀಡುತ್ತಿದೆ. ಇದೇ ವೇಳೆ ಎಲ್ಲ ಸಮಸ್ಯೆಗಳಿಗೂ ಆಯೋಗ ಪರಿಹಾರ ಒದಗಿಸಲಿ ಎಂದು ಆಗ್ರಹಿಸುವುದು ಸರಿಯಲ್ಲ ಎಂದವರು ತಿಳಿಸಿದರು.
ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಮಹಿಳಾ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ತಡೆಮಾಡಿದ ಆರೋಪದಲ್ಲಿ ಜನಪ್ರತಿಯೊಬ್ಬರ ವಿರುದ್ಧ ಸಲ್ಲಿಸಲದ ದೂರನ್ನು ಪರಿಶೀಲಿಸಿದ ಮಹಿಳಾ ಆಯೋಗ ಪ್ರತಿಕಕ್ಷಿ ಎಷ್ಟೇ ಪ್ರಬಲ ವ್ಯಕ್ತಿಯಾಗಿದ್ದರೂ, ಆರೋಪ ಸಾಬೀತಾದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಹಿಳಾ ಆಯೋಗ ತಿಳಿಸಿದೆ. ಈ ಸಂಬಂಧ ಈಗಾಗಲೇ ಪೆÇಲೀಸರಿಗೂ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಪೆÇಲೀಸರ ವರದಿಯನ್ನೂ ಮಹಿಳಾ ಆಯೋಗ ಬಯಸಿದೆ.
ಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ತಾತ್ಕಾಲಿಕ ನೇಮಕಾತಿಯ ನರ್ಸ್ ಒಬ್ಬರು ಮತ್ತೊಬ್ಬ ಜನಪ್ರತಿನಿಧಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಮಧ್ಯಾಹ್ನ ನಂತರ ರಜೆ ಪಡೆದ ತನ್ನನ್ನು ಆರೋಪಿ ಅಸಭ್ಯವಾಗಿ ಬೆದರಿಕೆ ಹಾಕಿದ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮುಂದಿನ ಅದಾಲತ್ ನಲ್ಲಿ ಆರೋಪಿಯನ್ನು ಕರೆಸಿ ವಿಚಾರಣೆ ನಡೆಸುವುದಾಗಿ ಆಯೋಗ ತಿಳಿಸಿದೆ.
ಮಂಜೇಶ್ವರದ ಶಿಕ್ಷಕಿಯೊಬ್ಬರ ನಿಗೂಢ ಮರಣ ಪ್ರಕರಣಕ್ಕೆ ಸಂಬಂಧಿಸಿ ಆಯೋಗ ಸಕ್ರಿಯವಾಗಿ ತನಿಖೆ ನಡೆಸಲಿದೆ. ಶಿಕ್ಷಕಿಯಕುಟುಂಬಕ್ಕೆ ನ್ಯಾಯೊದಗಿಸುವ ನಿಟ್ಟಿನಲ್ಲಿ ಯತ್ನ ನಡೆಸುವುದಾಗಿ ತಿಳಿಸಲಾಗಿದೆ.
ಫೆ.17ರಂದು ಮುಂದಿನ ಅದಾಲತ್:
ರಾಜ್ಯ ಮಹಿಳಾ ಆಯೋಗದ ಮುಂದಿನ ಅದಾಲತ್ ಫೆ.17ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಅದಾಲತ್ ನಲ್ಲೇ ದೂರುಗಳನ್ನೂ ಸಲ್ಲಿಸಲು ಅವಕಾಶಗಳಿವೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಪ್ಯಾನೆಲ್ ನ್ಯಾಯವಾದಿ ಎ.ಪಿ.ಉಷಾ, ಮಹಿಳಾ ಘಟಕ ಎಸ್.ಐ. ಟಿ.ಕೆ.ಚಂದ್ರಿಕಾ, ಹಿರಿಯ ಪೆÇಲೀಸ್ ಅಧಿಕಾರಿ ಎಂ.ಅನಿತಾ, ಪಿ.ಕಾರ್ತಿಕಾ, ನಾಗರೀಕ ಪೆÇಲೀಸ್ ಅಧಿಕಾರಿ ಕೆ.ದಿವ್ಯಾ, ಕುಟುಂಬ ಸಲಹೆಗಾರ್ತಿ ಎಸ್.ರಮ್ಯಾಮೋಳ್ ಉಪಸ್ಥಿತರಿದ್ದರು.
ಅದಾಲತ್ ನಲ್ಲಿ 24 ದೂರುಗಳ ಪರಿಶೀಲನೆ!:
ರಾಜ್ಯ ಮಹಿಳಾ ಆಯೋಗ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅದಾಲತ್ ನಲ್ಲಿ 24 ದೂರುಗಳನ್ನು ಪರಿಶೀಲಿಸಲಾಗಿತ್ತು. ದೂರುಗಳಲ್ಲಿ ಬಹುತೇಕ ಕೌಟುಂಬಿಕ ಸಮಸ್ಯೆಗಳಿಗೆ ಮತ್ತು ದಾರಿ ವಿವಾದಗಳಿಗೆ ಸಂಬಂಧಿಸಿದ್ದುವು. ಇದರಲ್ಲಿ ಮೂರು ದೂರುಗಳಿಗೆ ತೀರ್ಪು ಒದಗಿಸಲಾಗಿದೆ. ಮೂರು ದೂರುಗಳಿಗೆ ಸಂಬಂಧಪಟ್ಟ ಇಲಾಖೆಗಳ ಮಾಹಿತಿ ಕೋರಲಾಗಿದೆ. ಉಳಿದ 18 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು.


