ಬದಿಯಡ್ಕ: ಇನ್ನೋವೇಶನ್ ವಿಭಾಗದಲ್ಲಿ ಬೆಳ್ತಂಗಡಿಯ ಸುನೀತಾ ಪ್ರಭು ಮೂರ್ಜೆ ಹಾಗೂ ಕಲೆ ಮತ್ತು ಸಂಸ್ಕøತಿ ವಿಭಾಗದಲ್ಲಿ ಕಾಸರಗೋಡು ಮೂಲದ ಬೆಂಗಳೂರಿನ ಪ್ರಗುನ್ ಪುದುಕೋಳಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಶಕ್ತಿ ಪುರಸ್ಕಾರ ಪಡೆದಿದ್ದು, ಎಳೆಯ ವಯಸ್ಸಿನಲ್ಲೇ ಅಮೋಘ ಸಾಧನೆ ಮಾಡಿರುವ ಯುವ ಪ್ರತಿಭೆಗಳನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಬಾಲ ಪುರಸ್ಕಾರಕ್ಕೆ ಪಾತ್ರರಾದ 49 ಮಂದಿ ಪ್ರಶಸ್ತಿ ಸ್ವೀಕರಿಸಿದ್ದು, ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮತಿ ಇರಾನಿಯವರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಶುಕ್ರವಾರ ಸ್ವತಃ ಪ್ರಧಾನಿಯೊಂದಿಗೆ ಮಾತುಕತೆ ನಡೆಸುವ ಅಪೂರ್ವ ಅವಕಾಶ ಯುವ ಸಾಧಕರಿಗೆ ಲಭಿಸಿದೆ.
ಮಾತುಕತೆ ಬಳಿಕ ಪ್ರಧಾನಿ ಮೋದಿಯವರು ಸುನೀತಾ ಪ್ರಭು ಹಾಗೂ ಪ್ರಗುನ್ ಸಾಧನೆಯನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಡೆಂಘೆ ಮತ್ತಿತರ ರೋಗಗಳನ್ನು ಹರಡುವ ಸೊಳ್ಳೆಗಳಿಂದ ಪಾರಾಗಲು ಸೊಳ್ಳೆ ನಿರೋಧಕ ಬಟ್ಟೆ ಅನ್ವೇಷಿಸಿರುವ ಸುನೀತಾ, ಅಮೆರಿಕದಲ್ಲಿ ನಡೆದ ಫೀನಿಕ್ಸ್-80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕ್ರೀಡಾ ವಿಭಾಗದಲ್ಲಿ ಬೆಂಗಳೂರಿನ ಯಶ್ ಆರಾಧ್ಯ ಈ ಪುರಸ್ಕಾರ ಪಡೆದ ರಾಜ್ಯದ ಇನ್ನೊಬ್ಬರಾಗಿದ್ದಾರೆ.
ಪ್ರಗುನ್ ವಿಜ್ಞಾನ ಲೇಖಕ:
ಬೆಂಗಳೂರಿನ ತಿಪ್ಪಸಂದ್ರದ ಶಿಶುಗೃಹ ಮಾಂಟೆಸ್ಸರಿ ಮತ್ತು ಹೈಸ್ಕೂಲ್‍ನ 8ನೇ ತರಗತಿ ವಿದ್ಯಾರ್ಥಿ ಪ್ರಗುನ್ ಪುದುಕೋಳಿ ಮೂಲತಃ ಕಾಸರಗೋಡಿನ ಪುದುಕೋಳಿ ನಿವಾಸಿ. ಮೂಲತಃ ನೀರ್ಚಾಲು ಸಮೀಪದ ಪುದುಕೋಳಿಯ, ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಉದಯ ಶಂಕರ ಪಿ.ಎಸ್-ವಿದ್ಯಾ ಕೋಡಿಮೂಲೆ ದಂಪತಿ ಪುತ್ರ.
ಕಲೆ ಮತ್ತು ಸಂಸ್ಕøತಿ ಕ್ಷೇತ್ರದ ಅಸಾಧಾರಣ ಸಾಧನೆಗಾಗಿ ಪ್ರಗುನ್ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಬಾಲಶಕ್ತಿ ಪುರಸ್ಕಾರ ಸ್ವೀಕರಿಸಿದ್ದಾರೆ. ವಿಜ್ಞಾನ ಮತ್ತು ಗಣಿತ ಪ್ರಗುನ್ ಆಸಕ್ತಿಯ ಕ್ಷೇತ್ರ. ವಿಜ್ಞಾನ ಲೇಖನಗಳನ್ನು ಬರೆಯುವಲ್ಲಿ ಹೆಚ್ಚಿನ ಆಸ್ಥೆ ಹೊಂದಿರುವ ಪ್ರಗುನ್ ಪುದುಕೋಳಿ ಅವರ 40ಕ್ಕೂ ಅಧಿಕ ಲೇಖನಗಳು ಹಲವು ದಿನಪತ್ರಿಕೆ ಮತ್ತು ಮ್ಯಾಗಜೀನ್‍ಗಳಲ್ಲಿ 2012ರಿಂದ 2019ರ ನಡುವೆ ಪ್ರಕಟಗೊಂಡಿವೆ. ಇವರ ಹೆಚ್ಚಿನ ಲೇಖನಗಳು ಪ್ರಕೃತಿ- ಪರಿಸರ ಕೇಂದ್ರಿತ. 2019ರಲ್ಲಿ ರಾಜ್‍ಕೋಟ್‍ನಲ್ಲಿ ನಡೆದ ಐಎನ್‍ಎಸ್‍ಇಎಪ್ ರಾಷ್ಟ್ರೀಯ ಟೆಕ್ ಮೇಳದಲ್ಲಿ ಭಾಗವಹಿಸಿ ಪದಕ ಗೆದ್ದಿದ್ದರು. ನಾಸಾ ಏರ್ಪಡಿಸಿದ್ದ ಸ್ಪರ್ಧೆಯೊಂದರಲ್ಲೂ ಮೆಚ್ಚುಗೆ ಗಳಿಸಿದ್ದರು. ‘ವಿಜ್ಞಾನದೆಡೆಗಿನ ಅತೀವ ಆಸಕ್ತಿಯಿಂದ ಎಳೆಯ ವಯಸ್ಸಿನಲ್ಲೇ ಅಸಾಧಾರಣ ಬರಹಗಾರರಾಗಿ ರೂಪುಗೊಂಡಿರುವ ಪ್ರಗುನ್ ಅವರಿಂದ ಮತ್ತಷ್ಟು ಓದಲು ಕಾತರರಾಗಿದ್ದೇವೆ, ಅವರಿಗೆ ಅಭಿನಂದನೆ’ ಎಂದು ಪ್ರಧಾನಿ ಮೋದಿ ಟ್ವಿಟರ್‍ನಲ್ಲಿ ಶಹಬ್ಬಾಸ್‍ಗಿರಿ ನೀಡಿದ್ದಾರೆ.
ಏನೆಂದರು ಮೋದಿ:
ಭಾರತದಲ್ಲಿ ಕಳವಳಕ್ಕೆ ಕಾರಣವಾಗಿರುವ ಕೀಟಜನ್ಯ ಕಾಯಿಲೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುನೀತಾ ಪ್ರಭು ಅವರು ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಬಾಲಶಕ್ತಿ ಪುರಸ್ಕಾರ ಪಡೆದಿರುವ ಅವರ ಮುಂದಿನ ದಿನಗಳು ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ.
ನರೇಂದ್ರ ಮೋದಿ.
ಪ್ರಧಾನಿ
Suneetha Murje Prabhu is making a valuable contribution as far as lowering vector borne diseases in India is concerned.
I congratulate her on winning the Bal Shakti Puraskar 2020 and wish her the very best for her future endeavours.
I congratulate her on winning the Bal Shakti Puraskar 2020 and wish her the very best for her future endeavours.




