ಉಪ್ಪಳ: ಕೇರಳದ ವ್ಯಾಪಾರಿ ಏಕೋಪನ ಸಂಸ್ಥೆ ಕೇವಲ ಒಂದು ನಾಮಕಾವಸ್ಥೆ ಸಂಸ್ಥೆಯಾಗಿ ಮಾರ್ಪಾಡಾಗಿದೆ. ವ್ಯಾಪಾರಿಗಳ ಹಿತ ಕಾಪಾಡಬೇಕಾದ ಸಂಸ್ಥೆ ಇಂದು ಕೆಲವು ಕಡೆ ಮತೀಯ ಮೂಲಭೂತ ವಾದಿಗಳ ಹಿಡಿತದಲ್ಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಮುಖ್ಯವಾಗಿ ಉಪ್ಪಳ, ಹೊಸಂಗಡಿ, ಬದಿಯಡ್ಕ, ಕುಂಬಳೆಗಳಲ್ಲಿ ಅನಗತ್ಯವಾಗಿ ವ್ಯಾಪಾರಿಗಳ ಅಂಗಡಿಗಳನ್ನು ಬೆದರಿಸಿ ಬಂದ್ ಮಾಡಿಸುವ ಮತೀಯ ಮೂಲಭೂತವಾದಿಗಳ ವಿರುದ್ಧ ಕೇಸು ದಾಖಲಿಸಲು ಅಥವಾ ಅಂತವರ ವಿರುದ್ಧ ಬಹಿರಂಗ ಹೇಳಿಕೆ ನೀಡಲು ವ್ಯಾಪಾರಿ ಏಕೋಪನ ಸಂಘಟನೆಯ ಮುಖ್ಯಸ್ಥರುಗಳಿಗೆ ಧೈರ್ಯವಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಒತ್ತಾಯ ಪೂರ್ವಕವಾಗಿ, ಅನಗತ್ಯವಾಗಿ ಅಂಗಡಿಗಳನ್ನು ಬಂದ್ ಮಾಡುವವರ ವಿರುದ್ಧ, ಕೆಲವು ಹಿಂದೂ ನಾಮಧಾರಿ ಅಂಗಡಿಗಳ ಮಾಲಕರ ಹೆಸರು ಹೇಳಿ ಅಪಪ್ರಚಾರ ಮಾಡುವವರ ವಿರುದ್ಧ, ವ್ಯಾಪಾರದಲ್ಲಿ ಧರ್ಮದ ಹೆಸರಲ್ಲಿ ಹೇಳಿಕೆ ನೀಡುವವರ ವಿರುದ್ಧ, ಅಂಗಡಿಗಳನ್ನು ನಾಶ ಮಾಡುವ ಕಿಡಿಗೇಡಿಗಳ ವಿರುದ್ಧ ಮಾತೆತ್ತದ ವ್ಯಾಪಾರಿ ಸಂಘಟನೆ ಇದ್ದೇನು ಫಲ ಎಂದು ಬಿಜೆಪಿ ಪ್ರಶ್ನಿಸಿದೆ?
ಬಿಜೆಪಿಯ ಕಾರ್ಯಕ್ರಮವಿದ್ದ ದಿನ ಉಪ್ಪಳ ಪೇಟೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದವರ ವಿರುದ್ಧ ಮಾತನಾಡುವ ಧೈರ್ಯ ವ್ಯಾಪಾರಿ ಸಂಘಟನೆಗೆ ಇದೆಯೇ ಎಂದು ಬಿಜೆಪಿ ಕೇಳಿದೆ. ವ್ಯಾಪಾರಿಗಳ ಹಿತ ಕಾಪಾಡಬೇಕಾದ, ರಕ್ಷಣೆ ನೀಡಬೇಕಾದ ವ್ಯಾಪಾರಿ ಸಂಘಟನೆ ಇಂದು ಕೆಲವು ಕಡೆ ಮತೀಯ ನೇತಾರರ ಕೈಯಲ್ಲಿ ಹಾಗೂ ಕೆಲವು ಕಡೆ ಎಡರಂಗ, ಮುಸ್ಲಿಂ ಲೀಗ್ ಪಕ್ಷಗಳ ಮುಖಂಡರ ಹಿಡಿತದಲ್ಲಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಶಬರಿಮಲೆ ಹೋರಾಟ ಸಂದರ್ಭದಲ್ಲಿ ಹಿಂದುಗಳ ವಿರುದ್ಧ ಮಾತನಾಡಿದ ವ್ಯಾಪರಿ ಸಂಘಟನೆಯ ನೇತಾರರು ಈಗ ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆಗೆ ಬೆದರಿ ಮಾತೆ ಅಡುತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. ಕೇರಳ ವ್ಯಾಪಾರಿ ಏಕೋಪನ ಸಮಿತಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಸಮನಾಂತರ ಸಂಘಟನೆಗೆ ಮುಂದಡಿ ಇರಿವುದುದೆಂದು ಬಿಜೆಪಿ ತಿಳಿಸಿದೆ.

