ಕಾಸರಗೋಡು: ಗಾಯತ್ರಿ ಮಂತ್ರದ ನಿತ್ಯ ಉಪಾಸನೆಯಿಂದ ಸತ್ಕಾರ್ಯ ಮಾಡುವ ಪ್ರೇರಣೆ ದೊರೆಯುತ್ತಿದ್ದು ಇದು ಭಗವಂತನ ಅನುಗ್ರಹ ಪಡೆಯಲು ಸುಲಭ ದಾರಿ. ಸತ್ಕಾರ್ಯ ಮಾಡುತ್ತಿದ್ದರೆ ಮನಸ್ಸು ನಿರ್ಮಲವಾಗುವುದು. ನಿರ್ಮಲ ಮನಸ್ಸಿನ ದೇವತಾರಾಧನೆ ಅಭಿವೃದ್ಧಿ ಹೊಂದಲು ದಾರಿ ಮಾಡಿಕೊಡುತ್ತದೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್ ಶ್ರೀ ವಿದ್ಯಾರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಅನುಗ್ರಹ ಸಂದೇಶ ನೀಡಿದರು.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನಕ್ಕೆ ತಮ್ಮ ಪಟ್ಟ ಶಿಷ್ಯ ಶ್ರೀ ಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಜತೆಗೂಡಿ ಆಗಮಿಸಿದ ಶ್ರೀಗಳು ಸಭಾ ಕಾರ್ಯಕ್ರಮದಲ್ಲಿ ನೆರೆದ ಸಮಾಜದ ಭಜಕ ವೃಂದವನ್ನು ಆಶೀರ್ವದಿಸಿದರು.
ಸತ್ಕಾರ್ಯ ಸುಸಂಸ್ಕøತ ಬದುಕು ಸಾಗಿಸಲು ಕಾರಣವಾಗುತ್ತಿದ್ದು ದೇವತಾರಾಧನೆ ಮಾಡಲು ಪ್ರೇರಣೆ ನೀಡುತ್ತದೆ. ಭಗವಂತನ ಆರಾಧನೆ ಶ್ರೇಷ್ಠ ವಾಗಿದ್ದು ಇದನ್ನು ಅನುಷ್ಠಾನ ಮಾಡುವ ಮಾನವನು ಎಂದೂ ವಿಫಲ ಹೊಂದಲು ಸಾಧ್ಯವಿಲ್ಲ. ಸಫಲತೆಯ ಬದುಕು ಮಾನವ ಜನ್ಮದ ಪರಮ ಗುರಿ ಎಂದು ಶ್ರೀಗಳು ಅನುಗ್ರಹಿಸಿದರು.
ಪಟ್ಟ ಶಿಷ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಈ ವೇಳೆ ವಿರಾಜ ಮಾನರಾಗಿದ್ದರು. ದೇಗುಲದ ಆಡಳಿತ ಮೊಕ್ತೇಸರ ಕೆ.ವಿದ್ಯಾಕರ ಮಲ್ಯ ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿ ಪೂಜ್ಯ ಸ್ವಾಮೀಜಿಯವರಿಗೆ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ 250 ವರ್ಷಗಳ ಭವ್ಯ ಇತಿಹಾಸದ ಮಾಹಿತಿ ನೀಡಿ ಈ ದೇಗುಲದಲ್ಲಿ 1960 ರಲ್ಲಿ ನಮ್ಮ ಸಮಾಜದ ಮೂವರು ಮಠಾಧೀಶರು ಜೊತೆಯಲ್ಲಿ ಇಲ್ಲಿಗೆ ಚಿತ್ತೈಸಿ ಮೊಕ್ಕಾಂ ಮಾಡಿ ಅನುಗ್ರಹಿಸಿದ ಚರಿತ್ರೆ ನೆನಪಿಸಿದರು. ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥರು, ಪರ್ತಗಾಳಿ ಮಠಾಧೀಶ ಶ್ರೀ ದ್ವಾರಕಾನಾಥ್ ಸ್ವಾಮೀಜಿ ಹಾಗೂ ಕೈವಲ್ಯ ಮಠಾಧೀಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಂದು ಇಲ್ಲಿ ವಿರಾಜಮಾನರಾಗಿ ಸಮಾಜವನ್ನು ಆಶೀರ್ವದಿಸಿದ್ದರು.
ಸಮಾಜದ ಹತ್ತು ಸಮಸ್ತರ ಪರವಾಗಿ ಉಭಯ ಶ್ರೀಗಳಿಗೆ ಆಡಳಿತ ಮೊಕ್ತೇಸರ ಕೆ.ವಿದ್ಯಾಕರ ಮಲ್ಯ, ಮೊಕ್ತೇಸರರಾದ ಎಂ.ಅಶೋಕ ಶೆಣೈ ಹಾಗೂ ಸಿ.ರವಿಶಂಕರ ಕಾಮತ್ ಅವರು ಪಾದಪೂಜೆ ಮಾಡಿದರು.
ವೈದಿಕರು ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಲಾರ್ಯಕ್ರಮದಲ್ಲಿ ಎ.ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಕುಮಟಾ ಶ್ರೀ ವೆಂಕಟರಮಣ ದೇವಸ್ಥಾನದಿಂದ ಇಲ್ಲಿಗೆ ಆಗಮಿಸಿದ ಶ್ರೀ ಗಳವರಿಗೆ ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿ ಕೊಳ್ಳಲಾಯಿತು. ದೇವರ ದರ್ಶನ ಪಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ವರದರಾಜ ವೆಂಕಟರಮಣ ದೇವರಿಗೆ ಪೂಜೆ ನಡೆದು ದಶಮಿ ದಿಂಡಿ ಉತ್ಸವ ನಡೆದು ಬಳಿಕ ಸಮಾಜ ಬಾಂಧವರಿಗೆ ಅನ್ನಸಂತರ್ಪಣೆ ನಡೆಯಿತು.



