HEALTH TIPS

ಅಮೆರಿಕ: ಡೊನಾಲ್ಡ್ ಟ್ರಂಪ್ ಕೊರೋನಾ ಸಂಕಷ್ಟವನ್ನು ಸರಿಯಾಗಿ ನಿರ್ವಹಿಸಿಲ್ಲ: ಬರಾಕ್ ಒಬಾಮಾ ಆಡಿಯೋ ಲೀಕ್!


      ವಾಷಿಂಗ್ಟನ್: ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸಂಕಷ್ಟವನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
      ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆಡಳಿತ ಅವಧಿಯಲ್ಲಿ ಸಹವರ್ತಿಗಳಾಗಿದ್ದವರೊಂದಿಗೆ ಕಾನ್ಫರೆನ್ಸ್ ಕಾಲ್‍ನಲ್ಲಿ ಆಡಿದ್ದ ಅವರ ಮಾತುಗಳು ಸೋರಿಕೆಯಾಗಿದ್ದು, ಇದೀಗ ಅಮೆರಿಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 'ಕೊರೊನಾ ವೈರಸ್ ಪಿಡುಗನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ವಿಶ್ವದ ಅತ್ಯುತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಗಳೂ ಸಹ ಪಿಡುಗು ನಿರ್ವಹಿಸಲು ಪರದಾಡುತ್ತಿವೆ. ಆದರೆ ನಮ್ಮಲ್ಲಿಯಂತೂ ವಿಪರೀತಕ್ಕಿಟ್ಟುಕೊಂಡಿದೆ. ಇದರಲ್ಲಿ ನನಗೇನು ಸಿಗುತ್ತೆ? ಬೇರೆಯವರಿಗೆ ಏನಾದರೆ ನನಗೇನು? ಎಂಬ  ಮನಃಸ್ಥಿತಿ ಇರುವ ಆಡಳಿತಗಾರರು ಸರ್ಕಾರದ ಚುಕ್ಕಾಣಿ ಹಿಡಿದರೆ ಇನ್ನೇನಾಗುತ್ತೆ ಎಂದು ಒಬಾಮ ಕಿಡಿಕಾರಿದ್ದಾರೆ.
     ಜೊತೆಗೆ ಇದಕ್ಕಾಗಿಯೇ ಜೋ ಬಿಡೆನ್ ಪರ ಪ್ರಚಾರ ಕಾರ್ಯದಲ್ಲಿ ನನಗೆಷ್ಟು ಸಾಧ್ಯವೋ ಅಷ್ಟೂ ಹೊತ್ತು ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿರುವ ಒಬಾಮಾ, ಈ ಬಾರಿ ನಡೆಯುವ ಅಧ್ಯಕ್ಷೀಯ ಚುನಾವಣೆಯು ಅತಿಮುಖ್ಯ. ಏಕೆಂದರೆ ನಾವು ಒಬ್ಬ ವ್ಯಕ್ತಿಯನ್ನೋ  ಅಥವಾ ಒಂದು ಪಕ್ಷವನ್ನೋ ಎದುರಿಸುತ್ತಿಲ್ಲ. ಹಲವು ವರ್ಷಗಳಿಂದ ನೆಲೆಯೂರಿರುವ ಸ್ವಾರ್ಥಪರ, ವಿವೇಚನೆಯಿಲ್ಲದ ಆಡಳಿತ, ಒಡೆದು ಆಳುವ ನೀತಿ, ಇನ್ನೊಬ್ಬರನ್ನು ಶತ್ರುಗಳು ಎಂದು ಪರಿಗಣಿಸುವ ಧೋರಣೆಯ ವಿರುದ್ಧ ನಾವು ಹೋರಾಡಬೇಕಿದೆ. ಅಮೆರಿಕ ಸಮಾಜ ಈಗಾಗಲೇ ಈ  ನೀತಿಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ ಎಂದು ಹೇಳಿದ್ದಾರೆ.
      ಒಬಾಮಾ ಹೇಳಿಕೆಯನ್ನು ಶ್ವೇತಭವನ ಅನಿರೀಕ್ಷಿತ ಎಂದು ವ್ಯಾಖ್ಯಾನಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತ ಭವನದ ವಕ್ತಾರೆ ಕೆಲಿಶ್ ಮೆಕ್‍ಎನಾನಿ, ಟ್ರಂಪ್ ವಿರುದ್ಧದ ವಾಗ್ದಂಡನೆ ನಿಲುವಳಿ ಮಂಡನೆಗೆ ಕಾರಣವಾದ ಉಕ್ರೇನ್ ವಿಚಾರಣೆಯನ್ನು ಪ್ರಸ್ತಾಪಿಸಿದರು.  'ಡೆಮಾಕ್ರಟ್ ಪಕ್ಷದವರು ಅಧ್ಯಕ್ಷ ಟ್ರಂಪ್ ಅವರನ್ನು ಹಣಿಯುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಟ್ರಂಪ್ ಚೀನಾದಿಂದ ಜನರು ಬರುವುದನ್ನು ನಿಬರ್ಂಧಿಸುತ್ತಿದ್ದರು. ಡೆಮಾಕ್ರಟ್ ಪಕ್ಷದವರು ಸಭೆಗಳನ್ನು ನಡೆಸಿ ಮುಂದಿನ ಕಾರ್ಯತಂತ್ರ ಚಿಂತನೆ ಮಾಡುತ್ತಿದ್ದಾಗ, ಟ್ರಂಪ್ ಅವರು ಪಿಪಿಇ  ಕಿಟ್, ವೆಂಟಿಲೇಟರ್‍ಗಳನ್ನು ಹೊಂದಿಸಲು ಮತ್ತು ಟೆಸ್ಟಿಂಗ್ ಸೌಲಭ್ಯ ಹೆಚ್ಚಿಸಲು ಕೆಲಸ ಮಾಡುತ್ತಿದ್ದರು ಎಂದು ಒಬಾಮಾ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.
    ಈ ಹಿಂದೆ ಆಡಳಿತ ನಿರ್ವಹಿಸಿದವರು ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲು ಹೆಚ್ಚು ಗಮನ ನೀಡಿರಲಿಲ್ಲ. ಹೀಗಾಗಿಯೇ ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನಡೆಯುಂಟಾಗಿದೆ ಎಂದು ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ಒಬಾಮಾ ನೇತೃತ್ವದ ಡೆಮಾಕ್ರಟಿಕ್ ಪಕ್ಷದ  ಆಡಳಿತವನ್ನು ಟೀಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries